ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ: ಪ್ರತ್ಯೇಕ ಗುಂಪುಗಳಲ್ಲಿ ನಾಮಪತ್ರ ಸಲ್ಲಿಕೆ!

ಸಚಿವರು, ಕೆ.ಎಚ್‌.ಮುನಿಯಪ್ಪ, ಶಾಸಕರ ಜೊತೆ 3 ಸೆಟ್‌ಗಳಲ್ಲಿ ಉಮೇದುವಾರಿಕೆ
Published 4 ಏಪ್ರಿಲ್ 2024, 15:53 IST
Last Updated 4 ಏಪ್ರಿಲ್ 2024, 15:53 IST
ಅಕ್ಷರ ಗಾತ್ರ

ಕೋಲಾರ: ಕೋಲಾರ ಮೀಸಲು ಕ್ಷೇತ್ರದಲ್ಲಿ ತಮ್ಮ ಅಳಿಯ ಕೆ.ಜಿ.ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಸಿಗದಿದ್ದರಿಂದ ಅಸಮಾಧಾನಗೊಂಡಿದ್ದ ಸಚಿವ ಕೆ.ಎಚ್‌.ಮುನಿಯಪ್ಪ ಹಾಗೂ ಅವರ ಪುತ್ರಿ, ಶಾಸಕಿ ರೂಪಕಲಾ ಎಂ.ಶಶಿಧರ್‌ ಗುರುವಾರ ಕಾಂಗ್ರೆಸ್‌ ಅಭ್ಯರ್ಥಿ ಕೆ.ವಿ.ಗೌತಮ್‌ ನಾಮಪತ್ರ ಸಲ್ಲಿಕೆ ವೇಳೆ ಪಾಲ್ಗೊಂಡರು.

ಮಾರ್ಚ್‌ 30ರಂದು ಕೋಲಾರ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾದ ನಂತರ ಕ್ಷೇತ್ರಕ್ಕೆ ಮುನಿಯಪ್ಪ ನೀಡಿದ ಮೊದಲ ಭೇಟಿ ಇದಾಗಿದೆ.

ಕೆ.ವಿ.ಗೌತಮ್ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಮೊದಲ ಸೆಟ್‌ ನಾಮಪತ್ರ ಸಲ್ಲಿಕೆ ವೇಳೆ ಸಚಿವರಾದ ಬೈರತಿ ಸುರೇಶ್‌, ಡಾ.ಎಂ.ಸಿ.ಸುಧಾಕರ್‌, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಹಾಗೂ ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಇದ್ದರು.

ಮತ್ತೊಂದು ಸೆಟ್ ನಾಮಪತ್ರ ಸಲ್ಲಿಕೆ ವೇಳೆ ಸಚಿವ ಕೆ.ಎಚ್‌.ಮುನಿಯಪ್ಪ, ಶಾಸಕಿ ರೂಪಕಲಾ‌ ಶಶಿಧರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ ಹಾಗೂ ಶಿಡ್ಲಘಟ್ಟದ ರಾಜೀವ್‌ ಗೌಡ ಇದ್ದರು.

ಇನ್ನೊಂದು ಸೆಟ್‌ ನಾಮಪತ್ರ ಸಲ್ಲಿಕೆ ವೇಳೆ ಶಾಸಕರಾದ ಕೆ.ವೈ.ನಂಜೇಗೌಡ, ಕೊತ್ತೂರು ಮಂಜುನಾಥ್, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಹಾಗೂ ಮುಳಬಾಗಿಲಿನ ಆದಿನಾರಾಯಣ ಪಾಲ್ಗೊಂಡಿದ್ದರು.

ಮುನಿಯಪ್ಪ ಅವರು ಮತ್ತೊಂದು ಬಣದಿಂದ ಅಂತರ ಕಾಯ್ದುಕೊಂಡಿದ್ದು ಕಂಡುಬಂತು. ಕೊನೆಯಲ್ಲಿ ಜೊತೆಗೂಡಿ ಫೋಟೊಗೆ ಪೋಸು ನೀಡಿದರೂ ಬಳಿಕ ಬಣಗಳು ಚದುರಿ ಹೋದವು. ರೋಡ್‌ ಶೋ ವೇಳೆ ಮುನಿಯಪ್ಪ, ರೂಪಕಲಾ ಹಾಗೂ ಅವರ ಕೆಲ ಬೆಂಬಲಿಗರು ಕಾಣಿಸಿಕೊಳ್ಳಲಿಲ್ಲ.

ಮುನಿಯಪ್ಪ ಈ ಕ್ಷೇತ್ರದಲ್ಲಿ 1991ರಿಂದ 2019ರ ಚುನಾವಣೆ ವರೆಗೆ ಸ್ಪರ್ಧಿಸಿದ್ದಾರೆ. ಸತತ ಎಂಟು ಚುನಾವಣೆಗಳಲ್ಲಿ ಕಣಕ್ಕಿಳಿದು ಏಳು ಬಾರಿ ಗೆದ್ದಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಎಸ್‌.ಮುನಿಸ್ವಾಮಿ ವಿರುದ್ಧ ಪರಾಭವಗೊಂಡಿದ್ದರು.

ಕೆ.ವಿ.ಗೌತಮ್ ನಾಮಪತ್ರ ಸಲ್ಲಿಸುವ ಮುನ್ನ ಬೆಳಿಗ್ಗೆ ನಗರದ ಕೋಲಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮೆಥೋಡಿಸ್ಟ್ ಚರ್ಚ್‌ಗೆ ಭೇಟಿ ನೀಡಿ ಮುಖಂಡರ ಆಶೀರ್ವಾದ ಪಡೆದರು. ಬಳಿಕ ಕ್ಲಾಕ್ ಟವರ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಕೋಲಾರ ಚಿಕ್ಕಬಳ್ಳಾಪುರ ಕ್ಷೇತ್ರ ಗೆಲ್ಲಿಸು‌ವ ಜವಾಬ್ದಾರಿಯನ್ನು ಮೂವರು ಸಚಿವರಿಗೆ ನೀಡಲಾಗಿದೆ. ಮುಕ್ತ ಮನಸ್ಸಿನಿಂದ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡುತ್ತೇನೆ. ಕರೆದಾಗ ಪ್ರಚಾರಕ್ಕೆ ಬರುತ್ತೇನೆ
ಕೆ.ಎಚ್‌.ಮುನಿಯಪ್ಪ ಸಚಿವ
4 ಬಾರಿ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು ನಮ್ಮಲ್ಲಿ ಗುಂಪುಗಾರಿಕೆ ಇಲ್ಲ. ಜಿಲ್ಲೆಯ ನಾಯಕರು ಅಭ್ಯರ್ಥಿ ಜೊತೆ ಹೋಗಿ ನಾಮಪತ್ರ ಸಲ್ಲಿಸಿದ್ದಾರೆ. ಕೆ.ಎಚ್‌.ಮುನಿಯಪ್ಪ ಪ್ರಚಾರಕ್ಕೂ ಬರುತ್ತಾರೆ
ಬೈರತಿ ಸುರೇಶ್ ಜಿಲ್ಲಾ ಉಸ್ತುವಾರಿ ಸಚಿವ
ನಾವೆಲ್ಲರೂ ಒಂದಾಗಿದ್ದೇವೆ. ಮುನಿಯಪ್ಪ ಸೇರಿ ಎಲ್ಲರಿಗೂ ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಜವಾಬ್ದಾರಿಯಿದೆ. ನನ್ನನ್ನು ನಾಮಪತ್ರ ಸಲ್ಲಿಕೆಗೆ ಬನ್ನಿ ಎಂದು ಯಾರೂ ಕರೆದಿಲ್ಲ. ಅವರನ್ನೂ ಕರೆದಿಲ್ಲ
ನಸೀರ್‌ ಅಹ್ಮದ್‌ ಸಿ.ಎಂ ರಾಜಕೀಯ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT