ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕಚೇರಿಗೆ ಭೂಮಿ ಅಲಭ್ಯ: ಶಾಸಕಿ ರೂಪಕಲಾ

ಜಮೀನು ಗುರುತಿಸಲು ಒಂದು ವಾರದ ಗಡುವು ನೀಡಿದ
Last Updated 1 ಜುಲೈ 2021, 5:02 IST
ಅಕ್ಷರ ಗಾತ್ರ

ಕೆಜಿಎಫ್‌: ಎಆರ್‌ಟಿಒ, ಎಪಿಎಂಸಿ, ಕಾರ್ಮಿಕ ಭವನ, ಆಸ್ಪತ್ರೆ ಮತ್ತು ಸ್ಮಶಾನಕ್ಕೆ ಜಾಗ ನಿಗದಿ ಮಾಡುವ ಸಂಬಂಧ ಒಂದು ವಾರದ ಸಮಯಾವಕಾಶ ನೀಡಲಾಗಿದ್ದು, ಅಷ್ಟರೊಳಗೆ ಜಾಗ ಗುರ್ತಿಸಿಕೊಡಬೇಕು ಎಂದು ಶಾಸಕಿ ಎಂ. ರೂಪಕಲಾ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.

ನಗರಸಭೆಯಲ್ಲಿ ಬುಧವಾರ ಕಂದಾಯ ಅಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದರು.

ಎಆರ್‌ಟಿಒ ಕಚೇರಿಗೆ ಆರು ಎಕರೆ ಜಾಗ ಬೇಕಾಗಿದೆ. ಬಹಳಷ್ಟು ದಿನಗಳಿಂದ ಜಾಗಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಈಗಿನ ಕಚೇರಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರ್ಕಾರಿ ಜಾಗ ಬೇಕಾಗಿದೆ. ಅಲ್ಲಿ ಕಚೇರಿ ಮತ್ತು ಟ್ರ್ಯಾಕ್‌ ರಚಿಸಲು ಸಾರಿಗೆ ಇಲಾಖೆ ಸಿದ್ಧವಾಗಿದೆ. ಕಾರ್ಮಿಕ ಭವನಕ್ಕೆ ಎರಡು ಎಕರೆ ಜಾಗದ ಅವಶ್ಯಕತೆ ಇದೆ. ಅದನ್ನು ಪುಕ್ಕಟೆಯಾಗಿ ಕಾರ್ಮಿಕ ಇಲಾಖೆಗೆ ನೀಡಬೇಕಾಗಿದೆ. ಕಾರ್ಮಿಕ ಕಚೇರಿ ಮತ್ತು ಭವನ ನಿರ್ಮಾಣ ಮಾಡಲಾಗುವುದು. ಪೀಲವಾರ ಸುತ್ತಮುತ್ತಲಿನ ಪ್ರದೇಶದಲ್ಲಿ ಎಪಿಎಂಸಿಗೆ 50 ಎಕರೆ ಭೂಮಿಯನ್ನು ಗುರ್ತಿಸಿಕೊಡಬೇಕು ಎಂದು ಸೂಚಿಸಿದರು.

ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರ ಜನ್ಮಸ್ಥಳವಾದ ಕ್ಯಾಸಂಬಳ್ಳಿಯಲ್ಲಿರುವ ಈಗಿನ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗುವುದು. ಕ್ಯಾಸಂಬಳ್ಳಿ ಸುತ್ತಮುತ್ತಲಿನ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಜಾಗ ಹುಡುಕಬೇಕು ಎಂದು ಹೇಳಿದರು.

‘ಘಟ್ಟಮಾದಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲು ಐದು ಎಕರೆ ಜಾಗವನ್ನು ನಂದಿ ಗೋಶಾಲೆ ಪಕ್ಕದಲ್ಲಿ ನೀಡಲಾಗಿದೆ. ಇದು ಗ್ರಾಮಕ್ಕೆ ದೂರವಾಗಿದೆ. ಯಾವುದೇ ದೂರು ಬರುವ ಸಾಧ್ಯತೆ ಇಲ್ಲ. ಆದರೆ ಈ ಜಾಗ ನಮ್ಮದು ಎಂದು ಬಿಜಿಎಂಎಲ್‌ನವರು ತಗಾದೆ ತೆಗೆಯುತ್ತಿದ್ದಾರೆ’ ಎಂದು ತಹಶೀಲ್ದಾರ್‌ ಕೆ.ಎನ್‌. ಸುಜಾತಾ ವಿವರಿಸಿದರು.

‘ನಂದಿ ಗೋಶಾಲೆಗೆ ಜಮೀನು ನೀಡುವಂತೆ ಕಂದಾಯ ಇಲಾಖೆಯಿಂದ ಯಾವುದೇ ಪ್ರಸ್ತಾವ ಜಿಲ್ಲಾಧಿಕಾರಿಗೆ ಸಲ್ಲಿಕೆಯಾಗಿಲ್ಲ’ ಎಂದು ಉಪ ತಹಶೀಲ್ದಾರ್ ಶ್ರೀನಿವಾಸ್‌
ಹೇಳಿದರು.

ಘಟ್ಟಮಾದಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದರಖಾಸ್ತಿನಲ್ಲಿ ಮಂಜೂರಾದ ಜಮೀನಿಗಿಂತ ಹೆಚ್ಚಾಗಿ ಜಮೀನುಗಳು ಪಹಣಿಯಲ್ಲಿ ಬಂದಿವೆ. ಅನೇಕ ಜನ ಬಿಜಿಎಂಎಲ್ ಜಾಗವನ್ನು ಒತ್ತುವರಿ ಮಾಡಿಕೊಂಡು ಪಹಣಿಯಲ್ಲಿ ಹತ್ತಿಸಿದ್ದಾರೆ ಎಂದು ಗ್ರಾಮ ಲೆಕ್ಕಿಗ ರಮೇಶ್‌ ಹೇಳಿದರು.

ತೊಂಗಲ್‌ ಗ್ರಾಮದಲ್ಲಿ ಸುಮಾರು 160 ಎಕರೆ ಸರ್ಕಾರಿ ಗೋಮಾಳವಿದೆ. ಸರ್ವೆ ಮಾಡಲು ಹೋದರೆ ಅಲ್ಲಿನ ಕೆಲವು ನಾಯಕರು ನಮ್ಮ ಮೇಲೆ ಹಲ್ಲೆ ನಡೆಸಲು ಬರುತ್ತಾರೆ ಎಂದು ರೆವಿನ್ಯೂ ಇನ್‌ಸ್ಪೆಕ್ಟರ್ ರಘುರಾಮಸಿಂಗ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT