ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರವಾನಗಿ ಉಲ್ಲಂಘನೆ: 7 ಬಸ್ ಜಪ್ತಿ

Last Updated 8 ಅಕ್ಟೋಬರ್ 2021, 15:13 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾ ಕೇಂದ್ರದಲ್ಲಿ ಶುಕ್ರವಾರ ದಿಢೀರ್ ಕಾರ್ಯಾಚರಣೆ ನಡೆಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್‌ಟಿಒ) ಪರವಾನಗಿ ನಿಯಮ ಉಲ್ಲಂಘಿಸಿ ಸರ್ಕಾರಕ್ಕೆ ತೆರಿಗೆ ವಂಚಿಸಿ ಸಂಚರಿಸುತ್ತಿದ್ದ 7 ಖಾಸಗಿ ಬಸ್‌ಗಳನ್ನು ಜಪ್ತಿ ಮಾಡಿದ್ದಾರೆ.

ಶಾಲಾ ಮಕ್ಕಳನ್ನು ಕರೆದೊಯ್ಯಲು ಪರವಾನಗಿ ಪಡೆದಿದ್ದ ಖಾಸಗಿ ಬಸ್‌ಗಳ ಮಾಲೀಕರು ಖಾಸಗಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದರು. ಬಸ್‌ಗಳ ಮಾಲೀಕರು ಈ ರೀತಿ ಪರವಾನಗಿ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ಸಾರ್ವಜನಿಕರು ಆರ್‌ಟಿಒ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.

ಈ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದ ಆರ್‌ಟಿಒ ಇನ್‌ಸ್ಪೆಕ್ಟರ್‌ ಸುರೇಶ್‌ಗೌಡ, ಸುಧೀಂದ್ರ ಹಾಗೂ ಸಿಬ್ಬಂದಿ ತಂಡವು, ಕಂಪನಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಸಂದರ್ಭದಲ್ಲೇ ಖಾಸಗಿ ಬಸ್‌ಗಳನ್ನು ಜಪ್ತಿ ಮಾಡಿದ್ದಾರೆ.

ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳಿಗೆ ಸರ್ಕಾರ ಕಡಿಮೆ ತೆರಿಗೆ ನಿಗದಿಪಡಿಸಿದೆ. ಖಾಸಗಿ ಕಂಪನಿಗಳು ಅಥವಾ ಕೈಗಾರಿಕೆಗಳ ಕಾರ್ಮಿಕರನ್ನು ಕರೆದೊಯ್ಯವ ವಾಹನಗಳಿಗೆ ವಾಣಿಜ್ಯ ತೆರಿಗೆ ವಿಧಿಸಲಾಗುತ್ತದೆ. ವಾಣಿಜ್ಯ ತೆರಿಗೆ ಪಾವತಿ ಉಳಿಸಲು ಅಡ್ಡ ದಾರಿ ಹಿಡಿದಿದ್ದ ಬಸ್‌ ಮಾಲೀಕರು ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳೆಂದು ಆರ್‌ಟಿಒ ಕಚೇರಿಗೆ ಸುಳ್ಳು ದಾಖಲೆಪತ್ರ ಸಲ್ಲಿಸಿ ಪರವಾನಗಿ ಪಡೆದಿದ್ದರು.

‘ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳಿಗೆ ತಿಂಗಳಿಗೆ ₹ 1 ಸಾವಿರ ತೆರಿಗೆಯಿದೆ. ವಾಣಿಜ್ಯ ಉದ್ದೇಶದ ವಾಹನಗಳ ತೆರಿಗೆ ತಿಂಗಳಿಗೆ ₹ 75 ಸಾವಿರವಿದೆ. ಶಾಲಾ ಮಕ್ಕಳನ್ನು ಕರೆದೊಯ್ಯುವ ಉದ್ದೇಶಕ್ಕೆ ಪರವಾನಗಿ ಪಡೆದಿದ್ದ 7 ಖಾಸಗಿ ಬಸ್‌ ಮಾಲೀಕರು ತಿಂಗಳಿಗೆ ತಲಾ ₹ 74 ಸಾವಿರ ವಂಚನೆ ಮಾಡಿದ್ದಾರೆ. ಸಿಬ್ಬಂದಿಯ ಕಣ್ಣು ತಪ್ಪಿಸಿ ನಡೆಯುತ್ತಿದ್ದ ಈ ದಂದೆಯಿಂದ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ವಂಚನೆಯಾಗಿದೆ’ ಎಂದು ಆರ್‌ಟಿಒ ಇನ್‌ಸ್ಪೆಕ್ಟರ್‌ ಸುರೇಶ್‌ಗೌಡ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT