ಶುಕ್ರವಾರ, ಮೇ 27, 2022
22 °C
ನಾಮಪತ್ರ ಸಲ್ಲಿಕೆಗೆ ದಿನಗಣನೆ: ಮುಖಂಡರಿಗೆ ಆಕಾಂಕ್ಷಿಗಳ ದುಂಬಾಲು

ವಿಧಾನ ಪರಿಷತ್‌ ಚುನಾವಣೆಗೆ ಟಿಕೆಟ್‌ಗೆ ತೀವ್ರ ಲಾಬಿ: ಅಭ್ಯರ್ಥಿ ಆಯ್ಕೆ ಕಗ್ಗಂಟು

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡಲು ಪ್ರಮುಖ ಮೂರೂ ಪಕ್ಷಗಳಲ್ಲಿ ಕಸರತ್ತು ಜೋರಾಗಿದ್ದು, ಟಿಕೆಟ್‌ ಆಕಾಂಕ್ಷಿಗಳು ತೀವ್ರ ಲಾಬಿ ನಡೆಸಿದ್ದಾರೆ.

ಕ್ಷೇತ್ರವು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯನ್ನು ಒಳಗೊಂಡಿದ್ದು, ನಾಮಪತ್ರ ಸಲ್ಲಿಕೆಗೆ ದಿನಗಣನೆ ಆರಂಭವಾಗಿರುವಂತೆ ಚುನಾವಣಾ ಕಾವು ಏರ ತೊಡಗಿದೆ. ಚುನಾವಣೆಗೆ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿರುವ ಆಕಾಂಕ್ಷಿಗಳು ಟಿಕೆಟ್‌ಗಾಗಿ ಮುಖಂಡರಿಗೆ ದುಂಬಾಲು ಬಿದ್ದಿದ್ದಾರೆ.

ಹೆಚ್ಚಿನ ಮಂದಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಲು ಆಸಕ್ತಿ ತೋರಿದ್ದು, ಅಭ್ಯರ್ಥಿ ಆಯ್ಕೆಯು ವರಿಷ್ಠರಿಗೆ ಕಗ್ಗಂಟಾಗಿದೆ. ಕಮಲ ಪಾಳಯದಲ್ಲೂ ಟಿಕೆಟ್‌ ಆಕಾಂಕ್ಷಿಗಳ ದೊಡ್ಡ ದಂಡೇ ಇದ್ದು, ವರಿಷ್ಠರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

ಕಾಂಗ್ರೆಸ್‌ ಟಿಕೆಟ್‌ಗೆ ದೊಡ್ಡ ಪೈಪೋಟಿಯೇ ನಡೆದಿದ್ದು, ಅಭ್ಯರ್ಥಿ ಆಯ್ಕೆಯು ವರಿಷ್ಠರಿಗೆ ತಲೆ ನೋವಾಗಿದೆ. ಕೋಲಾರ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೇಶವರೆಡ್ಡಿ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ನಿರ್ದೇಶಕ ಎಂ.ಎಲ್‌.ಅನಿಲ್‌ಕುಮಾರ್‌, ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌, ಚಿಕ್ಕಬಳ್ಳಾ‍ಪುರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮುನೇಗೌಡ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಹಿಂದಿನ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದು ಪರಾಭವಗೊಂಡಿದ್ದ ಅನಿಲ್‌ಕುಮಾರ್‌ ಅವರು ಈ ಬಾರಿ ಶತಾಯಗತಾಯ ಟಿಕೆಟ್‌ ಪಡೆದು ಗೆಲ್ಲಲೇಬೇಕೆಂಬ ಹಟಕ್ಕೆ ಬಿದ್ದಿದ್ದಾರೆ. ಮಹಿಳಾ ಸ್ವಸಹಾಯ ಸಂಘಗಳಿಗೆ ಹಾಗೂ ರೈತರಿಗೆ ಸಾಲ ನೀಡಿಕೆ ಮೂಲಕ ಅವಳಿ ಜಿಲ್ಲೆಯಲ್ಲಿ ಮನೆ ಮಾತಾಗಿರುವ ಗೋವಿಂದಗೌಡರತ್ತ ಕಾಂಗ್ರೆಸ್‌ ವರಿಷ್ಠರು ಹೆಚ್ಚಿನ ಒಲವು ತೋರಿದ್ದಾರೆ. ಅವಳಿ ಜಿಲ್ಲೆಯ ಜನರು ಹಾಗೂ ಜನಪ್ರತಿನಿಧಿಗಳೊಂದಿಗೆ ಉತ್ತಮ ಒಡನಾಟ ಹೊಂದಿರುವ ಗೋವಿಂದಗೌಡರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಅಂತಿಮ ಕ್ಷಣದಲ್ಲಿ ಟಿಕೆಟ್‌ ವಂಚಿತರಾಗಿದ್ದ ಸುದರ್ಶನ್‌ ಅವರಿಗೆ ಈ ಬಾರಿ ಅವಕಾಶ ನೀಡಿ ಮೇಲ್ಮನೆಗೆ ಕಳುಹಿಸುವ ಬಗ್ಗೆ ‘ಕೈ’ ಪಾಳಯದಲ್ಲಿ ಬಿಸಿಬಿಸಿ ಚರ್ಚೆ ನಡೆದಿದೆ. ಮತ್ತೊಂದೆಡೆ ಜಿ.ಪಂ ಮಾಜಿ ಅಧ್ಯಕ್ಷೆ ಗೀತಾ ಅವರ ಪತಿ ಮತ್ತು ಮುಳಬಾಗಿಲು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆನಂದ್‌ರೆಡ್ಡಿ, ಜಿ.ಪಂ ಮಾಜಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ ಸಹ ಟಿಕೆಟ್‌ಗೆ ಕಸರತ್ತು ನಡೆಸಿದ್ದಾರೆ.

ಜೆಡಿಎಸ್‌ಗೆ ಸವಾಲು: ವಿಧಾನ ಪರಿಷತ್‌ನ ಹಿಂದಿನ ಅವಧಿಗೆ ನಡೆದಿದ್ದ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಜೆಡಿಎಸ್‌ಗೆ ಈಗ ಕ್ಷೇತ್ರ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಜೆಡಿಎಸ್‌ನಿಂದ ಗೆದ್ದಿದ್ದ ಚಿತ್ರ ನಿರ್ಮಾಪಕ ಸಿ.ಆರ್‌.ಮನೋಹರ್‌ ಅವರು ಮಾನಸಿಕವಾಗಿ ಜೆಡಿಎಸ್‌ನಿಂದ ದೂರವಾಗಿದ್ದು, ಪಕ್ಷದಲ್ಲಿ ಅಭ್ಯರ್ಥಿಗೆ ತೀವ್ರ ಶೋಧ ನಡೆದಿದೆ.

ಚಿಂತಾಮಣಿ, ಮುಳಬಾಗಿಲು, ಕೋಲಾರ ಹಾಗೂ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಬಲವಾಗಿರುವ ಜೆಡಿಎಸ್‌ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಎದುರಾಳಿ ಪಕ್ಷಗಳಿಗೆ ಪೈಪೋಟಿ ನೀಡಬಲ್ಲ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದೆ. ವಿಧಾನ ಪರಿಷತ್‌ ಮಾಜಿ ಸದಸ್ಯರಾದ ತೂಪಲ್ಲಿ ಆರ್‌.ಚೌಡರೆಡ್ಡಿ, ಟಿ.ಎ.ಶರವಣ, ಜಿ.ಪಂ ಮಾಜಿ ಸದಸ್ಯ ಕೆ.ಎಸ್‌.ನಂಜುಂಡಪ್ಪ, ಸ್ಥಳೀಯ ಜೆಡಿಎಸ್‌ ಮುಖಂಡರಾದ ಸಿಎಂಆರ್ ಶ್ರೀನಾಥ್, ವಕ್ಕಲೇರಿ ರಾಮು, ಬೆಂಗಳೂರಿನ ರಮೇಶ್ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.

ಮನೋಹರ್‌ಗೆ ಬಿಜೆಪಿ ಗಾಳ?: ಜೆಡಿಎಸ್‌ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವ ಮನೋಹರ್‌ ಅವರು ‘ಕೈ’ ಪಾಳಯದಿಂದ ಮುಂಬರುವ ವಿಧಾನಸಭಾ ಚುನಾವಣೆಗೆ ಕೋಲಾರ ಕ್ಷೇತ್ರದಿಂದ ಅಖಾಡಕ್ಕಿಳಿಯಲು ಉತ್ಸುಕರಾಗಿದ್ದು, ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ.

ಮತ್ತೊಂದೆಡೆ ಬಿಜೆಪಿಯು ಮನೋಹರ್‌ ಅವರನ್ನು ಪಕ್ಷಕ್ಕೆ ಸೆಳೆದು ವಿಧಾನ ಪರಿಷತ್‌ ಚುನಾವಣಾ ಅಖಾಡಕ್ಕೆ ಇಳಿಸಲು ತೆರೆಮರೆಯಲ್ಲೇ ಪ್ರಯತ್ನ ನಡೆಸಿದೆ. ಹಿಂದಿನ ಚುನಾವಣೆಯಲ್ಲಿ ಭಾರಿ ಅಂತರದಿಂದ ಜಯ ಗಳಿಸಿದ್ದ ಮನೋಹರ್‌ ಅವರಿಗೆ ಟಿಕೆಟ್‌ ಕೊಟ್ಟರೆ ಗೆಲುವಿನ ಹಾದಿ ಸುಗಮ ಎಂಬುದು ಬಿಜೆಪಿ ವರಿಷ್ಠರ ಲೆಕ್ಕಾಚಾರ.‌ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್‌ ಅವರ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು