ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಸಂಸದ ಎಸ್‌.ಮುನಿಸ್ವಾಮಿಗೆ ಪ್ರಾಣ ಬೆದರಿಕೆ ಕರೆ

ಪೊಲೀಸ್‌ ರಕ್ಷಣೆ ಕೊಡುತ್ತೇವೆ: ಗೃಹ ಸಚಿವರ ಹೇಳಿಕೆ
Last Updated 20 ಮಾರ್ಚ್ 2022, 15:58 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲಾ ಕೇಂದ್ರದ ಕ್ಲಾಕ್‌ಟವರ್‌ನಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದ ವಿಚಾರವಾಗಿ ಸಂಸದ ಎಸ್‌.ಮುನಿಸ್ವಾಮಿ ಮತ್ತು ಅವರ ಕುಟುಂಬ ಸದಸ್ಯರಿಗೆ ಪ್ರಾಣ ಬೆದರಿಕೆ ಕರೆ ಬಂದಿದೆ. ಈ ರೀತಿ ಬೆದರಿಕೆ ಹಾಕಿರುವವರನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕ್ಲಾಕ್‌ಟವರ್‌ನಲ್ಲಿ ಧ್ವಜಾರೋಹಣವಾದ ನಂತರ ಜೀವ ಬೆದರಿಕೆ ಕರೆ ಬಂದಿರುವ ಸಂಗತಿಯನ್ನು ಸಂಸದರು ನನ್ನ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದ್ದೇನೆ’ ಎಂದರು.

‘ಸಂಸದರು, ಶಾಸಕರು ಅಥವಾ ಜನಪ್ರತಿನಿಧಿಗಳಿಗೆ ಕರೆ ಮಾಡಿ ಭಯಪಡಿಸುವುದು ಈ ಕಾಲದಲ್ಲಿ ಸಾಧ್ಯವಿಲ್ಲ. ಇದನ್ನು ಮಟ್ಟ ಹಾಕುತ್ತೇವೆ. ಈ ರೀತಿ ಭಯೋತ್ಪಾದನೆ ಮಾಡುವವರನ್ನು ಸುಮ್ಮನೆ ಬಿಡುವುದಿಲ್ಲ. ಎಲ್ಲಿಂದ ಮತ್ತು ಹೇಗೆ ಬೆದರಿಕೆ ಕರೆ ಬಂದಿವೆ ಎಂಬುದನ್ನು ಪತ್ತೆ ಹಚ್ಚುತ್ತೇವೆ. ಇಂತಹ ದುಷ್ಕೃತ್ಯಗಳ ವಿರುದ್ಧ ನಮ್ಮ ಪೊಲೀಸ್‌ ಅಧಿಕಾರಿಗಳು ಗಟ್ಟಿಯಾಗಿ ನಿಲ್ಲುತ್ತಾರೆ. ಈ ರೀತಿಯ ಕಳಂಕಗಳನ್ನು ಸರಿಪಡಿಸುತ್ತೇವೆ’ ಎಂದು ತಿಳಿಸಿದರು.

‘ಪೊಲೀಸರು, ಸಂಸದರಿಗೆ ಮತ್ತು ಅವರು ಕುಟುಂಬ ಸದಸ್ಯರಿಗೆ ರಕ್ಷಣೆ ಕೊಡುತ್ತಾರೆ. ಜನಪ್ರತಿನಿಧಿಗಳ ಪ್ರಾಣ ತೆಗೆಯುವ ಮಟ್ಟಿಗೆ ಭಯೋತ್ಪಾದನೆ ನಡೆಯುತ್ತದೆ ಎಂದರೆ ನಮ್ಮಲ್ಲಿ ಪೊಲೀಸ್‌ ವ್ಯವಸ್ಥೆ ಇದೆ ಎಂಬುದನ್ನು ಅವರಿಗೆ ತೋರಿಸುತ್ತೇವೆ’ ಎಂದು ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT