ಶನಿವಾರ, ಸೆಪ್ಟೆಂಬರ್ 18, 2021
26 °C

ಲೆಟರ್‌ಹೆಡ್‌ ದುರ್ಬಳಕೆ: ಮುನಿಯಪ್ಪ ವಿರುದ್ಧ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ತಾವು ಹಾಲಿ ಸಂಸದರೆಂದು ಲೆಟರ್‌ಹೆಡ್‌ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಸಮನ್ವಯ ಸಮಿತಿ ಸದಸ್ಯ ವಿಜಯ್‌ಕುಮಾರ್ ಆರೋಪಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮುನಿಯಪ್ಪ ಅವರು ಸಂಸದರಾಗಿದ್ದ ಅಷ್ಟೂ ದಿನ ಕ್ಷೇತ್ರದಲ್ಲಿ ಸುಳ್ಳು ಹೇಳಿಕೊಂಡು ಜನರನ್ನು ಯಾಮಾರಿಸಿದರು. ಹಿಂದಿನ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಮಾಜಿ ಆಗಿದ್ದರೂ ಅವರಿಗೆ ಸಂಸದ ಪದವಿ ಮೇಲಿನ ಆಸೆ ಕಡಿಮೆಯಾಗಿಲ್ಲ’ ಎಂದು ವ್ಯಂಗ್ಯವಾಡಿದರು.

‘ಮುನಿಯಪ್ಪ ಅವರು ರೈಲ್ವೆ ಕೋಚ್ ಕಾರ್ಖಾನೆ ಸ್ಥಾಪನೆ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇತ್ತೀಚೆಗೆ ತಮ್ಮ ಲೆಟರ್‌ಹೆಡ್‌ನಲ್ಲಿ ಮನವಿ ಸಲ್ಲಿಸಿದ್ದಾರೆ. ಆ ಲೆಟರ್‌ಹೆಡ್‌ನ ಮೇಲ್ಭಾಗದಲ್ಲಿ ಹಾಲಿ ಸಂಸದರೆಂಬ ಉಲ್ಲೆಖವಿದೆ. ರಾಜಕೀಯವಾಗಿ ನಿರುದ್ಯೋಗಿಯಾಗಿರುವ ಅವರು ಜನರನ್ನು ಯಾಮಾರಿಸದೆ ಗೌರವಯುತವಾಗಿ ನಡೆದುಕೊಳ್ಳಲಿ’ ಎಂದರು.

‘ಮುನಿಯಪ್ಪ ಅವರು ಸತತ 27 ವರ್ಷ ಸಂಸದರಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳೆಷ್ಟು ಎಂಬುದು ಜನರಿಗೆ ಗೊತ್ತಿದೆ. ಚುನಾವಣೆ ಘೋಷಣೆಗೆ ಕೆಲವೇ ತಾಸು ಬಾಕಿ ಇರುವಾಗ ರಾಜಕೀಯ ಲಾಭಕ್ಕಾಗಿ ರೈಲ್ವೆ ಕೋಚ್ ಕಾರ್ಖಾನೆಗೆ ಅಡಿಗಲ್ಲು ಹಾಕಿ ಜನರನ್ನು ಯಾಮಾರಿಸಿದರು. ಅವರ ಅವಧಿಯಲ್ಲಿ ಆಗಿರುವ ಘನ ಕಾರ್ಯದಿಂದ ಜಿಲ್ಲೆಯ ವಿವಿಧೆಡೆ ರೈಲ್ವೆ ಕೆಳ ಸೇತುವೆಗಳಲ್ಲಿ ಮಳೆ ನೀರು ನಿಂತು ಜನರಿಗೆ ತೊಂದರೆ ಆಗುತ್ತಿದೆ’ ಎಂದು ಟೀಕಿಸಿದರು.

ಕೊಡುಗೆ ಶೂನ್ಯ: ‘ಸಂಸದರಾಗಿ ಜಿಲ್ಲೆಗೆ ಮುನಿಯಪ್ಪ ಅವರ ಕೊಡುಗೆ ಶೂನ್ಯ. ಅವರು ಮಾಜಿ ಸಂಸದರಾಗಿ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರೆ ಅಭ್ಯಂತರವಿಲ್ಲ. ಆದರೆ, ಹಾಲಿ ಸಂಸದರು ಇರುವಾಗ ಸಂಸದರೆಂದು ಲೆಟರ್‌ಹೆಡ್‌ನಲ್ಲಿ ಉಲ್ಲೇಖಿಸಿ ಮನವಿ ಪತ್ರ ಸಲ್ಲಿಸಿರುವುದು ಖಂಡನೀಯ’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.

‘ಮುನಿಯಪ್ಪ ಅವರು ಹಾಲಿ ಸಂಸದರೆಂದು ಎಷ್ಟು ಜನರಿಗೆ ಲೆಟೆರ್‌ಹೆಡ್‌ ಕೊಟ್ಟು ಯಾಮಾರಿಸಿದ್ದಾರೋ ಗೊತ್ತಿಲ್ಲ. ಕ್ಷೇತ್ರದ ಹಾಲಿ ಸಂಸದ ಎಸ್.ಮುನಿಸ್ವಾಮಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರವನ್ನು ಮಾದರಿಯಾಗಿಸಲು ಹಗಲಿರುಳು ದುಡಿಯುತ್ತಿದ್ದಾರೆ. ಇದನ್ನು ಸಹಿಸದೆ ಹಾಲಿ ಸಂಸದರೆಂದು ಮನವಿಪತ್ರ ಕೊಟ್ಟಿರುವ ಮುನಿಯಪ್ಪ ಅವರು ಸಾರ್ವಜನಿಕರಲ್ಲಿ ಕ್ಷಮೆ ಯಾಚಿಸದಿದ್ದರೆ ಜಿಲ್ಲೆಯಾದ್ಯಂತ ಹೋರಾಟ ನಡೆಸುತ್ತೇವೆ’ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಾಲಾಜಿ ಎಚ್ಚರಿಕೆ ನೀಡಿದರು.

ಬಿಜೆಪಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ನಾಗರಾಜ್, ಎಸ್ಸಿ ಮೋರ್ಚಾ ಅಧ್ಯಕ್ಷ ಅಂಬರೀಶ್, ವಕ್ಫ್‌ಬೋರ್ಡ್‌ ಅಧ್ಯಕ್ಷ ಜಾಮೀಲ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.