ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: ಎಲೆ ಮುಟುರು ರೋಗ ನಿರ್ವಹಣೆ

ಟೊಮೆಟೊ ಬೆಳೆ; ಬಿಳಿ ನೊಣಗಳ ಹಾವಳಿ ನಿಯಂತ್ರಣ ಸಾಧ್ಯ-ತೋಟಗಾರಿಕೆ ಇಲಾಖೆ
Published 2 ಜುಲೈ 2024, 5:27 IST
Last Updated 2 ಜುಲೈ 2024, 5:27 IST
ಅಕ್ಷರ ಗಾತ್ರ

ಕೋಲಾರ: ಟೊಮೆಟೊ ಬೆಳೆಯಲ್ಲಿ ಉಂಟಾಗುವ ಎಲೆ ಮುಟುರು ರೋಗದ ಸಮಗ್ರ ನಿರ್ವಹಣೆಗಾಗಿ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಔಷಧೋಪಾಚಾರದ ಮಾರ್ಗದರ್ಶನ ನೀಡಲಾಗಿದೆ.

ರೋಗ ಮುಕ್ತ ಆರೋಗ್ಯವಂತ ಸಸಿಗಳನ್ನು ನಾಟಿಗೆ ಬಳಸಬೇಕು. ಕಡ್ಡಾಯವಾಗಿ 40 ಮೆಶ್ ನೈಲಾನ್ ಪರದೆ ಬಳಕೆ ಮಾಡಿರುವ ನರ್ಸರಿಗಳಿಂದ ಸಸಿ ಖರೀದಿಸಬೇಕು, ಋತುಮಾನಕ್ಕೆ ಶಿಫಾರಸ್ಸು ಮಾಡಿದ ತಳಿಗಳನ್ನೇ ಬೆಳೆಯಬೇಕು ಎಂದು ಸಲಹೆ ನೀಡಲಾಗಿದೆ.

ಭೂಮಿ ಸಿದ್ಧಗೊಳಿಸುವಾಗ ಎಕರೆಗೆ 15 ಟನ್‍ನಷ್ಟು ಕೊಟ್ಟಿಗೆ ಗೊಬ್ಬರವನ್ನು, 100 ಕೆ.ಜಿ. ಬೇವಿನ ಹಿಂಡಿ ಮತ್ತು 5 ಕಿ.ಗ್ರಾಂ ಟ್ರೈಕೋಡರ್ಮಾ ಹಾಗೂ 5 ಕಿ.ಗ್ರಾಂ ಸುಡೊಮೊನಸ್ ಜೈವಿಕ ರೋಗನಾಶಕಗಳಿಂದ ಪುಷ್ಟೀಕರಿಸಿ ಮಣ್ಣಿಗೆ ಸೇರಿಸುವುದು. ಅದೇ ರೀತಿ ನರ್ಸರಿಗಳಲ್ಲಿ ಸಸಿ ತಯಾರಿಸುವ ಮೊದಲು ಕೋಕೊಪಿಟ್‍ಗೆ ಬೇವಿನ ಹಿಂಡಿ, ಟ್ರೈಕೋಡರ್ಮಾ ಮತ್ತು ಸುಡೊಮೊನಸ್‍ಗಳಿಂದ ಪುಷ್ಠಿಕರಿಸಿ ಬಳಸಬೇಕು. ಮುಖ್ಯ ಬೆಳೆ ಕ್ಷೇತ್ರದಲ್ಲಿ ಸಿಲ್ವರ್ ಬಣ್ಣದ ಪ್ಲಾಸ್ಟಿಕ್ ಹೊದಿಕೆಯನ್ನು ಬಳಸಿ ಬಿಳಿ ನೊಣಗಳನ್ನು ಹಿಮ್ಮೆಟ್ಟಿಸುವುದು.

ಗಿಡಗಳ ಸದೃಢ ಬೆಳವಣಿಗೆಗಾಗಿ ಹಾಗೂ ನಂಜಾಣು ರೋಗ ನಿರೋಧಕ ಶಕ್ತಿ ಹೊಂದಲು ಸಾಗರಿಕಾ @ 2 ಮಿ.ಲೀ ಒಂದು ಲೀಟರ್ ನೀರಿಗೆ ಬೆರೆಸಿ ನಾಟಿ ಮಾಡಿದ 30, 45 ಹಾಗೂ 60 ದಿನಗಳಿಗೊಮ್ಮೆ ಮೂರು ಬಾರಿ ಸಿಂಪರಣೆ ಮಾಡಬೇಕು. ಆರಂಭಿಕ ಹಂತದಲ್ಲಿಯೇ ರೋಗಕ್ಕೆ ತುತ್ತಾದ ಸಸಿಗಳನ್ನು ಕಿತ್ತು ಸುಟ್ಟು ಹಾಕುವುದರಿಂದ ನಂಜಾಣು ರೋಗ ಹರಡುವಿಕೆಯನ್ನು ನಿಯಂತ್ರಣದಲ್ಲಿಡಬಹುದು. ಬಿಳಿನೊಣಗಳನ್ನು ನಿಯಂತ್ರಣದಲ್ಲಿಡಲು ನಾಟಿ ಮಾಡಿದ 15 ದಿನಗಳ ನಂತರ Imidacloprid 17.8 SL @ 0.4 ಮಿ.ಲೀ ಅಥವಾ Thiamethoxam 25 WG @0.3ಗ್ರಾಂ ಅಥವಾ Fipronil ಶೇ 5 SC @1.5 ಮಿ.ಲೀ ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು. ಅವಶ್ಯಕ್ಕನುಗುಣವಾಗಿ ಬೇವಿನ ಎಣ್ಣೆ ಆಧಾರಿತ ಕೀಟನಾಶಕಗಳೊಂದಿಗೆ 8ರಿಂದ 10 ದಿನಗಳಿಗೊಮ್ಮೆ ಈ ಕೆಳಗೆ ನಮೂದಿಸಿರುವ ಕೀಟನಾಶಕಗಳನ್ನು ಬದಲಿಸಿ ಸಿಂಪರಣೆ ಮಾಡುವುದು. Diafenthiuran 50 WP 1.2g/ ಪ್ರತಿ ಲೀಟರ್‌ ನೀರಿಗೆ ಅಥವಾ Flupyradifurona 17.09 SL @ 1ml/L ಅಥವಾ Imidacloprid 17.8 SL @ 0.4 ml/L ಅಥವಾ Acephate 75 SP @ 1.5gm/L ನೀರಿಗೆ ಅಥವಾ Fipronin 5% SC @ 1ml/L ಇವುಗಳ ಜೊತೆಗೆ Azadaracetin 1% @ 2 ml/L ನೀರಿಗೆ ಬೇರೆಸಿ ಸಿಂಪರಣೆ ಮಾಡಬೇಕು.

ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ Vegetable Special ಅನ್ನು 200 ಲೀಟರ್ ನೀರಿಗೆ 1 ಕೆ.ಜಿ ಬೆರೆಸಿ (5 ಗ್ರಾಂ/ಲೀಟರ್) ಜೊತೆಗೆ 10 ನಿಂಬೆಹಣ್ಣಿನ ರಸ ಮತ್ತು 10 ಶಾಂಪೂ ಶ್ಯಾಚೇಟ್‍ಗಳನ್ನು ಮಿಶ್ರಣ ಮಾಡಿ ಪ್ರತಿ ಎಕರೆಗೆ ಸಿಂಪರಣೆ ಮಾಡುವುದರಿಂದ ಹೆಚ್ಚಿನ ಇಳುವರಿ ಹಾಗೂ ಗುಣಮಟ್ಟದ ಕಾಯಿಗಳನ್ನು ಪಡೆಯಬಹುದು. ಟೊಮೆಟೊ ಬೆಳೆಯಲ್ಲಿ ಬಿಳಿನೊಣಗಳನ್ನು ಹಾಗೂ ಎಲೆ ಮುಟುರು ರೋಗವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ವ್ಯವಸ್ಥಿತ ಮತ್ತು ನಿಯಮಿತ ಮೇಲ್ವಿಚಾರಣೆಯೊಂದಿಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕಾಲಕಾಲಕ್ಕೆ ಕೈಗೊಳ್ಳಬೇಕು. ಆಗ ಬಿಳಿ ನೊಣಗಳ ಹಾವಳಿಯನ್ನು ನಿಯಂತ್ರಣದಲ್ಲಿಡಬಹುದೆಂದು ತೋಟಗಾರಿಕೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೋಟಗಾರಿಕೆ ಇಲಾಖೆಯಿಂದ ಔಷಧೋಪಾಚಾರದ ಸಲಹೆ ಶಿಫಾರಸ್ಸು ಮಾಡಿದ ತಳಿ ಬೆಳೆಯಲು ಸೂಚನೆ 40 ಮೆಶ್ ನೈಲಾನ್ ಪರದೆ ಬಳಕೆ ಮಾಡಿರುವ ನರ್ಸರಿಗಳಿಂದ ಸಸಿ ಖರೀದಿಸಿ

ಟೊಮೆಟೊ ಸಸಿ ನಾಟಿಗೆ ಮುನ್ನ…

ಟೊಮೆಟೊ ಸಸಿಗಳನ್ನು ನಾಟಿ ಮಾಡುವ 30 ದಿನಗಳ ಮುಂಚಿತವಾಗಿ ತೋಟದ ಸುತ್ತಲೂ ಮೆಕ್ಕೆಜೋಳ ಅಥವಾ ಮೇವಿನ ಜೋಳವನ್ನು ತಡೆ ಬೆಳೆಯಾಗಿ 4 ರಿಂದ 5 ಸಾಲು ದಟ್ಟವಾಗಿ ಬೆಳೆಯುವುದು ಅಥವಾ ತೋಟದ ಸುತ್ತಲೂ 40 ಮೆಶ್ ನೈಲಾನ್ ಪರದೆಯನ್ನು ಭೂಮಿಯಿಂದ 5 ಅಡಿ ಎತ್ತರದವರೆಗೆ ಕಟ್ಟುವುದರಿಂದ ಬಿಳಿ ನೊಣಗಳ ಹರಡುವಿಕೆ ನಿಯಂತ್ರಣವಾಗಿ ಎಲೆ ಮುಟುರು ರೋಗದ ಪ್ರಮಾಣ ಕಡಿಮೆಯಾಗುತ್ತದೆ. ಬಿಳಿ ನೊಣದ ಇತರೆ ಆಶ್ರಯ ಸಸಿಗಳಾದ ಪಾರ್ಥೇನಿಯಮ್ (Parthenium hysterophorus) ಕಡ್ಲೆಮುಳ್ಳು (Acanthospermum hispidum) ಅಲ್ಪಭೇದಿಸೊಪ್ಪು (Croton bonplandianus) ಗಬ್ಬುಸೊಪ್ಪು/ ಮೂಗಿತಿ ಸೊಪ್ಪು (Ageratum conizoides) ಭೇದಿಸೊಪ್ಪು (Euphorbia sps) ಮುಂತಾದ ಕಳೆ ಗಿಡಗಳನ್ನ ಕಿತ್ತು ನಾಶಪಡಿಸುವುದು. ಒಂದು ಬಾರಿ ಟೊಮೆಟೊ ಬೆಳೆದ ನಂತರ ಪರ್ಯಾಯ ಬೆಳೆಗಳಾದ ಮೆಕ್ಕೆಜೋಳ ರಾಗಿ ಮುಂತಾದವುಗಳನ್ನು ಬೆಳೆಯುವುದು. ಪ್ರತಿ ಎಕರೆಗೆ 15 ರಿಂದ 20 ಹಳದಿ ಅಂಟು ಬಲೆಗಳನ್ನು ಗಿಡದ ಎತ್ತರಕ್ಕಿಂತ 1 ಆಡಿ ಮೇಲೆ ಜಿಗ್ಜಾಗ್ ಮಾದರಿಯಲ್ಲಿ ತೂಗು ಹಾಕುವುದು ಹಾಗೂ 15 ದಿನಗಳಿಗೊಮ್ಮೆ ಬದಲಾಯಿಸುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT