ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊಗೆ ಬೆಂಬಲ ಬೆಲೆ ಘೋಷಿಸಲಿ: ಎಪಿಎಂಸಿ ಅಧ್ಯಕ್ಷರಿಗೆ ರೈತ ಸಂಘ ಸದಸ್ಯರ ಮನವಿ

ಎಪಿಎಂಸಿ ಅಧ್ಯಕ್ಷರಿಗೆ ರೈತ ಸಂಘ ಸದಸ್ಯರ ಮನವಿ ಸಲ್ಲಿಕೆ
Last Updated 26 ಏಪ್ರಿಲ್ 2020, 14:06 IST
ಅಕ್ಷರ ಗಾತ್ರ

ಕೋಲಾರ: ಟೊಮೆಟೊಗೆ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಭಾನುವಾರ ಎಪಿಎಂಸಿ ಅಧ್ಯಕ್ಷ ಡಿ.ಎಲ್‌.ನಾಗರಾಜ್‌ ಅವರಿಗೆ ಮನವಿ ಸಲ್ಲಿಸಿದರು.

‘ಕೊರೊನಾ ಸೋಂಕಿನ ಕಾರಣಕ್ಕೆ ಲಾಕ್‌ಡೌನ್‌ ಜಾರಿಯಾಗಿರುವ ಹಿನ್ನೆಲೆಯಲ್ಲಿ ಸರಕು ಸಾಗಣೆ ಸೇವೆಯಲ್ಲಿ ವ್ಯತ್ಯಯವಾಗಿ ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿದೆ. ಬಡ್ಡಿ ಸಾಲ ಮಾಡಿ ಟೊಮೆಟೊ ಬೆಳೆದಿರುವ ಜಿಲ್ಲೆಯ ರೈತರು ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಟೊಮೆಟೊ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಸಂಘಟನೆ ಸದಸ್ಯರು ದೂರಿದರು.

‘ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯಲಾಗುತ್ತದೆ. ಜಿಲ್ಲೆಯ ಸುಮಾರು 9 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೊ ಬೆಳೆಯಿದೆ. ಜಿಲ್ಲೆಯಿಂದ ಹೊರ ರಾಜ್ಯ ಹಾಗೂ ವಿದೇಶಕ್ಕೆ ಟೊಮೆಟೊ ರಫ್ತಾಗುತ್ತದೆ. ಆದರೆ, ಈಗ ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೆಟೊ ಕೇಳುವವರಿಲ್ಲ’ ಎಂದು ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

‘ಬರದಿಂದ ಕಂಗಾಲಾಗಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಟೊಮೆಟೊ ಬೆಲೆ ಕುಸಿತವು ದೊಡ್ಡ ಪೆಟ್ಟು ಕೊಟ್ಟಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಟೊಮೆಟೊ ಬೆಲೆ ದಿನೇದಿನೇ ಇಳಿಮುಖವಾಗುತ್ತಿದೆ. ಬೆಲೆ ಕುಸಿತದ ಕಾರಣಕ್ಕೆ ರೈತರು ಟೊಮೆಟೊ ಕೊಯ್ಲು ಮಾಡುವುದನ್ನೇ ನಿಲ್ಲಿಸಿದ್ದು, ಜಮೀನುಗಳಲ್ಲಿ ಟೊಮೆಟೊ ಗಿಡದಲ್ಲೇ ಹಣ್ಣಾಗಿ ಕೆಳಗೆ ಉದುರಿ ಕೊಳೆಯಲಾರಂಭಿಸಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಫ್ತು ಸ್ಥಗಿತ: ‘ರೈತರಿಗೆ ಜಮೀನಿನಿಂದ ಮಾರುಕಟ್ಟೆಗೆ ಟೊಮೆಟೊ ತರಲು ಹಾಗೂ ಮಾರುಕಟ್ಟೆಯಿಂದ ಹೊರ ರಾಜ್ಯ, ಜಿಲ್ಲೆಗಳಿಗೆ ಟೊಮೊಟೊ ಸಾಗಿಸಲು ವಾಹನಗಳು ಸಿಗುತ್ತಿಲ್ಲ. ಹೀಗಾಗಿ ಹೊರ ರಾಜ್ಯಗಳಿಗೆ ಟೊಮೆಟೊ ರಫ್ತು ಸ್ಥಗಿತಗೊಂಡಿದೆ. ಏಕಾಏಕಿ ಸಾಗಣೆ ವೆಚ್ಚ ಹೆಚ್ಚಿಸಲಾಗಿದ್ದು, ರೈತರ ಸಮಸ್ಯೆ ಕೇಳುವವರಿಲ್ಲ’ ಎಂದು ಸಂಘಟನೆ ಸದಸ್ಯರು ಕಿಡಿಕಾರಿದರು.

‘ಸಂಕಷ್ಟದಲ್ಲಿರುವ ಟೊಮೆಟೊ ಬೆಳೆಗಾರರನ್ನು ಸರ್ಕಾರ ರಕ್ಷಣೆ ಮಾಡಬೇಕು. ಎಪಿಎಂಸಿ ಆವರ್ತ ನಿಧಿ ಹಣದಿಂದ ಟೊಮೆಟೊಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಈ ಸಂಬಂಧ ಜಿಲ್ಲಾಡಳಿತ ಹಾಗೂ ಎಪಿಎಂಸಿ ಆಡಳಿತ ಮಂಡಳಿಯು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಮನವಿ ಮಾಡಿದರು.

ಸಂಘಟನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಶ್ರೀನಿವಾಸ್, ರೈತ ವೆಂಕಟೇಶಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT