ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರದಲ್ಲಿ ಕಾಂಗ್ರೆಸ್‌ಗೆ ಗಂಡಸರು ಸಿಗಲಿಲ್ಲವೇ: ಸಮೃದ್ಧಿ ಮಂಜುನಾಥ್‌ ಪ್ರಶ್ನೆ

Published 31 ಮಾರ್ಚ್ 2024, 20:05 IST
Last Updated 31 ಮಾರ್ಚ್ 2024, 20:05 IST
ಅಕ್ಷರ ಗಾತ್ರ

ಕೋಲಾರ: ‘ಕಾಂಗ್ರೆಸ್‌ ಪಕ್ಷದವರು ಕೋಲಾರ ಮೀಸಲು ಕ್ಷೇತ್ರಕ್ಕೆ ಬೆಂಗಳೂರಿನಿಂದ ಅಭ್ಯರ್ಥಿ ಕರೆ ತಂದಿದ್ದಾರೆ. ಆ ಪಕ್ಷದವರಿಗೆ ಕ್ಷೇತ್ರದಲ್ಲಿ ಯಾರೂ ಗಂಡಸರು ಸಿಗಲಿಲ್ಲವೇ’ ಎಂದು ಜೆಡಿಎಸ್‌ ಶಾಸಕ ಸಮೃದ್ಧಿ ಮಂಜುನಾಥ್‌ ಪ್ರಶ್ನಿಸಿದರು.

ನಗರದ ನಾರಾಯಣಿ ಕನ್ವೆನ್ಷನ್‌ ಸಭಾಂಗಣದಲ್ಲಿ ಭಾನುವಾರ ನಡೆದ ಜೆಡಿಎಸ್-ಬಿಜೆಪಿ‌ ಸಮನ್ವಯ‌ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಕ್ಷೇತ್ರದಲ್ಲಿ ಜೆಡಿಎಸ್‌ಗೆ ನಾನು, ಮಲ್ಲೇಶ್‌ ಬಾಬು ಹಾಗೂ ನಿಸರ್ಗ ನಾರಾಯಣಸ್ವಾಮಿ ಸೇರಿದಂತೆ ಮೂವರು ಅಭ್ಯರ್ಥಿಗಳು ಇದ್ದೆವು. ಆದರೆ, ಕಾಂಗ್ರೆಸ್‌ನವರು ಅಭ್ಯರ್ಥಿ ಹುಡುಕಲು ಪರದಾಡಿದರು. ತಿಂಗಳಿನಿಂದ ಜಗಳ‌ ಮಾಡಿಕೊಂಡು ರಾಷ್ಟ್ರಮಟ್ಟದಲ್ಲಿ ಕೋಲಾರದ‌ ಮರ್ಯಾದೆ ತೆಗೆದರು. ಕೊನೆಗೂ ಅವರಿಗೆ ಸ್ಥಳೀಯ ಅಭ್ಯರ್ಥಿ ಸಿಗಲೇ ಇಲ್ಲ’ ಎಂದು ಲೇವಡಿ ಮಾಡಿದರು.

‘ಸ್ಥಳೀಯ ಅಭ್ಯರ್ಥಿ ಮಲ್ಲೇಶ್ ಬಾಬು ಬೇಕಾ? ಬೆಂಗಳೂರಿನಿಂದ ಬಂದಿರುವ ಗೌತಮ್ ಬೇಕಾ’ ಎಂದು ಪ್ರಶ್ನಿಸಿದ ಅವರು, ‘ಕಾಂಗ್ರೆಸ್‌ ಅಭ್ಯರ್ಥಿ ಬೆಂಬಲಿಸಿದರೆ ವ್ಯರ್ಥವಾಗುತ್ತದೆ. ದೇಶಕ್ಕೆ ಮೋದಿ ಬೇಕು, ರಾಜ್ಯಕ್ಕೆ ಕುಮಾರಸ್ವಾಮಿ ಬೇಕು' ಎಂದು ನುಡಿದರು.

ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ‘ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ ಎಂದು ಪ್ರಶ್ನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತದಾರರು ತಕ್ಕ ಉತ್ತರ ನೀಡಬೇಕು‌. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಇಲ್ಲದಿದ್ದರೆ ಸಿದ್ದರಾಮಯ್ಯ ಯಾರೆಂಬುದೇ ಗೊತ್ತಾಗುತ್ತಿರಲಿಲ್ಲ’ ಎಂದು ಲೇವಡಿ ಮಾಡಿದರು.

'ನಾನು ಈ ಬಾರಿ ಅಭ್ಯರ್ಥಿ ಅಲ್ಲದಿದ್ದರೂ ಜೊತೆಗಿರುತ್ತೇನೆ. ವರ್ತೂರು ಪ್ರಕಾಶ್ ಕೂಡ ಕ್ಷೇತ್ರದಲ್ಲಿ ಇದ್ದು ಕೆಲಸ ಮಾಡಬೇಕು. ನನ್ನನ್ನು ಗೆಲ್ಲಿಸಿದ್ದಕ್ಕೆ ಋಣ ತೀರಿಸಲು ಬಾಕಿ ಇದೆ. ಮೋದಿ‌ ಅವರನ್ನು ಮೂರನೇ ಬಾರಿ ಪ್ರಧಾನಿಯಾಗಿಸಬೇಕು. ರಾಜ್ಯದಲ್ಲಿ ಭ್ರಷ್ಟ ಕಾಂಗ್ರೆಸ್ ತೊಲಗಿಸಬೇಕು' ಎಂದರು.

ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, '65 ವರ್ಷ ದೇಶ ಆಳಿದ್ದು ಕಾಂಗ್ರೆಸ್. ಸಂವಿಧಾನವನ್ನು ಸರಿಯಾಗಿ ಜಾರಿಗೆ ತಂದಿದ್ದರೆ, ಗೌರವ ಕೊಟ್ಟಿದ್ದರೆ ಈ ದೇಶಕ್ಕೆ ಬಿಜೆಪಿ, ‌ಜೆಡಿಎಸ್ ಬೇಕಿರಲಿಲ್ಲ. ಆದರೆ, ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡರು.‌ ಮೋದಿ ಕಳೆದ 10 ವರ್ಷಗಳಿಂದ ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸಿದ ಕಾರಣ ‌ಮತ್ತೆ ಅಧಿಕಾರಕ್ಕೆ ಬರಬೇಕೆಂದು ಜನ ಬಯಸಿದ್ದಾರೆ' ಎಂದು ಅಭಿಪ್ರಾಯಪಟ್ಟರು.

'ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ದೇಶ ಒಡೆದು ಹೋಗುತ್ತಿತ್ತು. ನೆರೆಯ ರಾಷ್ಟ್ರಗಳಿಗೆ ಬಂದ ಪರಿಸ್ಥಿತಿ ಉಂಟಾಗುತಿತ್ತು. ‌ಮೋದಿ‌ ಇರುವ ಕಾರಣ ದೇಶ ಸುಭಿಕ್ಷವಾಗಿದೆ. ಈ ಬಾರಿ ಸಿದ್ದರಾಮಯ್ಯ ಅವರ ಗರ್ವಭಂಗ ಮಾಡಬೇಕೆಂದು ದೇವೇಗೌಡರು ಹೇಳಿದ್ದಾರೆ. ಅದಕ್ಕೆ ನಾವೆಲ್ಲಾ ಸಜ್ಜಾಗೋಣ’ ಎಂದು ತಿಳಿಸಿದರು.

ಮಾಜಿ ಶಾಸಕ ಸಂಪಂಗಿ ಅಸಮಾಧಾನ

ಸಮನ್ವಯ ಸಭೆಯಲ್ಲಿ ಭಾಷಣಕ್ಕೆ ಅವಕಾಶ ಸಿಗಲಿಲ್ಲವೆಂದು ಕೆಜಿಎಫ್‌ನ ಮಾಜಿ ಶಾಸಕ ಬಿಜೆಪಿಯ ವೈ.ಸಂಪಂಗಿ ಅಸಮಾಧಾನಗೊಂಡು ವೇದಿಕೆಯಿಂದ ಕೆಳಗಿಳಿದರು. ಸಂಸದ ಎಸ್.ಮುನಿಸ್ವಾಮಿ ‘ಸಮಯ ಅಭಾವವಿದೆ. ಮುಖಂಡರು ಮಾತನಾಡಿದ್ದು ಸಾಕು’ ಎಂದಿದ್ದು ಅವರ ಕೋಪ ನೆತ್ತಿಗೇರಿಸಿತು. ಬಳಿಕ ಅವರನ್ನು ಕೆ.ಎಸ್‌.ಮಂಜುನಾಥಗೌಡ. ವರ್ತೂರು ಪ್ರಕಾಶ್‌ ಕರೆದು ಮಾತನಾಡಲು ಅವಕಾಶ ‌ನೀಡಿದರು. ಸಂಪಂಗಿ ಮಾತನಾಡಿ 'ನನ್ನ ಅಸಮಾಧಾನವನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳಬೇಡಿ. ಮೈತ್ರಿ ಅಭ್ಯರ್ಥಿ ಗೆಲ್ಲಿಸುವುದೇ ಗುರಿ' ಎಂದರು.

‘ಮುಸ್ಲಿಂ ಬಡಾವಣೆಯಲ್ಲಿ ಬಂಡವಾಳ ಹಾಕಿದ್ದರೆ...’

‘ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಸಂಬಂಧ ಚೆನ್ನಾಗಿದೆ. ಮಾಲೂರಿನಲ್ಲಿ ನಾನು ಜೆಡಿಎಸ್‌ನ ರಾಮೇಗೌಡ ಯಾವತ್ತೂ ಜಗಳವಾಡಿಲ್ಲ‌. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಲೂರಿನ ಮುಸ್ಲಿಂ ಬಡಾವಣೆಗಳಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್ಚು ಬಂಡವಾಳ ಹೂಡಿದ್ದರೆ ಬಿಜೆಪಿ ಅಭ್ಯರ್ಥಿಯಾಗಿದ್ದ ನಾನು ಗೆಲ್ಲುತ್ತಿದ್ದೆ' ಎಂದು ಮಾಜಿ ಶಾಸಕ ಕೆ.ಎಸ್‌.ಮಂಜುನಾಥ್‌ ಗೌಡ ತಿಳಿಸಿದರು.

ಮುಸ್ಲಿಮರು ದಲಿತರನ್ನು ಓಲೈಸಿ: ವರ್ತೂರು

'ಜೆಡಿಎಸ್‌ ಹಾಗೂ ಬಿಜೆಪಿಯವರು ಪರಿಶಿಷ್ಟ ಜಾತಿ ಹಾಗೂ ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ‌ ಮಾಡಬೇಕು. ಆ ಸಮುದಾಯದ ಮುಖಂಡರನ್ನು ಸೆಳೆಯಬೇಕು. ಅದರಲ್ಲಿ ಯಶಸ್ವಿಯಾದರೆ ಗೆಲುವು ಖಚಿತ' ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್‌ ಹೇಳಿದರು. ‘ಈಗ ಒಗ್ಗಟ್ಟಾಗಿ ಈ ಸಭೆ ಸೇರಿರುವುದೇ ನಮ್ಮ‌ ಮೊದಲ ಗೆಲುವು. ವಿಧಾನಸಭೆ ಚುನಾವಣೆ ಸೋಲಿಗೆ ಸೇಡು ತೀರಿಸಿಕೊಳ್ಳೋಣ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT