ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಾಲ

ಸಾಲ ಸದ್ಬಳಕೆ ಮಾಡಿಕೊಳ್ಳಿ: ಶಾಸಕ ನಾರಾಯಣಸ್ವಾಮಿ ಕಿವಿಮಾತು
Last Updated 6 ಫೆಬ್ರುವರಿ 2020, 13:51 IST
ಅಕ್ಷರ ಗಾತ್ರ

ಬಂಗಾರಪೇಟೆ: ‘ಮನೆ ಕಟ್ಟುವುದು ಕಷ್ಟ. ಆದರೆ, ಮನೆ ಹಾಳು ಮಾಡುವುದು ಸುಲಭ ಎಂಬ ಸತ್ಯ ಅರಿತು ಸಹಕಾರ ಸಂಘದ ಅಭಿವೃದ್ಧಿಗೆ ಚ್ಯುತಿ ಬಾರದಂತೆ ನಿರ್ದೇಶಕರು ಮುನ್ನಡೆಸಬೇಕು’ ಎಂದು ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಕಿವಿಮಾತು ಹೇಳಿದರು.

ತಾಲ್ಲೂಕಿನ ಹುದುಕುಳ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಗುರುವಾರ ನಡೆದ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ‘ಹುದುಕುಳ ಸಹಕಾರ ಸಂಘಕ್ಕೆ ಮರುಜೀವ ಬಂದಿದ್ದು, ಈ ಭಾಗದ ಮಹಿಳೆಯರು ಹಾಗೂ ರೈತರ ಸ್ವಾವಲಂಬಿ ಬದುಕಿಗೆ ಸಾಲ ಸೌಲಭ್ಯ ಸಿಗುವಂತಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಸಂಘವನ್ನು ಉಳಿಸಿ ಬೆಳೆಸುವುದು ಎಲ್ಲರ ಹೊಣೆ. ಸಂಘದಲ್ಲಿ ಸಣ್ಣಪುಟ್ಟ ವಿವಾದವಿದ್ದರೆ ಬೀದಿಗೆ ತರದೆ ಸಭೆ ನಡೆಸಿ ಪರಿಹರಿಸಿಕೊಳ್ಳಿ. ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ದಾಖಲೆಪತ್ರಗಳ ಸಿದ್ಧತೆಯೊಂದಿಗೆ ಅಲೆದು ಚಪ್ಪಲಿ ಸವೆಯುತ್ತವೆಯೇ ಹೊರತು ಸಾಲ ಸಿಗುವುದಿಲ್ಲ. ಆದರೆ, ಡಿಸಿಸಿ ಬ್ಯಾಂಕ್ ಯಾವುದೇ ಭದ್ರತೆಯಿಲ್ಲದೇ ಮನೆ ಬಾಗಿಲಲ್ಲೇ ಬಡ್ಡಿರಹಿತ ಸಾಲ ನೀಡುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಿ’ ಎಂದು ಸಲಹೆ ನೀಡಿದರು.

‘ಮಹಿಳೆಯರನ್ನು ಮೀಟರ್ ಬಡ್ಡಿ ದಂಧೆಯಿಂದ ಪಾರು ಮಾಡಲು ಡಿಸಿಸಿ ಬ್ಯಾಂಕ್ ಸಂಕಲ್ಪ ಮಾಡಿದೆ. ಈ ಹಿನ್ನೆಲೆಯಲ್ಲಿ ಬಡ್ಡಿರಹಿತ ಸಾಲ ನೀಡುತ್ತಿದೆ. ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲಕ್ಕೆ ಕಟ್ಟುವಷ್ಟು ಬಡ್ಡಿ ಹಣವನ್ನು ಡಿಸಿಸಿ ಬ್ಯಾಂಕಿಗೆ ಪಾವತಿಸಿದರೆ ಸಾಲ ತೀರಿ ಅಸಲು ಹಣ ನಿಮ್ಮ ಆಸ್ತಿಯಾಗುತ್ತದೆ’ ಎಂದರು.

‘ಸಹಕಾರಿ ಸಂಘಗಳು ಜನರ ವಿಶ್ವಾಸ ಉಳಿಸಿಕೊಳ್ಳಬೇಕು. ನಿರ್ದೇಶಕರ ನಡುವಿನ ಭಿನ್ನಾಭಿಪ್ರಾಯವಿದ್ದರೆ 4 ಗೋಡೆ ಮಧ್ಯೆ ಪರಿಹರಿಸಿಕೊಳ್ಳಿ. ಬೀದಿಗೆ ಬಂದು ಸಂಘದ ಗೌರವ ಹಾಳು ಮಾಡಿ ಅಭಿವೃದ್ಧಿಗೆ ಕುತ್ತು ತರಬೇಡಿ. ಸಮಸ್ಯೆ ಪರಿಹರಿಸಲು ಸಾಧ್ಯವಾಗದಿದ್ದರೆ ನನ್ನ ಗಮನಕ್ಕೆ ತನ್ನಿ’ ಎಂದು ಮನವಿ ಮಾಡಿದರು.

ಕೆರೆಗೆ ನೀರು: ‘ಕೆ.ಸಿ ವ್ಯಾಲಿ ಯೋಜನೆ ನೀರು 20 ದಿನದೊಳಗೆ ಹಂಚಾಳ ಗ್ರಾಮದ ಕೆರೆಗೆ ಬರಲಿದೆ. ಈಗಾಗಲೇ ಚೆಕ್ ಡ್ಯಾಮ್ ಮತ್ತು ಜಾಕ್ವೆಲ್‌ ಸಿದ್ಧವಾಗಿವೆ. ಕೆರೆಯಲ್ಲಿ ನೀರು ಸಂಗ್ರಹವಾದರೆ ಸುತ್ತಮುತ್ತಲ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಅಂತರ್ಜಲ ಮಟ್ಟ 1,500 ಅಡಿ ಆಳಕ್ಕೆ ಕುಸಿದಿದ್ದು, ಕೊಳವೆ ಬಾವಿಗಳಿಗೆ ಕೆ.ಸಿ ವ್ಯಾಲಿ ನೀರಿನಿಂದ ಮರುಜೀವ ಬರಲಿದೆ. ಜತೆಗೆ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುತ್ತವೆ. ಕೃಷಿಯ ಗತವೈಭವ ಮರುಕಳಿಸುವ ಮೂಲಕ ರೈತರಿಗೆ ಬಿಡುವಿಲ್ಲದ ಕೆಲಸ ಸಿಗಲಿದೆ. ಹೈನುಗಾರಿಕೆಗೆ ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. ಹಾಲು ಉತ್ಪಾದನೆ ಹೆಚ್ಚಿ ಹಾಲಿನ ಸಂಘಗಳು ಅರ್ಥಿಕ ಸುಧಾರಣೆ ಕಾಣುತ್ತವೆ’ ಎಂದರು.

ದೇವಾಲಯದಂತೆ: ‘ಸೊಸೈಟಿಯಲ್ಲಿ ಬದ್ಧತೆಯಿಂದ ಕೆಲಸ ಮಾಡಿ. ಡಿಸಿಸಿ ಬ್ಯಾಂಕ್ ದೇವಾಲಯವಿದ್ದಂತೆ ಎಂದು ಅರಿತು ಸಾಲ ಮರುಪಾವತಿಸಿ ಮತ್ತಷ್ಟು ಸಾಲ ಸೌಲಭ್ಯ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಿ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಆಶಿಸಿದರು.

‘ಸಾಲ ಮಂಜೂರಾತಿಗಾಗಿ ಕಟ್ಟುವ ಷೇರು ಮತ್ತು ಠೇವಣಿ ಹಣವನ್ನು ಸಾಲ ಮುಕ್ತವಾದ ನಂತರ ವಾಪಸ್ ಪಡೆಯಬಹುದು. ಈ ಬಗ್ಗೆ ಸಂಘದ ಕಾರ್ಯದರ್ಶಿಗಳು, ನಿರ್ದೇಶಕರು ಎಲ್ಲರಿಗೂ ಸಮರ್ಪಕ ಮಾಹಿತಿ ನೀಡಬೇಕು. ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಬೇಡ. ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಮಾಡಿದರೆ ಯಾರಿಗೂ ಉಳಿಗಾಲವಿಲ್ಲ’ ಎಂದು ಹೇಳಿದರು.

ವತಿಯಿಂದ 60 ಮಹಿಳಾ ಸಂಘಗಳ ಸದಸ್ಯರಿಗೆ ₹ 3.31 ಕೋಟಿ ಬಡ್ಡಿರಹಿತ ಸಾಲ ವಿತರಿಸಲಾಯಿತು. ವಕೀಲ ಕೃಷ್ಣರೆಡ್ಡಿ, ಸಂಘದ ಅಧ್ಯಕ್ಷ ಸುಂದರಶರ್ಮ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದರಾಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT