ಗುರುವಾರ , ಮೇ 13, 2021
24 °C
ಜೂನಿಯರ್‌ ಕಾಲೇಜು ವಿದ್ಯಾರ್ಥಿಗಳು– ಶಿಕ್ಷಕರಿಗೆ ಡಿಡಿಪಿಐ ಕಿವಿಮಾತು

ಕಳಪೆ ಫಲಿತಾಂಶದ ಕಳಂಕ ದೂರವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಇಲಾಖೆ ಹೊರ ತಂದಿರುವ ‘ನನ್ನನ್ನೊಮ್ಮೆ ಗಮನಿಸಿ’ ಪ್ರಶ್ನೋತ್ತರ ಕೋಠಿಯ ಪ್ರಯೋಜನ ಪಡೆದು ಫಲಿತಾಂಶ ಕುಸಿತಕ್ಕೆ ಜೂನಿಯರ್ ಕಾಲೇಜುಗಳ ಕಳಪೆ ಸಾಧನೆ ಕಾರಣವೆಂಬ ಕಳಂಕ ದೂರ ಮಾಡಿ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ಕಿವಿಮಾತು ಹೇಳಿದರು.

ಇಲ್ಲಿ ಸೋಮವಾರ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ‘ನನ್ನನ್ನೊಮ್ಮೆ ಗಮನಿಸಿ’ ಪ್ರಥಮ ಭಾಷೆ ಉರ್ದು ಹಾಗೂ ತೃತೀಯ ಭಾಷೆ ಕನ್ನಡದ ಪ್ರಶ್ನೋತ್ತರ ಕೋಠಿ, ಆರು ಸೆಟ್ ಪ್ರಶ್ನೆಪತ್ರಿಕೆಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

‘ಜಿಲ್ಲೆಯಲ್ಲಿ ಸಾಮಾನ್ಯವಾಗಿ ಜೂನಿಯರ್ ಕಾಲೇಜುಗಳ ಪ್ರೌಢ ಶಾಲಾ ವಿಭಾಗದಲ್ಲಿ ಉರ್ದು ಪ್ರಥಮ ಭಾಷೆ ಹಾಗೂ ಕನ್ನಡ ತೃತೀಯ ಭಾಷೆ ಇದೆ. ಪ್ರತಿ ವರ್ಷ ಜಿಲ್ಲೆಯ ಫಲಿತಾಂಶ ಕುಸಿತಕ್ಕೆ ಜೂನಿಯರ್ ಕಾಲೇಜುಗಳ ಕಳಪೆ ಸಾಧನೆಯೇ ಕಾರಣವೆಂಬ ಕಳಂಕವಿದೆ’ ಎಂದು ಹೇಳಿದರು.

‘ಈ ಬಾರಿ ಉರ್ದು ಪ್ರಥಮ ಭಾಷೆ ಹಾಗೂ ಕನ್ನಡ ತೃತೀಯ ಭಾಷೆಯಲ್ಲಿ ಮಕ್ಕಳು ಉತ್ತಮ ಸಾಧನೆ ಮಾಡಲು ಅನುಕೂಲವಾಗುವಂತೆ ‘ನನ್ನನ್ನೊಮ್ಮೆ ಗಮನಿಸಿ’ ಪ್ರಶ್ನೋತ್ತರ ಕೋಠಿಯನ್ನೇ ಮೊದಲು ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಉತ್ತಮ ಫಲಿತಾಂಶ ಗಳಿಸುವ ಮೂಲಕ ಜೂನಿಯರ್ ಕಾಲೇಜುಗಳಿಗೆ ಅಂಟಿರುವ ಕಳಂಕ ದೂರ ಮಾಡಬೇಕು’ ಎಂದರು.

‘ಕೋವಿಡ್ ಎರಡನೇ ಅಲೆಯ ಆತಂಕದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಖಂಡಿತ ನಡೆಯುತ್ತದೆ. ಶಾಲೆಗಳಲ್ಲಿ ಶಿಕ್ಷಕರು ಈಗಾಗಲೇ ಪಠ್ಯ ಮುಗಿಸಿ ಪುನರ್ಮನನ ಮಾಡುತ್ತಿದ್ದಾರೆ. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಪಠ್ಯಕ್ರಮ ಕಡಿತಗೊಳಿಸಲಾಗಿದೆ. ಪರೀಕ್ಷೆಯಲ್ಲಿ ಪ್ರಶ್ನೆಗಳು ಸುಲಭವಾಗಿರಲಿದ್ದು, ವಿದ್ಯಾರ್ಥಿಗಳು ಹೆಚ್ಚು ಅಂಕ ಸಾಧನೆ ಮಾಡಬೇಕು’ ಎಂದು ತಿಳಿಸಿದರು.

ಫೋನ್‌ ಇನ್: ‘ಹಿಂದಿನ ವರ್ಷ ಕೇವಲ ಪ್ರಶ್ನೆಕೋಠಿ ಮಾತ್ರ ಮಾಡಿಕೊಡಲಾಗಿತ್ತು. ಆಗ ಕೋವಿಡ್ ಸಂಕಷ್ಟದ ನಡುವೆ ಉತ್ತರಗಳಿಗಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದನ್ನು ಗಮನಿಸಿ ಈ ಬಾರಿ ಪ್ರಶ್ನೋತ್ತರ ಕೋಠಿ ಸಿದ್ಧಪಡಿಸಿ ನೀಡಲಾಗಿದೆ’ ಎಂದು ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ವಿವರಿಸಿದರು.

‘ಹಿಂದಿನ ವರ್ಷ ಕೋವಿಡ್ ಹಿನ್ನೆಲೆಯಲ್ಲಿ 10 ಬಾರಿ ಫೋನ್‌–ಇನ್ ಕಾರ್ಯಕ್ರಮ ನಡೆಸಿದಾಗ ಸಾಕಷ್ಟು ಮಕ್ಕಳು ‘ನನ್ನನ್ನೊಮ್ಮೆ ಗಮನಿಸಿ’ ಪ್ರಶ್ನೆಕೋಠಿಗೆ ಉತ್ತರ ಸಿಗುತ್ತಿಲ್ಲ ಎಂದು ಪ್ರಶ್ನೆ ಕೇಳಿದ್ದರು. ಈ ಬಾರಿ ಅಂತಹ ಸಮಸ್ಯೆ ಎದುರಾಗದಂತೆ ಪ್ರಶ್ನೋತ್ತರ ಕೋಠಿ ಸಿದ್ಧಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು

‘ಕನ್ನಡ, ಆಂಗ್ಲ ಮಾಧ್ಯಮದ ಜತೆಗೆ ಪ್ರಥಮ ಭಾಷೆ ಕನ್ನಡ, ಉರ್ದು, ಇಂಗ್ಲೀಷ್, ತೃತೀಯ ಭಾಷೆ ಕನ್ನಡ, ಹಿಂದಿ ಸೇರಿದಂತೆ ಎಲ್ಲಾ ಮಕ್ಕಳಿಗೂ ಅನುಕೂಲವಾಗುವಂತೆ ಪ್ರಶ್ನೋತ್ತರ ಕೋಠಿ ರೂಪಿಸಲಾಗಿದೆ. ಇದನ್ನು ಶಾಲೆಗಳಲ್ಲಿ ಸದ್ಬಳಕೆ ಮಾಡಲು ಶಿಕ್ಷಕರು ಶ್ರಮ ವಹಿಸಬೇಕು’ ಎಂದು ಸೂಚಿಸಿದರು.

‘ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಫೋನ್‌–ಇನ್ ಕಾರ್ಯಕ್ರಮ ಆರಂಭಿಸಲಾಗಿದೆ. ಈಗಾಗಲೇ ಮೊದಲ ಫೋನ್‌–ಇನ್ ಕಾರ್ಯಕ್ರಮಕ್ಕೆ ಮಕ್ಕಳು, ಪೋಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಫೋನ್‌–ಇನ್ ಕಾರ್ಯಕ್ರಮ ನಡೆಸಲಾಗುತ್ತದೆ’ ಎಂದು ಭರವಸೆ ನೀಡಿದರು.

ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ವಿಷಯ ಪರಿವೀಕ್ಷಕರಾದ ಶಶಿವಧನ, ಗಾಯತ್ರಿ, ಕೃಷ್ಣಪ್ಪ, ಇಸಿಒ ಸಿರಾಜುದ್ದೀನ್, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮುಖ್ಯ ಶಿಕ್ಷಕ ನಾರಾಯಣಸ್ವಾಮಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.