ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಕೋಲಾರ ಬಿಜೆಪಿಯಲ್ಲಿ ಬಂಡಾಯ ಸದ್ದು

Published 18 ಜನವರಿ 2024, 6:07 IST
Last Updated 18 ಜನವರಿ 2024, 6:07 IST
ಅಕ್ಷರ ಗಾತ್ರ

ಕೋಲಾರ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಜಿಲ್ಲೆಯ ಬಿಜೆಪಿಯಲ್ಲಿ ಬಂಡಾಯದ ಹೊಗೆ ಕಾಣಿಸಿಕೊಂಡಿದ್ದು, ಕೋಲಾರ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಗೆ ಕೂಗು ಎದ್ದಿದೆ.

ಈ ಸಂಬಂಧ ಬುಧವಾರ ಬಿಜೆಪಿ ಮುಖಂಡ, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ (ಕುಡಾ) ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ಗೋಪ್ಯ ಸ್ಥಳದಲ್ಲಿ ಸಭೆ ನಡೆದಿದ್ದು, ಮುಂದಿನ ಬೆಳವಣಿಗೆಗಳು ಕುತೂಹಲ ಮೂಡಿಸಿವೆ. ಈ ಸಭೆಯಲ್ಲಿ ವಿವಿಧ ತಾಲ್ಲೂಕುಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು ಎಂಬುದು ಗೊತ್ತಾಗಿದೆ.

‘ಸಂಸದರೂ ಸೇರಿದಂತೆ ಜಿಲ್ಲೆಯ ಕೆಲವರು ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಾರೆ. ಸಭೆಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಬಿಡುವುದಿಲ್ಲವೆಂದು ಸಭೆಯಲ್ಲಿ ಕೆಲ ಮುಖಂಡರು, ಕಾರ್ಯಕರ್ತರು ಅಸಮಾಧಾನ ತೋಡಿಕೊಂಡರು’ ಎಂದು ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈಚೆಗೆ ಬೆಂಗಳೂರಿನ ಯಲಹಂಕದಲ್ಲಿ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲೂ ಅಭ್ಯರ್ಥಿ ಬದಲಾಯಿಸಬೇಕೆಂದು ಜಿಲ್ಲೆಯ ಕೆಲವರು ಪಟ್ಟು ಹಿಡಿದಿದ್ದರು ಎನ್ನಲಾಗಿದೆ.

ಕಳೆದ ವಿಧಾನಸಭೆ ಚುನಾವಣೆ ವೇಳೆಯೂ ಕೆಲ ಕ್ಷೇತ್ರಗಳಲ್ಲಿ ಬಂಡಾಯ ಕಾಣಿಸಿಕೊಂಡಿತ್ತು. ಮಾಲೂರು ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿ ಹೂಡಿ ವಿಜಯಕುಮಾರ್‌ ಬಂಡಾಯ ಸಾರಿದ್ದರು. ಕೋಲಾರ ವಿಧಾನಸಭೆ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಆಗಿದ್ದ ಓಂಶಕ್ತಿ ಚಲಪತಿ ಆರಂಭದಲ್ಲಿ ವಿರೋಧ ತೋರಿ ಆಮೇಲೆ ತಣ್ಣಗಾದರು. ಕೆಜಿಎಫ್‌ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಮೋಹನ್‌ ಕೃಷ್ಣ ಕೂಡ ಅಸಮಾಧಾನಗೊಂಡಿದ್ದರು. ಆಗ ಪಕ್ಷ ಎಲ್ಲಾ ಕ್ಷೇತ್ರಗಳಲ್ಲಿ ಸೋಲು ಕಂಡಿತ್ತು. ಈಗ ಮತ್ತೆ ಚುನಾವಣೆ ಬರುತ್ತಿರುವಂತೆ ಬಂಡಾಯ ಆರಂಭವಾಗಿದೆ.

ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನಾಗಿ ಡಾ.ಕೆ.ಎನ್‌.ವೇಣುಗೋಪಾಲ್‌ ಅವರನ್ನು ಮುಂದುವರಿಸಿರುವುದಕ್ಕೂ ಪಕ್ಷದೊಳಗೆ ಆಕ್ಷೇಪ ವ್ಯಕ್ತವಾಗಿದೆ.

ಹೀಗಾಗಿ, ಲೋಕಸಭೆ ಚುನಾವಣೆ ನಡೆದ ಮೇಲೆ ಬದಲಾಯಿಸುವುದಾಗಿ ವಿಜಯೇಂದ್ರ ಭರವಸೆ ಕೊಟ್ಟಿದ್ದಾರೆ ಎಂಬುದು ಗೊತ್ತಾಗಿದೆ.

ಕೋಲಾರ ಜಿಲ್ಲೆಯ ಅಧ್ಯಕ್ಷ ಸ್ಥಾನಕ್ಕೆ ಮಾಗೇರಿ ನಾರಾಯಣಸ್ವಾಮಿ, ಪುರ ನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ, ಚಂದ್ರಾರೆಡ್ಡಿ, ಮುಳಬಾಗಿಲು ವಾಸು ಹಾಗೂ ನರಸಿಂಹರಾಜು ಸ್ಪರ್ಧೆಯಲ್ಲಿದ್ದರು. ಜಿಲ್ಲೆಯ ಬಿಜೆಪಿಯಲ್ಲಿ ಈಗಾಗಲೇ ನಾಲ್ಕು ಬಣಗಳಾಗಿವೆ. ಸಂಸದ ಎಸ್‌.ಮುನಿಸ್ವಾಮಿ ಬಣ, ವರ್ತೂರು ಪ್ರಕಾಶ್‌ ಬಣ, ಓಂಶಕ್ತಿ ಚಲಪತಿ ಬಣ, ಸಂಘ ಪರಿವಾರ ಹಾಗೂ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ ಒಂದು ಗುಂಪು ಇದೆ. ಈ ನಾಲ್ಕೂ ಬಣಗಳ ಬೆಂಬಲಿಗರನ್ನು ಜಿಲ್ಲಾ ಅಧ್ಯಕ್ಷರನ್ನಾಗಿ ಮಾಡಲು ಪ್ರಯತ್ನ ನಡೆದಿತ್ತು.

ಮೊದಲ ಯತ್ನದಲ್ಲೇ ಗೆದ್ದಿದ್ದ ಮುನಿಸ್ವಾಮಿ

2019ರ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಮೀಸಲು ಕ್ಷೇತ್ರದಲ್ಲಿ ಎಸ್‌.ಮುನಿಸ್ವಾಮಿ ಮೊದಲ ಯತ್ನದಲ್ಲೇ 2 ಲಕ್ಷಕ್ಕೂ ಅಧಿಕ ಮತಗಳಿಂದ ಸತತ ಏಳು ಬಾರಿ ಸಂಸದರಾಗಿದ್ದ ಕಾಂಗ್ರೆಸ್‌ನ ಕೆ.ಎಚ್‌.ಮುನಿಯಪ್ಪ ವಿರುದ್ಧ ಭರ್ಜರಿ ಜಯ ಗಳಿಸಿದ್ದರು. ಮುನಿಸ್ವಾಮಿ ಒಟ್ಟು 707930 ಮತ ಪಡೆದಿದ್ದರೆ ಕೆ.ಎಚ್‌.ಮುನಿಯಪ್ಪ 498259 ಮತ ಗಳಿಸಿದ್ದರು. ಶ್ರೀನಿವಾಸಪುರ ಮುಳಬಾಗಿಲು ಕೆಜಿಎಫ್‌ ಬಂಗಾರಪೇಟೆ ಕೋಲಾರ ಮಾಲೂರು ಅಲ್ಲದೇ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಗಳು (ಒಟ್ಟು 8) ಕೋಲಾರ ಲೋಕಸಭೆ ಕ್ಷೇತ್ರಕ್ಕೆ ಸೇರಿವೆ. ಕೋಲಾರ ಕ್ಷೇತ್ರ ಬಿಜೆಪಿಗೆ ಲಭಿಸಿದರೆ ಈ ಬಾರಿಯೂ ವರಿಷ್ಠರು ಮುನಿಸ್ವಾಮಿ ಅವರನ್ನೇ ಕಣಕ್ಕಿಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಏರ್ಪಟ್ಟಿದೆ.

ವಿಜಯೇಂದ್ರಗೆ ದೂರು

ಓಂಶಕ್ತಿ ಚಲಪತಿ ನೇತೃತ್ವದಲ್ಲಿ ನಡೆದ ಗೋಪ್ಯ ಸಭೆಯಲ್ಲಿ ಜಿಲ್ಲೆಯ ಬಿಜೆಪಿಯಲ್ಲಿನ ವಿದ್ಯಮಾನ ಕಾರ್ಯಕರ್ತರ ನಿರ್ಲಕ್ಷ ಸಂಬಂಧ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ದೂರು ನೀಡಲು ತೀರ್ಮಾನ ಕೈಗೊಂಡಿರುವುದು ಗೊತ್ತಾಗಿದೆ. ಅಲ್ಲದೇ ದೆಹಲಿ ಮಟ್ಟದ ವರಿಷ್ಠರಿಗೂ ದೂರು ನೀಡಲು ಸಿದ್ಧತೆ ನಡೆಸಿರುವುದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT