ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮನ್ನಾ: 1,761 ರೈತರು ಅನರ್ಹ

ಮರು ಪಾವತಿಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಮನವಿ
Last Updated 21 ಅಕ್ಟೋಬರ್ 2020, 15:28 IST
ಅಕ್ಷರ ಗಾತ್ರ

ಕೋಲಾರ: ‘ಸರ್ಕಾರದ ಮಾನದಂಡದ ಅನ್ವಯ ಸಾಲ ಮನ್ನಾಗೆ ಅರ್ಹರಲ್ಲದ ಅವಿಭಜಿತ ಕೋಲಾರ ಜಿಲ್ಲೆಯ 1,761 ರೈತರು ಶೀಘ್ರವೇ ಸಾಲ ಮರು ಪಾವತಿಸಬೇಕು’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಮನವಿ ಮಾಡಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರವು ರೈತರ ₹ 1 ಲಕ್ಷದವರೆಗಿನ ಸಾಲ ಮನ್ನಾ ಮಾಡಿ ಆದೇಶ ಹೊರಡಿಸಿತ್ತು. ಸರ್ಕಾರದ ಮಾನದಂಡದ ಪ್ರಕಾರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 22,745 ರೈತರ ಸಾಲ ಮನ್ನಾ ಆಗಿದೆ’ ಎಂದು ಹೇಳಿದರು.

‘ಸಾಲ ಮನ್ನಾಕ್ಕೆ ಸರ್ಕಾರ ಹಲವು ಮಾನದಂಡ ನಿಗದಿಪಡಿಸಿತ್ತು. ಈ ಮಾನದಂಡ ಪ್ರಕಾರ ಕೋಲಾರ ಜಿಲ್ಲೆಯ 10,698 ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ 12,047 ರೈತರಿಗೆ ಸಾಲ ಮನ್ನಾದ ಪ್ರಯೋಜನ ಸಿಕ್ಕಿದೆ. ಸರ್ಕಾರದ ಮಾನದಂಡದ ಪ್ರಕಾರ ಸಾಲ ಮನ್ನಾಗೆ ಅರ್ಹರಲ್ಲದೆ ಕೋಲಾರ ಜಿಲ್ಲೆಯ 812 ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ 949 ರೈತರು ಈಗ ಸಾಲ ಮರು ಪಾವತಿಸಬೇಕಿದೆ’ ಎಂದರು.

‘ಬ್ಯಾಂಕ್ ದಿವಾಳಿಯಾಗಿದ್ದಾಗ ಯಾರಿಗೂ ಸಾಲ ನೀಡದ ಕಾರಣ ಹಿಂದಿನ ಸರ್ಕಾರಗಳು ಘೋಷಿಸಿದ್ದ ಸಾಲ ಮನ್ನಾ ಸೌಲಭ್ಯದಿಂದ ಜಿಲ್ಲೆಯ ರೈತರು ವಂಚಿತರಾಗಿದ್ದರು. ಸಾಲ ಮನ್ನಾ ಆದ ಎಲ್ಲಾ ರೈತರಿಗೂ ಮರು ಸಾಲ ನೀಡಿದ್ದೇವೆ. ಕೆಸಿಸಿ ಸಾಲ ಶೇ 100ರಷ್ಟು ಮರು ಪಾವತಿಯಾಗಿದೆ’ ಎಂದು ವಿವರಿಸಿದರು.

ಬೆರಳ ತುದಿಯಲ್ಲಿ ಸೇವೆ: ‘ದೇಶದಲ್ಲೇ ಮೊದಲ ಬಾರಿಗೆ ಮೈಕ್ರೊ ಎಟಿಎಂ ಮೂಲಕ ರೈತರು, ಮಹಿಳೆಯರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸಿದ್ದೇವೆ. ಮುಂದೆ ಆನ್‌ಲೈನ್‌ ಮೂಲಕ ಜನರಿಗೆ ಬೆರಳ ತುದಿಯಲ್ಲೇ ಬ್ಯಾಂಕಿಂಗ್ ಸೇವೆ ತಲುಪಿಸುವ ಪ್ರಯತ್ನ ನಡೆದಿದ್ದು, ಈ ಸಂಬಂಧ ಭಾರತೀಯ ರೀಸರ್ವ್‌ ಬ್ಯಾಂಕ್‌ಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಗ್ರಾಹಕರು ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆಯುವ ಜತೆಗೆ ಇದೇ ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕು. ಕೇಂದ್ರ ಸರ್ಕಾರದ ದುಡಿಮೆ ಬಂಡವಾಳ ಯೋಜನೆಯಡಿ ಎಂಪಿಸಿಎಸ್‌ಗಳ ಮೂಲಕ 2 ಸಾವಿರ ಮಂದಿಗೆ ಸಾಲದ ಗುರಿ ನೀಡಲಾಗಿತ್ತು. ಈ ನಿಗದಿತ ಗುರಿಯನ್ನು ಮೀರಿ 2,900 ಮಂದಿಗೆ ಸಾಲ ನೀಡಲಾಗಿದೆ. ಎಂಪಿಸಿಎಸ್‌ಗಳ ವಹಿವಾಟನ್ನು ಡಿಸಿಸಿ ಬ್ಯಾಂಕ್‌ಗೆ ವರ್ಗಾಯಿಸಬೇಕು’ ಎಂದು ಕೋರಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ಎಂ.ಎಲ್.ಅನಿಲ್‌ಕುಮಾರ್‌, ವ್ಯವಸ್ಥಾಪಕ ನಿರ್ದೇಶಕ ರವಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT