ಮಂಗಳವಾರ, ಮಾರ್ಚ್ 2, 2021
18 °C
ಪ್ರತಿಭಾ ಪುರಸ್ಕರ ಸಮಾರಂಭ

ಲೆಟರ್‌ಹೆಡ್‌ ಮುಖಂಡರಿಗೆ ಭವಿಷ್ಯವಿಲ್ಲ: ಸಂಸದ ಮುನಿಸ್ವಾಮಿ ಅಭಿಪ್ರಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಕೊಡಿಸುವವರು ಮಾತ್ರ ಸಮುದಾಯದ ನಾಯಕರಾಗಲು ಸಾಧ್ಯವೇ ಹೊರತಾಗಿ ಲೆಟರ್‌ಹೆಡ್‌ ಮುಖಂಡರಿಗೆ ಸಮಾಜದಲ್ಲಿ ಭವಿಷ್ಯವಿಲ್ಲ’ ಎಂದು ಸಂಸದ ಎಸ್.ಮುನಿಸ್ವಾಮಿ ಅಭಿಪ್ರಾಯಪಟ್ಟರು.

ಜಿಲ್ಲಾ ಸವಿತಾ ಸಮಾಜ ಸಂಘವು ಸಮುದಾಯದ ವಿದ್ಯಾರ್ಥಿಗಳಿಗೆ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಗ್ರಾ.ಪಂ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ. ‘ಸರ್ಕಾರದ ಸವಲತ್ತುಗಳ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿಸಬೇಕು. ಭವಿಷ್ಯದ ಜನಪ್ರತಿನಿಧಿಗಳಾಗಲು ಇತಿಹಾಸದಲ್ಲಿ ಉಳಿಯುವಂತಹ ಕೆಲಸ ಮಾಡಬೇಕು’ ಎಂದರು.

‘ಇತ್ತೀಚಿನ ದಿನಗಳಲ್ಲಿ ಸಮುದಾಯದಲ್ಲಿ ರಾಜಕೀಯ ಸೇರ್ಪಡೆಗೊಂಡು ವಿವಿಧ ಪಕ್ಷಗಳ ಬೆಂಬಲಿತ ಸಂಘಗಳು ರಚನೆಯಾಗಿ ಸಂಘಟನೆ ವಿಭಜನೆಯಾಗುತ್ತಿದೆ. ಸಮುದಾಯದಲ್ಲಿ ರಾಜಕೀಯ ಬೆರೆಸಬಾರದು. ಸಮುದಾಯದ ಎಲ್ಲರೂ ಒಂದೇ ವೇದಿಕೆಯಲ್ಲಿ ಸಂಘಟನೆಯಾದರೆ ಮಾತ್ರ ಅಭಿವೃದ್ದಿ ಸಾಧ್ಯ’ ಎಂದು ಸಲಹೆ ನೀಡಿದರು.

‘ಸವಿತಾ ಸಮುದಾಯದವರು ಯಾವುದೇ ಮಂಗಳ ಕಾರ್ಯಕ್ರಮ ನಡೆಯುವುದಿಲ್ಲ. ಸವಿತಾ ಸಮುದಾಯದ ವೃತ್ತಿಯನ್ನು ಇಂದು ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಆಧುನೀಕರಣಗೊಳಿಸಿ ಎಲ್ಲಾ ಸಮುದಾಯದವರು ಮಾಡುತ್ತಿದ್ದಾರೆ. ಶ್ರಮಿಕ ವೃತ್ತಿ ಯಾವುದೇ ಜಾತಿಗೆ ಸೀಮಿತವಾಗಿಲ್ಲ’ ಎಂದು ಹೇಳಿದರು.

ರಾಜಕೀಯ ಸಲ್ಲದು: ‘ವಿದ್ಯಾರ್ಥಿಗಳು ತಮಗೆ ಶಿಕ್ಷಣ ಕೊಡಿಸಲು ಶ್ರಮಿಸುವ ತಂದೆ ತಾಯಿಯನ್ನು ದೇವರಂತೆ ಕಾಣಬೇಕು. ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮಸ್ಥರ ನಂಬಿಕೆ ಉಳಿಸಿಕೊಳ್ಳುವಂತಹ ಕೆಲಸ ಮಾಡಬೇಕು’ ಎಂದು ನಗರಸಭೆ ಸದಸ್ಯ ಬಿ.ಎಂ.ಮುಬಾರಕ್ ಸಲಹೆ ನೀಡಿದರು.

‘ಶಿಸ್ತು ಇಲ್ಲದ ಜೀವನ ನೀರಿಲ್ಲದ ಬಾವಿಯಂತೆ, ಗುರಿಯಿಲ್ಲದ ಶಿಕ್ಷಣ ಗರಿ ಇಲ್ಲದ ಹಕ್ಕಿಗಳಂತೆ. ವ್ಯಕ್ತಿಯ ಗುಣ ಗುರುತಿಸುವಲ್ಲಿ ಮತ್ಸರ ತೋರಬಾರದು. ಒಳ್ಳೆಯ ಕೆಲಸ ಗುರುತಿಸಬೇಕು. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲದು’ ಎಂದರು.

‘ಶಿಕ್ಷಣ, ಸಂಘಟನೆ, ಹೋರಾಟದ ಅಂಬೇಡ್ಕರ್ ಧ್ಯೇಯದಿಂದ ದೇಶದಲ್ಲಿ ಸ್ವಾತಂತ್ರ್ಯ ಉಳಿಯಲು ಸಾಧ್ಯವಾಗಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಪ್ರಾಪ್ತಿಯಾಗಿರುವ ಹಕ್ಕುಗಳಿಂದಾಗಿ ಶೋಷಿತ ಸಮುದಾಯಗಳಲ್ಲಿ ಆತ್ಮಸ್ಥೆರ್ಯ ಮತ್ತು ಸ್ವಾಭಿಮಾನ ಬೆಳೆದು ಸಮಾಜಮುಖಿಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತಿದೆ’ ಎಂದು ಹೇಳಿದರು.

‘ಸಂಸದ ಮುನಿಸ್ವಾಮಿ ಅವರು ನಗರದ ಕೆರೆಗಳನ್ನು ಸ್ವಚ್ಛಗೊಳಿಸುವ ಕೆಲಸ ಕೈಗೆತ್ತಿಕೊಂಡಿದ್ದಾರೆ. ಅವರ ಒಳ್ಳೆಯ ಕೆಲಸಗಳನ್ನು ಜನ ಗುರುತಿಸುತ್ತಾರೆ. ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ಸಿದ್ದರಾಮಯ್ಯ ಅವರು ಶೋಷಿತ ಸಮುದಾಯಗಳನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಯೋಜನೆಗಳನ್ನು ಜಾರಿಗೆ ತಂದದ್ದು ಇತಿಹಾಸದಲ್ಲಿ ದಾಖಲೆಯಾಗಿದೆ’ ಎಂದು ಸ್ಮರಿಸಿದರು.

ಮೀಸಲಾತಿ ನೀಡಿ: ‘ಸವಿತಾ ಸಮುದಾಯವು ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ. ಈ ಸಮುದಾಯವನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಗುಂಪಿಗೆ ಸೇರ್ಪಡೆ ಮಾಡಿ ಮೀಸಲಾತಿ ನೀಡಿದರೆ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದು ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್‌ ಅಧ್ಯಕ್ಷ ಕೆ.ವಿ ಸುರೇಶ್‌ಕುಮಾರ್ ಅಭಿಪ್ರಾಯಪಟ್ಟರು.

ರಾಜ್ಯ ಸವಿತಾ ಸಮಾಜ ಉಪಾಧ್ಯಕ್ಷ ಕೃಷ್ಣ, ಕಾರ್ಯಾಧ್ಯಕ್ಷ ಎಸ್.ಕಿರಣ್‌ಕುಮಾರ್‌, ಖಜಾಂಜಿ ಆರ್.ನಾರಾಯಣ್, ಸಹ ಕಾರ್ಯದರ್ಶಿ ಎಂ.ಕೃಷ್ಣಪ್ಪ, ಜಿಲ್ಲಾ ಘಟಕದ ಗೌರವಾಧ್ಯಕ್ಷ ಎಸ್.ಮಂಜುನಾಥ್, ಅಧ್ಯಕ್ಷ ಶಂಕರ್, ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಎಂ.ಎಸ್.ಮುತ್ತುರಾಜ್ ಪಾಲ್ಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು