ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಸ್ಪರ್ಶ್ ಕುಷ್ಠ ರೋಗ ಅರಿವು ಆಂದೋಲನ

ರೋಗಿಗಳು ಗುಣಮುಖರಾಗಬೇಕು: ಸಭೆಯಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಸೂಚನೆ
Last Updated 29 ಜನವರಿ 2021, 14:09 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಜ.30ರಿಂದ ಫೆ.13ರವರೆಗೆ ಸ್ಪರ್ಶ್ ಕುಷ್ಠ ರೋಗ ಅರಿವು ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಕುಷ್ಠ ರೋಗ ಮುಕ್ತ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮನವಿ ಮಾಡಿದರು.

ಸ್ಪರ್ಶ್ ಕುಷ್ಠ ರೋಗ ಅರಿವು ಆಂದೋಲನ ಸಂಬಂಧ ಇಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಕುಷ್ಠ ರೋಗವು ಪ್ರಾಚೀನ ಕಾಲದಿಂದ ಬಂದ ಕಾಯಿಲೆಯಾಗಿದೆ. ಈ ಕಾಯಿಲೆಯಿಂದ ಬಳಲುತ್ತಿರುವವರು ಸಂಕೋಚವಿಲ್ಲದೆ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದರು.

‘ಕುಷ್ಠ ರೋಗವನ್ನು ಭಯಾನಕ ರೋಗವೆಂದು ಬಿಂಬಿಸಲಾಗಿದೆ. ಅಲ್ಲದೇ, ಕುಷ್ಠ ರೋಗಿಗಳನ್ನು ಕೀಳಾಗಿ ಕಾಣುವ ವ್ಯವಸ್ಥೆಯಿದೆ. ಆದರೆ, ಈ ರೋಗವು ಗುಣಪಡಿಸಬಹುದಾದ ಕಾಯಿಲೆ. ಸಕಾಲದಲ್ಲಿ ಚಿಕಿತ್ಸೆ ಪಡೆದರೆ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು. ಇದು ದೀರ್ಘಾವಧಿ ರೋಗವಾಗಿದ್ದು, ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಔಷಧೋಪಚಾರ ಮಾಡಿದರೆ ಗುಣಪಡಿಸಬಹುದು’ ಎಂದು ಹೇಳಿದರು.

‘ಕುಷ್ಠ ರೋಗವು ಮೈಕೋ ಬ್ಯಾಕ್ಟೀರಿಯಂ ಲೆಪ್ರೆ ಎಂಬ ಸೂಕ್ಷ್ಮ ರೋಗಾಣುವಿನಿಂದ ಬರುತ್ತದೆ. ಈ ಕಾಯಿಲೆ ನಿರ್ಲಕ್ಷಿಸಿದರೆ ಅದು ಉಲ್ಬಣಗೊಂಡು ಚರ್ಮಕ್ಕೆ, ನರಗಳಿಗೆ, ಕಾಲುಗಳಿಗೆ ಮತ್ತು ಕಣ್ಣುಗಳಿಗೆ ಶಾಶ್ವತ ಹಾನಿಯುಂಟು ಮಾಡುತ್ತದೆ. ದೇಹದ ಭಾಗಗಳು ಸ್ವಾಧೀನ ಕಳೆದುಕೊಳ್ಳುತ್ತವೆ’ ಎಂದು ಮಾಹಿತಿ ನೀಡಿದರು.

ಹೆಚ್ಚು ಪರೀಕ್ಷೆ: ‘ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ಭೇಟಿ ನೀಡಿ ಕುಷ್ಠ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು. ಕುಷ್ಠ ರೋಗಿಗಳ ಪ್ರಕರಣ ಹೆಚ್ಚಿರುವ ಪ್ರದೇಶದಲ್ಲಿ ಹೆಚ್ಚು ಪರೀಕ್ಷೆ ನಡೆಸಬೇಕು. ಹೊಸ ಪ್ರಕರಣ ಗುರುತಿಸುವ ಜತೆಗೆ ಹಳೇ ರೋಗಿಗಳು ಗುಣಮುಖರಾಗಬೇಕು’ ಎಂದು ಸೂಚಿಸಿದರು.

‘ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ತಗ್ಗಿರುವುದರಿಂದ ಇನ್ನು ಮುಂದೆ ಎಲ್ಲಾ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಬೇಕು. ನಿಗದಿತ ಗುರಿಯಂತೆ ಕೋವಿಡ್‌ ಪರೀಕ್ಷೆ ಮಾಡಬೇಕು. ಸೋಂಕಿತರ ಸಂಪರ್ಕಕ್ಕೆ ಬಂದವರಿಗೆ ಕೋವಿಡ್‌ ಪರೀಕ್ಷೆ ನಡೆಸಬೇಕು. ಜತೆಗೆ ಕೋವಿಡ್‌ ಲಸಿಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು’ ಎಂದು ತಿಳಿಸಿದರು.

‘ಲಸಿಕೆ ಬಂದಿದ್ದರೂ ಕೋವಿಡ್‌ ಸುರಕ್ಷತಾ ಮಾರ್ಗಸೂಚಿ ಪಾಲನೆ ನಿರ್ಲಕ್ಷಿಸಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಜನರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಮತ್ತು ಅಂತರ ಕಾಯ್ದುಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳನ್ನು ಕೊರೊನಾ ಸೇವೆಯಿಂದ ಬಿಡುಗಡೆಗೊಳಿಸಬೇಕು. ಬಡ ಜನರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್‌ ವಿತರಿಸಬೇಕು’ ಎಂದು ಆದೇಶಿಸಿದರು.

ಲಕ್ಷಣಗಳು: ‘ದೇಹದ ಮೇಲೆ ಸ್ಪರ್ಶ ಜ್ಞಾನವಿಲ್ಲದ ತಿಳಿ ಬಿಳಿ, ಕೆಂಪು ಅಥವಾ ತಾಮ್ರ ಬಣ್ಣದ ಮಚ್ಚೆ ಉಂಟಾಗುವುದು, ಕೈ ಕಾಲು ಜೋಮು ಹಿಡಿಯುವುದು, ಮುಖ ಮತ್ತು ಕಿವಿ ಮೇಲೆ ಹೊಳಪು ಅಥವಾ ಗಂಟು ಕಾಣುವುದು, ಕಣ್ಣಿನ ರೆಪ್ಪೆ ಮುಚ್ಚಲು ಆಗದಿರುವುದು, ಮುಖ ವಿರೂಪವಾಗುವುದು, ಮೂಗು ಚಪ್ಪಟೆಯಾಗುವುದು, ದೃಷ್ಟಿ ಮಂದವಾಗುವುದು ಕುಷ್ಠ ರೋಗದ ಲಕ್ಷಣಗಳು’ ಎಂದು ಜಿಲ್ಲಾ ಕುಷ್ಠ ರೋಗ ನಿವಾರಣಾಧಿಕಾರಿ ಡಾ.ನಾರಾಯಣಸ್ವಾಮಿ ವಿವರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್‌.ವಿಜಯ್‌ಕುಮಾರ್, ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ ಡಾ.ವಿಜಯಕುಮಾರಿ, ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT