ಭಾನುವಾರ, ಜನವರಿ 26, 2020
28 °C

ಜಿಲ್ಲೆಯಲ್ಲಿ ಅಪರಾಧ ಪ್ರಮಾಣ ತಗ್ಗಲಿ: ಐಜಿಪಿ ಶರತ್‌ಚಂದ್ರ ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ ಬಲಪಡಿಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಹೋಂಡಾ ಕಂಪನಿಯೊಂದಿಗೆ ಕೈಜೋಡಿಸಿರುವುದು ಸ್ವಾಗತಾರ್ಹ’ ಎಂದು ಕೇಂದ್ರ ವಲಯ ಐಜಿಪಿ ಕೆ.ವಿ.ಶರತ್‌ಚಂದ್ರ ಅಭಿಪ್ರಾಯಪಟ್ಟರು.

ಹೋಂಡಾ ಮೋಟರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್‌ ಲಿಮಿಟೆಡ್ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲೆಯಲ್ಲಿ ತ್ವರಿತ ಪರಿಹಾರ ಮತ್ತು ತುರ್ತು ಸ್ಪಂದನೆಗಾಗಿ 50 ಸುಸಜ್ಜಿತ ಬೈಕ್‌ಗಳನ್ನು ಪೊಲೀಸ್‌ ಇಲಾಖೆಗೆ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಹೋಂಡಾ ಕಂಪನಿಯು ಸಾಮಾಜಿಕ ಕಾಳಜಿ ಹೊಂದಿರುವುದು ಶ್ಲಾಘನೀಯ. ತುರ್ತು ಸ್ಪಂದನೆ ಸೇವೆ ದೂರವಾಣಿ ಸಂಖ್ಯೆ 112ಕ್ಕೆ ಸಾರ್ವಜನಿಕರು ಕರೆ ಮಾಡಿದರೆ ಬೆಂಗಳೂರಿನ ಕೇಂದ್ರದಲ್ಲಿ ಯಾವ ಸ್ಥಳದಿಂದ ಕರೆ ಬಂದಿದೆಯೋ ಅವರಿಗೆ ನೆರವು ನೀಡುವಂತೆ ಸೂಚಿಸಲಾಗುವುದು. ಈ ವ್ಯವಸ್ಥೆಯನ್ನು ಈ ಬೈಕ್‌ಗಳಿಗೆ ಅಳವಡಿಸಲಾಗಿದೆ. ಅಲ್ಲದೇ, ಜಿಪಿಎಸ್ ಉಪಕರಣ ಅಳವಡಿಸಿರುವುದರಿಂದ ವಾಹನವಿರುವ ಸ್ಥಳವನ್ನು ಸುಲಭವಾಗಿ ಪತ್ತೆ ಮಾಡಬಹುದು’ ಎಂದರು.

‘ಮಹಿಳೆಯರು ಒಂಟಿಯಾಗಿ ಓಡಾಡುವಾಗ ಅನೇಕ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಅಪಾಯದ ಸಂದರ್ಭದಲ್ಲಿ ಮಹಿಳೆಯರಿಗೆ ತುರ್ತಾಗಿ ರಕ್ಷಣೆ ನೀಡಬೇಕು. ಹೋಂಡಾ ಕಂಪನಿ ಇಲಾಖೆಗೆ ನೀಡಿರುವ 50 ಬೈಕ್‌ಗಳನ್ನು ಜಿಲ್ಲೆಯ 6 ತಾಲ್ಲೂಕಿಗೆ ವಿತರಿಸಲಾಗುವುದು. ಈ ಬೈಕ್‌ಗಳಿಂದ ತುರ್ತು ಸೇವೆ ಕಲ್ಪಿಸುವ ಮೂಲಕ ಜಿಲ್ಲೆಯಲ್ಲಿ ಅಪರಾಧ ಪ್ರಮಾಣ ತಗ್ಗಿಸಬೇಕು’ ಎಂದು ಪೊಲೀಸ್ ಸಿಬ್ಬಂದಿಗೆ ಕಿವಿಮಾತು ಹೇಳಿದರು.

₹ 38.28 ಕೋಟಿ: ‘ಹೋಂಡಾ ಕಂಪನಿಯು ಕೋಲಾರ ಜಿಲ್ಲೆಯಲ್ಲಿರುವುದು ಹೆಮ್ಮೆಯ ವಿಷಯ. ಕಂಪನಿಯು ಉತ್ಪಾದನೆಯೊಂದಿಗೆ ಸಾಮಾಜಿಕ ಕಾಳಜಿ ಹೊಂದಿದೆ. ಕಾರ್ಪೊರೇಟ್ ಸಂಸ್ಥೆಯಾಗಿ ಜವಾಬ್ದಾರಿಯುತ ಸೇವೆ ಸಲ್ಲಿಸುವ ಮೂಲಕ ಜಿಲ್ಲಾಡಳಿತಕ್ಕೆ ಸಹಾಯಹಸ್ತ ಚಾಚಿದೆ. ವಿವಿಧ ಜನಪರ ಕಾರ್ಯಕ್ರಮಗಳಿಗೆ ₹ 38.28 ಕೋಟಿ ನೆರವು ನೀಡಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹೇಳಿದರು.

‘ಜಿಲ್ಲಾ ಕೇಂದ್ರದಲ್ಲಿ ಒಳಾಂಗಣ ಕ್ರೀಡಾಂಗಣ, ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣ, ಮಾಲೂರು ಕ್ರೀಡಾಂಗಣ, ಕೆಜಿಎಫ್ ಕ್ರೀಡಾಂಗಣ ಅಭಿವೃದ್ಧಿಗೆ ಹೋಂಡಾ ಕಂಪನಿ ಹಣಕಾಸು ನೆರವು ನೀಡಿದೆ. ಅಲ್ಲದೇ, ಬೀದಿ ದೀಪ, ಶಾಲಾ ಮಕ್ಕಳಿಗೆ ಬ್ಯಾಗ್, ಪುಸ್ತಕ, ಕಂಪ್ಯೂಟರ್‌ ವಿತರಿಸಿದೆ. ಆರೋಗ್ಯ ಶಿಬಿರ, ಸ್ಪರ್ಧಾತ್ಮಕ ಪರೀಕ್ಷೆಗೆ ನೆರವು, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸಹಕರಿಸುತ್ತಿದೆ’ ಎಂದು ಶ್ಲಾಘಿಸಿದರು.

1.50 ಲಕ್ಷ ಜನ ಸಾವು: ‘ಕಂಪನಿಯು 2013ರಲ್ಲಿ ಜಿಲ್ಲೆಯ ನರಸಾಪುರದಲ್ಲಿ ದ್ವಿಚಕ್ರ ವಾಹನ ಉತ್ಪಾದನಾ ಘಟಕ ಸ್ಥಾಪಿಸಿತು. ಈ ಘಟಕವು ಅತಿ ಹೆಚ್ಚು ದ್ವಿಚಕ್ರ ವಾಹನ ಉತ್ಪಾದಿಸುವ ಘಟಕವಾಗಿದೆ. ಕಂಪನಿಯು ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡುತ್ತದೆ. ಭಾರತದಲ್ಲಿ ಪ್ರತಿ ವರ್ಷ 1.50 ಲಕ್ಷ ಜನ ರಸ್ತೆ ಅಪಘಾತದಲ್ಲಿ ಮೃತಪಡುತ್ತಿದ್ದಾರೆ. ಅಂದರೆ ಪ್ರತಿ 4 ನಿಮಿಷಕ್ಕೆ ಒಬ್ಬರು ಅಪಘಾತದಲ್ಲಿ ಸಾಯುತ್ತಿದ್ದಾರೆ’ ಎಂದು ಹೋಂಡಾ ಮೋಟರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್‌ ಲಿಮಿಟೆಡ್ ನಿರ್ದೇಶಕ ಹರ್ಭಜನ್ ಸಿಂಗ್ ಕಳವಳ ವ್ಯಕ್ತಪಡಿಸಿದರು.

ಹೋಂಡಾ ಕಂಪನಿ ಉಪಾಧ್ಯಕ್ಷ ಹಿರೋಕಿ ಸುಭಾಚಿ, ಮುಖ್ಯಸ್ಥ ಹೆಡ್ ನವೀನ್ ಅಹವಾಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು