ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಒತ್ತುವರಿ ತೆರವು : ಸ್ವಚ್ಛತಾ ಆಂದೋಲನದಲ್ಲಿ ಸಂಸದ ಮುನಿಸ್ವಾಮಿ ಎಚ್ಚರಿಕೆ

Last Updated 19 ಡಿಸೆಂಬರ್ 2019, 14:05 IST
ಅಕ್ಷರ ಗಾತ್ರ

ಕೋಲಾರ: ‘ಕೋಲಾರಮ್ಮ ಅಮಾನಿ ಕೆರೆಯಂಗಳ ಒತ್ತುವರಿ ಮಾಡಿರುವ ವ್ಯಕ್ತಿಗಳು ಸ್ವಯಂಪ್ರೇರಿತರಾಗಿ ಒತ್ತುವರಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಯಾವುದೇ ಮುಲಾಜಿಲ್ಲದೆ ಒತ್ತುವರಿ ತೆರವು ಮಾಡುತ್ತೇವೆ’ ಎಂದು ಸಂಸದ ಎಸ್.ಮುನಿಸ್ವಾಮಿ ಎಚ್ಚರಿಕೆ ನೀಡಿದರು.

ಜಿಲ್ಲಾಡಳಿತವು ₹ 8 ಕೋಟಿ ಅಂದಾಜು ವೆಚ್ಚದಲ್ಲಿ ಹಮ್ಮಿಕೊಂಡಿರುವ ಕೋಲಾರಮ್ಮ ಅಮಾನಿಕೆರೆ ಸ್ವಚ್ಛತಾ ಆಂದೋಲನಕ್ಕೆ ಇಲ್ಲಿ ಗುರುವಾರ ಚಾಲನೆ ನೀಡಿ ಮಾತನಾಡಿ, ‘ಕೋಲಾರಮ್ಮ ಕೆರೆ ಅಭಿವೃದ್ಧಿಪಡಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ಈ ಕಾರ್ಯಕ್ಕೆ ಸಂಸದರ ನಿಧಿಯಿಂದ ಅನುದಾನ ನೀಡಲಾಗುವುದು. ಜತೆಗೆ ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರೂ ಸಹಕರಿಸಲಿದ್ದಾರೆ’ ಎಂದರು.

‘ಎತ್ತಿನಹೊಳೆ ಮತ್ತು ಕೆ.ಸಿ ವ್ಯಾಲಿ ಯೋಜನೆ ಅನುದಾನವನ್ನು ಕೆರೆಯ ಸ್ವಚ್ಛತೆಗೆ ಬಳಸಿಕೊಳ್ಳಲಾಗುವುದು. ಈಗಾಗಲೇ 25 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಸಣ್ಣಪುಟ್ಟ ಒತ್ತುವರಿ ತೆರವಿಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು’ ಎಂದು ವಿವರಿಸಿದರು.

‘ಐತಿಹಾಸಿಕ ಕೆರೆಯನ್ನು ಅಭಿವೃದ್ಧಿಪಡಿಸಿ ಮಕ್ಕಳ ಉದ್ಯಾನ, ವ್ಯಾಯಾಮಕ್ಕೆ ವ್ಯವಸ್ಥೆ, ಮೂರ್ನಾಲ್ಕು ಕಡೆ ದ್ವೀಪ ಮಾಡಲಾಗುವುದು. ಪಕ್ಷಿಗಳಿಗೆ ಗಿಡ ಮರ ಬೆಳೆಸಲಾಗುವುದು. ಜತೆಗೆ ಕೆರೆ ದಂಡೆಯಲ್ಲಿ ನಡಿಗೆ ಪಥ ನಿರ್ಮಾಣ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.
‘ಕೋಲಾರಮ್ಮ ಕೆರೆಯಂಗಳದಲ್ಲಿ ಸಾಕಷ್ಟು ಗಿಡ ಮರ ಬೆಳೆದಿವೆ. ಜಾಲಪ್ಪ ಅವರು ಕೆರೆ ಅಭಿವೃದ್ಧಿಗಾಗಿ ಈ ಹಿಂದೆ ನಗರಸಭೆಗೆ ₹ 50 ಲಕ್ಷ ದೇಣಿಗೆ ನೀಡಿದ್ದರು. ಆದರೆ. ನಗರಸಭೆಯಲ್ಲಿನ ಹಿಂದಿನ ಆಡಳಿತ ಮಂಡಳಿ ಸರಿಯಾಗಿ ಕೆಲಸ ಮಾಡಲಿಲ್ಲ. ₹ 50 ಲಕ್ಷ ಏನಾಯಿತೆಂದು ಹಿಂದೆ ನಗರಸಭೆಯಲ್ಲಿ ಅಧಿಕಾರದಲ್ಲಿದ್ದವರೇ ಹೇಳಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

‘ಕೆರೆಗೆ ಸದ್ಯದಲ್ಲೇ ಕೆ.ಸಿ ವ್ಯಾಲಿ ಯೋಜನೆ ನೀರು ಹರಿದು ಬರಲಿದೆ. ಅಷ್ಟರೊಳಗೆ ಕೆರೆ ಸ್ವಚ್ಛಗೊಳಿಸಬೇಕು. ಒತ್ತುವರಿದಾರರು ಸ್ವಯಂಪ್ರೇರಿತರಾಗಿ ಜಾಗ ಖಾಲಿ ಮಾಡದಿದ್ದರೆ ಕೆರೆಗೆ ನೀರು ಬಂದು ಅದರ ಜಾಗನ್ನು ಅದೇ ಒತ್ತುವರಿ ಮಾಡಿಕೊಳ್ಳುತ್ತದೆ’ ಎಂದರು.

ಪ್ರವಾಸಿ ತಾಣ: ‘ಕೋಲಾರಮ್ಮ ಕೆರೆ ಸುಂದರೀಕರಣ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಕೆರೆಯಲ್ಲಿರುವ ಜಾಲಿ ಮರ ತೆರವುಗೊಳಿಸಲಾಗುವುದು. ಈ ಹಿಂದೆ ಅನಧಿಕೃತವಾಗಿ ಮಣ್ಣು ತೆಗೆದು ಹಳ್ಳ ಮಾಡಿರುವುದನ್ನು ಮುಚ್ಚಿ ಸಮತಟ್ಟುಗೊಳಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

‘ನಗರದ ಕೊಳಚೆ ನೀರು ಕೆರೆಗೆ ಸೇರುವುದನ್ನು ತಡೆದು, ಪ್ರತ್ಯೇಕವಾಗಿ ವ್ಯವಸ್ಥೆ ಮಾಡಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಹೋಗುವಂತೆ ಕ್ರಮ ಕೈಗೊಳ್ಳಲಾಗುವುದು. ಕೆರೆಗೆ ಕೆ.ಸಿ ವ್ಯಾಲಿ ನೀರು ಬರುವ ಹಿನ್ನೆಲೆಯಲ್ಲಿ ಸರ್ಕಾರ ಸ್ವಚ್ಛತೆಗೆ ಯೋಜನೆ ರೂಪಿಸಿದೆ. ಕೆ.ಸಿ ವ್ಯಾಲಿ ನೀರು ಸಂಗ್ರಹಿಸಿ ಕೆರೆಯನ್ನು ಪ್ರವಾಸಿ ತಾಣವಾಗಿ ಮಾಡಲಾಗುತ್ತದೆ’ ಎಂದು ವಿವರಿಸಿದರು.

‘ಈಗಾಗಲೇ 25 ಎಕರೆ ಕೆರೆ ಒತ್ತುವರಿ ತೆರವು ಮಾಡಲಾಗಿದೆ. ಹಲವೆಡೆ ಹಾಸ್ಟೆಲ್, ಸ್ಮಶಾನಕ್ಕೆ ಜಾಗ ನೀಡಲಾಗಿದೆ’ ಎಂದರು.

ಕೆರೆ ಸ್ವಚ್ಛತಾ ಕಾರ್ಯಕ್ಕೆ 40ಕ್ಕೂ ಹೆಚ್ಚು ಜೆಸಿಬಿ ವಾಹನಗಳನ್ನು ನಿಯೋಜಿಸಲಾಗಿದೆ. ಉಪ ವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್ ಶೋಭಿತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT