ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಜಿಎಫ್‌ | ಅಭಿವೃದ್ಧಿ ನೋಡಿ ಮತ ಹಾಕಿ: ಕೆ.ವಿ.ಗೌತಮ್ ಮನವಿ

Published 5 ಏಪ್ರಿಲ್ 2024, 14:11 IST
Last Updated 5 ಏಪ್ರಿಲ್ 2024, 14:11 IST
ಅಕ್ಷರ ಗಾತ್ರ

ಕೆಜಿಎಫ್‌: ಐದು ವರ್ಷಗಳಿಂದ ಕೋಲಾರ ಕ್ಷೇತ್ರದಲ್ಲಿ ಏನೆಲ್ಲಾ ನಡೆದಿದೆ ಎಂದು ಜನ ಗಮನಿಸಿದ್ದಾರೆ. ಹಾಗಾಗಿ ಈ ಬಾರಿ ಅಭಿವೃದ್ಧಿ ನೋಡಿ ಮತ ಹಾಕಿ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಮನವಿ ಮಾಡಿದರು.

ತಾಲ್ಲೂಕಿನ ಎನ್‌.ಜಿ.ಹುಲ್ಕೂರು ಗ್ರಾಮದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ನಡೆಸಿ ಮಾತನಾಡಿದ ಅವರು, ಕೋಲಾರ ಜಿಲ್ಲೆಯಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ನಿರುದ್ಯೋಗ ಸಮಸ್ಯೆ, ರೈತರ ಸಮಸ್ಯೆ ಬಗ್ಗೆ ನನಗೆ ವಿಷನ್‌ ಇದೆ. ನೇತ್ರಾವತಿ ತಿರುವು ಯೋಜನೆಗೆ ವಿರೋಧ ವ್ಯಕ್ತವಾಗಿದ್ದರಿಂದ ಅದನ್ನು ನಿಲ್ಲಿಸಲಾಗಿದೆ. ಅದು ಪುನಃ ಚಾಲನೆಯಾಗಬೇಕು. ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಬೇಕು. ಟೆಕ್‌ ಮತ್ತು ಕೈಗಾರಿಕೆ ಕಾರಿಡಾರ್‌ಗಳು ಬರಬೇಕು. ಕೇಂದ್ರ ಸರ್ಕಾರದಿಂದ ಬರಬೇಕಾದ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲಾಗುವುದು ಎಂದು ಹೇಳಿದರು.

ಹೊರಗಿನ ಅಭ್ಯರ್ಥಿ ಎಂದು ನನ್ನನ್ನು ಬಿಂಬಿಸುವುದರಲ್ಲಿ ಅರ್ಥವಿಲ್ಲ. ಜೆಡಿಎಸ್ ಅಭ್ಯರ್ಥಿ ಕೂಡ ಬೆಂಗಳೂರಿನವರು. ಕೋಲಾರ ಜಿಲ್ಲೆಯ ಕೃಷ್ಣಬೈರೇಗೌಡರು ಸೇರಿದಂತೆ ಹಲವಾರು ಮಂದಿ ಬೆಂಗಳೂರಿನಲ್ಲಿ ಚುನಾವಣೆ ನಿಂತು ಗೆದ್ದಿದ್ದಾರೆ. ಬೆಂಗಳೂರಿನ ಬಹುತೇಕ ಮಂದಿ ಕೋಲಾರ ಜಿಲ್ಲೆಯವರೇ ಆಗಿದ್ದಾರೆ. ನಾವೆಲ್ಲ ಒಂದೇ ಎಂಬ ಭಾವನೆಯಿಂದ ಅಭಿವೃದ್ಧಿ ಬಗ್ಗೆ ಮಾತನಾಡಬೇಕು. ನಾನು ಚುನಾವಣೆಗೆ ನಿಂತ ಮೇಲೆ ನಾನು ಕೋಲಾರ ಜಿಲ್ಲೆಗೆ ಸೇರಿದವನಾಗಿದ್ದೇನೆ. ನನ್ನ ಬಗ್ಗೆ ಎರಡೂ ಬಣಗಳು ಒಮ್ಮತ ವ್ಯಕ್ತಪಡಿಸಿವೆ. ನಾಮಪತ್ರ ಸಲ್ಲಿಸುವ ಸಮಯದಲ್ಲಿ ಎರಡೂ ಬಣಗಳ ಮುಖಂಡರು ಹಾಜರಿದ್ದರು ಎಂದು ಹೇಳಿದರು.

ಐದು ವರ್ಷ ಕ್ಷೇತ್ರದಲ್ಲಿ ನಮ್ಮ ಎಂಪಿ ಇಲ್ಲದೆ ಇರುವುದರಿಂದ ಎಷ್ಟೆಲ್ಲಾ ಸಮಸ್ಯೆಯಾಗಿದೆ ಎಂದು ಗೊತ್ತಿದೆ. ಶಾಸಕಿ ಎಷ್ಟೆಲ್ಲಾ ಹೋರಾಟ ಮಾಡಿದ್ದಾರೆ ಎಂಬುದನ್ನು ಜನ ಅರಿತಿದ್ದಾರೆ. ಗಲಾಟೆ ಮಾಡುವವರನ್ನು ಆಯ್ಕೆ ಮಾಡಬಾರದು. ಬಿಜೆಪಿಗೆ ಯಾರು ಸೇರಿಕೊಂಡರೂ ಅವರು ತರಲೆಗಳಾಗುತ್ತಾರೆ ಎಂದು ಟೀಕಿಸಿದರು.

ಮುಖಂಡ ಮೋಹನಕೃಷ್ಣ ಅವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುವ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಶಾಸಕಿ ರೂಪಕಲಾ, ಕಾಂಗ್ರೆಸ್‌ ಪಕ್ಷಕ್ಕೆ ಬರುವವರನ್ನು ಪಕ್ಷ ಬಾಚಿ ಸ್ವಾಗತಿಸುತ್ತದೆ. ಆದರೆ, ಪಕ್ಷದ ಸಿದ್ಧಾಂತಗಳಿಗೆ ಒಪ್ಪಿ ಅವರು ಬರಬೇಕು ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣರೆಡ್ಡಿ, ಮುಖಂಡರಾದ ಅ.ಮು.ಲಕ್ಷ್ಮಿ ನಾರಾಯಣ, ಜಯಸಿಂಹ ಕೃಷ್ಣಪ್ಪ, ವಳ್ಳಲ್‌ ಮುನಿಸ್ವಾಮಿ, ಅಪ್ಪಿರೆಡ್ಡಿ, ಆನಂದಮೂರ್ತಿ , ಪದ್ಮನಾಭರೆಡ್ಡಿ, ವಿನೂ ಕಾರ್ತಿಕ್‌, ನಾಗರಾಜ್‌, ದುರ್ಗಾಪ್ರಸಾದ್‌, ವೆಂಕಟಕೃಷ್ಣರೆಡ್ಡಿ, ರಾಜಣ್ಣ ಇದ್ದರು.

ಭಿನ್ನಾಭಿಪ್ರಾಯವಿದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚೆ
ಪಕ್ಷ ಕಟ್ಟಿದವರ ಬಗ್ಗೆ ಗೌರವ ಹೊಂದಿರಬೇಕು. ಪಕ್ಷದಲ್ಲಿ ಭಿನ್ನಾಭಿಪ್ರಾಯ ಇದ್ದರೆ ವೇದಿಕೆ ಇದೆ. ದೊಡ್ಡವರು ಇದ್ದಾರೆ. ನಮ್ಮ ನೋವನ್ನು ಅವರ ಮುಂದೆ ಹೇಳಬೇಕು. ಮಾಧ್ಯಮದ ಮುಂದೆ ಪಕ್ಷಕ್ಕೆ ಮುಜುಗರ ಮಾಡುವಂತಹ ಮತ್ತು ಅಗೌರವ ತರುವಂತಹ ಕೆಲಸ ಮಾಡಬಾರದು ಎಂಬುದು ನನ್ನ ಸಿದ್ಧಾಂತವಾಗಿದೆ. ಇವತ್ತು ನಾವು ಇರುತ್ತೇವೆ ಹೋಗುತ್ತೇವೆ. ಆದರೆ ಪಕ್ಷ ಉಳಿಯುತ್ತದೆ. ಪಕ್ಷದಲ್ಲಿ ಉಳಿದುಕೊಳ್ಳುವ ಕಾರ್ಯಕರ್ತರು ನಾಳೆ ಕೆಲಸ ಮಾಡುತ್ತಾರೆ. ಅವರಿಗೆ ಗೌರವ ಕೊಡಬೇಕು ಎಂದು ಶಾಸಕಿ ರೂಪಕಲಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT