ಶನಿವಾರ, ನವೆಂಬರ್ 28, 2020
25 °C
ಸಂಸದ ಮುನಿಸ್ವಾಮಿ– ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್‌ ನಡುವೆ ಅಂತರ್ಯುದ್ಧ

ಹಗುರ ಮಾತು: ಹೋರಾಟದ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಸಂಸದ ಎಸ್‌.ಮುನಿಸ್ವಾಮಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ನಡುವಿನ ಅಂತರ್ಯುದ್ಧ ಮುಂದುವರಿದಿದ್ದು, ಸಚಿವರು ಸಂಸದರ ವಿರುದ್ಧ ಇಲ್ಲಿ ಭಾನುವಾರ ತೀವ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ನಾಗೇಶ್‌, ‘ಸಂಸದ ಮುನಿಸ್ವಾಮಿ ಅವರು ಜಿಲ್ಲಾ ಉಸ್ತುವಾರಿ ಸಚಿವನಾದ ನನಗೆ ಗೌರವ ಕೊಡಬೇಕು. ಅವರು ನನ್ನ ಬಗ್ಗೆ ಹಗುರವಾಗಿ ಮಾತನಾಡಿದರೆ ಹೋರಾಟ ಮಾಡುತ್ತೇನೆ’ ಎಂದು ಗುಡುಗಿದರು.

‘ಸಚಿವನಾದ ನನಗೆ ಮರ್ಯಾದೆ ಇಲ್ಲವೆ? ನಾನು ಬಿಟ್ಟಿ ಬಿದ್ದಿದ್ದೇನಾ? ಸಂಸದರು ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಇದೇ ರೀತಿ ಮಾತನಾಡುತ್ತಿದ್ದರಾ? ಮುನಿಸ್ವಾಮಿ ನನ್ನ ಸಂಬಂಧಿ ಮತ್ತು ಸಹೋದರ. ನನಗಿಂತ ಚಿಕ್ಕವರೆಂದು ಕ್ಷಮಿಸಿದ್ದೇನೆ. ಇನ್ನಾದರೂ ಅವರು ತಮ್ಮ ವರಸೆ ಬದಲಿಸಿಕೊಂಡರೆ ಒಳ್ಳೆಯದು’ ಎಂದು ಎಚ್ಚರಿಕೆ ನೀಡಿದರು.

‘ಕಾಲೇಜು ದಿನಗಳಲ್ಲೇ ನಾನು ವಿದ್ಯಾರ್ಥಿ ಮುಖಂಡನಾಗಿ ರಾಜಕಾರಣ ಮಾಡಿದವನು. ನನಗೂ ರಾಜಕಾರಣ ಗೊತ್ತಿದೆ. 2 ವರ್ಷದ ನಂತರ ಕ್ಷೇತ್ರದಲ್ಲಿ ಈಗ ಅಸಲಿ ಆಟ ಶುರು ಮಾಡಿದ್ದೇನೆ. ಮುಳಬಾಗಿಲು ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಾದಿ ಚುನಾವಣೆಯಲ್ಲಿ ರಾಜಕೀಯ ವಿರೋಧಿಗಳಿಗೆ ತಕ್ಕ ಉತ್ತರ ಕೊಟ್ಟಿದ್ದೇನೆ’ ಎಂದು ಹರಿಹಾಯ್ದರು.

‘ವಿಧಾನಸಭೆ ಚುನಾವಣೆಯಲ್ಲಿ ಕೊತ್ತೂರು ಮಂಜುನಾಥ್‌ ನನ್ನನ್ನು ಕ್ಷೇತ್ರಕ್ಕೆ ಕರೆದುಕೊಂಡು ಬಂದರೆಂದು ಅವರಿಗೆ ಗೌರವ ಕೊಟ್ಟೆ. ಕ್ಷೇತ್ರದ ಎಲ್ಲಾ ವಿಚಾರವನ್ನು ಅವರಿಗೆ ಬಿಟ್ಟಿದ್ದೆ. ಆದರೆ, ಅವರು ಆ ಗೌರವ ಉಳಿಸಿಕೊಳ್ಳಲಿಲ್ಲ. ಕ್ಷೇತ್ರದ ಜನ ಶಾಸಕರಾಗಿ ಏಕೆ ಸುಮ್ಮನಿದ್ದೀರಿ ಎಂದು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ನಾನು ಚಿಕ್ಕ ಮಗುವಲ್ಲ. ಎದುರಾಳಿಗಳನ್ನು ರಾಜಕೀಯವಾಗಿಯೇ ಹಣಿಯುತ್ತೇನೆ’ ಎಂದು ಸವಾಲು ಹಾಕಿದರು.

ಕ್ಲೈಮ್ಯಾಕ್ಸ್‌ ಬಾಕಿ: ‘ಕೊತ್ತೂರು ಮಂಜುನಾಥ್‌ಗೆ ಕಾಲಾವಕಾಶ ಕೊಟ್ಟಂತೆ ಸಂಸದರ ವಿಚಾರದಲ್ಲೂ ಕೆಲ ಸಮಯ ಸುಮ್ಮನಿರುತ್ತೇನೆ. ಕೆಲ ವಿಚಾರ ಹೇಳುವುದಿಲ್ಲ. ಸಿನಿಮಾ ತೆಗೆಯುವಾಗ ಕತೆ ಹೇಳಬಾರದು. ಮೊದಲೇ ಕತೆ ಹೇಳಿದರೆ ಸಿನಿಮಾ ಯಾರು ನೋಡುತ್ತಾರೆ? ಮುಳಬಾಗಿಲು ಕ್ಷೇತ್ರದ ಸಿನಿಮಾ ಕ್ಲೈಮ್ಯಾಕ್ಸ್‌್ ಇನ್ನೂ ಬಾಕಿಯಿದೆ’ ಎಂದು ನುಡಿದರು.

‘ಮುಳಬಾಗಿಲು ನಗರಸಭೆ ಚುನಾವಣೆಯಲ್ಲಿ ನಾನೇ ನಿರ್ಮಾಪಕ, ನಾಯಕ ಮತ್ತು ನನ್ನದೇ ಚಿತ್ರ ನಿರ್ದೇಶನ. ನನ್ನ ಬೆಂಬಲಿಗ ಪಡೆಗೆ ಬಹುಮತವಿಲ್ಲವೆಂದು ಕೆಲವರು ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಸುದ್ದಿ ಪ್ರಸಾರ ಮಾಡಿಸಿದ್ದರು. ಆದರೆ, ಚುನಾವಣೆ ಕ್ಲೈಮ್ಯಾಕ್ಸ್‌ ನಟ ಉಪೇಂದ್ರರ ‘ಎ’ ಸಿನಿಮಾದಂತೆ ಆಯಿತು. ವಿರೋಧಿಗಳು ಊಹಿಸದ ರೀತಿಯಲ್ಲಿ ಫಲಿತಾಂಶದ ದಿಕ್ಕನ್ನೇ ಬದಲಿಸಿದೆ’ ಎಂದರು.

ಶತ್ರುಗಳಿಲ್ಲ: ‘ಪಕ್ಷೇತರ ಶಾಸಕನಾದ ನಾನು ಎಲ್ಲರಿಗೂ ಬೇಕು. ನಾಲ್ಕೈದು ಜನರನ್ನು ಬಿಟ್ಟು ನನಗೆ ಯಾರೂ ಶತ್ರುಗಳಿಲ್ಲ. ಕೊತ್ತೂರು ಮಂಜುನಾಥ್‌ ಗುಂಪಿನವರು ಮಾತ್ರ ನನ್ನ ವಿರೋಧಿಗಳು. ಹೀಗಾಗಿ ಅವರನ್ನು ದೂರ ಇಟ್ಟಿದ್ದೇನೆ. ಅವರ ವರ್ತನೆ ಸಹ ಸರಿಯಿಲ್ಲ. ಆದರೂ ಅವರು ನನ್ನ ಬಳಿ ಬಂದರೆ ಕೆಲಸ ಮಾಡಿಕೊಡುತ್ತೇನೆ. ಆದರೆ, ಅವರೇ ದೂರ ಹೋಗುತ್ತಾ ಟಚ್‌ ಮಿ ನಾಟ್‌ ಆಟವಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು