ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವಿಗೆ ಧಾವಿಸಲು ಮುಖ್ಯಮಂತ್ರಿಗೆ ಪತ್ರ

ಲಾಕ್‌ಡೌನ್‌ನಿಂದ ರೈತರಿಗೆ ಸಂಕಷ್ಟ: ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಹೇಳಿಕೆ
Last Updated 1 ಮೇ 2021, 16:36 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್‌ ಹಾಗೂ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಧಾವಿಸುವಂತೆ ಮುಖ್ಯಮಂತ್ರಿ ಮತ್ತು ಕೃಷಿ ಸಚಿವರಿಗೆ ಪತ್ರ ಬರೆಯುತ್ತೇನೆ’ ಎಂದು ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ತಿಳಿಸಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆ ತಾಂಡವಾಡುತ್ತಿದೆ. ಮತ್ತೊಂದೆಡೆ ಲಾಕ್‌ಡೌನ್‌ನಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋಲಾರ ಎಪಿಎಂಸಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ತರಕಾರಿ, ಹೂವು ಖರೀದಿಯಾಗದೆ ಕೊಳೆಯುತ್ತಿವೆ. ಆದರೆ, ರೈತರ ನೆರವಿಗೆ ಧಾವಿಸಬೇಕಾದ ಸರ್ಕಾರ ಕಣ್ತೆರೆದು ನೋಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲಾಡಳಿತವು ಜಿಲ್ಲೆಯ ರೈತರ ಸಮಸ್ಯೆಗಳ ವಾಸ್ತವಾಂಶವನ್ನು ಸರ್ಕಾರದ ಗಮನಕ್ಕೆ ತರುತ್ತಿಲ್ಲ. ಜಿಲ್ಲಾಧಿಕಾರಿಯು ರೈತರ ಕಷ್ಟ ಅರಿತು ಎಪಿಎಂಸಿಗೆ ಭೇಟಿ ಕೊಟ್ಟು ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆಯಲ್ಲಿ ನಾಲ್ಕೈದು ದಿನದಿಂದ ತರಕಾರಿ ಮತ್ತು ಹೂವು ಹರಾಜಾಗಿಲ್ಲ. ಆದರೂ ಯಾವುದೇ ಅಧಿಕಾರಿ ಎಪಿಎಂಸಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಿಲ್ಲ’ ಎಂದು ಕಿಡಿಕಾರಿದರು.

‘ಸಂಸದ ಎಸ್.ಮುನಿಸ್ವಾಮಿ ಅವರು ಎಪಿಎಂಸಿಯಲ್ಲಿನ ಸಮಸ್ಯೆ ಬಗ್ಗೆ ಗಮನ ಹರಿಸಬೇಕು. ರಾಜ್ಯ ಸರ್ಕಾರ ಶೀಘ್ರವೇ ರೈತರ ನೆರವಿಗೆ ಧಾವಿಸಬೇಕು. ಈ ನಿಟ್ಟಿನಲ್ಲಿ ಸಂಸದರು ಮುಖ್ಯಮಂತ್ರಿ, ಕೃಷಿ ಸಚಿವರ ಮೇಲೆ ಒತ್ತಡ ತಂದು ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.

‘ಜಿಲ್ಲಾಧಿಕಾರಿ ಮತ್ತು ಸಂಸದರು ಜಿಲ್ಲೆಯ ಎಪಿಎಂಸಿ ಸಮಸ್ಯೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಇಲ್ಲಿನ ವಾಸ್ತವಾಂಶವನ್ನು ಸರ್ಕಾರಕ್ಕೆ ಗಮನಕ್ಕೆ ತಂದು ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ಕೊಡಿಸಬೇಕು’ ಎಂದು ಕೋರಿದರು.

ಪ್ಯಾಕೇಜ್‌ ಘೋಷಿಸಿ: ‘ನನಗೆ ಕೊರೊನಾ ಸೋಂಕು ತಗುಲಿದ್ದ ಕಾರಣ ಏಳೆಂಟು ದಿನಗಳಿಂದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಕೆಲ ರೈತರು ಹಾಗೂ ವರ್ತಕರು ಎಪಿಎಂಸಿಯಲ್ಲಿನ ಸಮಸ್ಯೆ ಬಗ್ಗೆ ನನಗೆ ಕರೆ ಮಾಡಿ ಮಾತನಾಡಿದ್ದಾರೆ. ನಾನು ಮನೆಯಲ್ಲಿ ಕ್ವಾರಂಟೈನ್‌ ಆಗಿರುವುದರಿಂದ ಹೊರಗ ಬಂದು ಅವರ ಪರ ಧ್ವನಿ ಎತ್ತಲು ಸಾಧ್ಯವಾಗುತ್ತಿಲ್ಲ’ ಎಂದರು.

‘ಕೋಲಾರ ಎಪಿಎಂಸಿಗೆ ಹೊರ ರಾಜ್ಯಗಳಿಂದ ಸಾಕಷ್ಟು ವ್ಯಾಪಾರಿಗಳು ಬಂದು ತರಕಾರಿ ಖರೀದಿಸುತ್ತಾರೆ. ಕೋವಿಡ್‌ ಹಿನ್ನೆಲೆಯಲ್ಲಿ ಸರ್ಕಾರ ಅಂತರರಾಜ್ಯ ಗಡಿ ಹಾಗೂ ಜಿಲ್ಲಾ ಗಡಿಗಳಲ್ಲಿ ಕೆಲವು ಕಠಿಣ ನಿರ್ಬಂಧ ವಿಧಿಸಿದೆ. ಹೀಗಾಗಿ ಹೊರ ರಾಜ್ಯಗಳ ವರ್ತಕರು ಜಿಲ್ಲೆಯ ಎಪಿಎಂಸಿಗೆ ಬರುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣು ಕೇಳುವವರು ಇಲ್ಲದಂತಾಗಿದೆ’ ಎಂದು ತಿಳಿಸಿದರು.

‘ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಲಾಕ್‌ಡೌನ್‌ನಿಂದ ಎಪಿಎಂಸಿಗಳಿಗೆ ರಿಯಾಯಿತಿ ಕೊಟ್ಟು ಬೇರೆಡೆಗೆ ತರಕಾರಿ ಸಾಗಿಸಲು ಅವಕಾಶ ನೀಡಬೇಕು, ರಾಜ್ಯ ಸರ್ಕಾರದ ಪರವಾಗಿ ಪ್ರತಿನಿಧಿಯೊಬ್ಬರನ್ನು ಜಿಲ್ಲೆಗೆ ಕಳುಹಿಸಿ ನಷ್ಟ ಅನುಭವಿಸಿರುವ ರೈತರೊಂದಿಗೆ ಚರ್ಚಿಸಿ ಬೆಂಬಲ ಬೆಲೆ ಕೊಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT