ಮಾಲೂರು: ಮುಖ್ಯಮಂತ್ರಿ ವಿಶೇಷ ಅನುದಾನದಡಿ ₹2.53 ಕೋಟಿ ವೆಚ್ಚದಲ್ಲಿ ಪುರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ವಿವಿಧ ಕಾಮಗಾರಿಗಳಿಗೆ ಟೆಂಡರ್ ಕರೆಯಲು ಅನುಮೋದನೆ ಪಡೆಯಲಾಯಿತು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಪುರಸಭೆ ಅಧ್ಯಕ್ಷೆ ಕೋಮಲ ನಾರಾಯಣ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳ ಮುಖ್ಯರಸ್ತೆ, ಅಡ್ಡರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುವುದು ಎಂದರು.
ಪುರಸಭೆ ದಾಖಲೆಗಳ ಪ್ರಕಾರ ಸಿ.ಎ ನಿವೇಶನ ಹಾಗೂ ಪುರಸಭೆಗೆ ಸೇರಿದ 396 ಜಾಗ ಒತ್ತುವರಿಯಾಗಿದ್ದು, ನಿವೇಶನ ಯಾರ ಸ್ವಾಧೀನದಲ್ಲಿದೆ ಎಂದು ಮುಂದಿನ ಸಭೆಯಲ್ಲಿ ಚರ್ಚಿಸಿ, ನಿಯಮಾನುಸಾರ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಯೋಜನಾ ಪ್ರಾಧಿಕಾರಕ್ಕೆ ಸದಸ್ಯರ ಆಯ್ಕೆ ಸಂಬಂಧ ಚರ್ಚೆ ನಡೆಯಿತು.
ಶಾಸಕ ಕೆ.ವೈ.ನಂಜೇಗೌಡ 18ನೇ ವಾರ್ಡ್ ಸದಸ್ಯ ಎ.ರಾಜಪ್ಪ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ 11ನೇ ವಾರ್ಡ್ ಸದಸ್ಯ ಆರ್. ವೆಂಕಟೇಶ್ ಅವರನ್ನು ಯೋಜನಾ ಪ್ರಾಧಿಕಾರಕ್ಕೆ ಸದಸ್ಯರನ್ನಾಗಿ ನೇಮಿಸಲು ಸೂಚಿಸಿದರು. ಪುರಸಭೆಯ ಎಲ್ಲಾ ಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿ ಅನುಮೋದಿಸಿದರು.
ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಎ.ರಾಜಪ್ಪ, ಪಟ್ಟಣದ ಪ್ರತಿ ಹೋಟಲ್‌ಗಳಲ್ಲಿ ಆಹಾರ ತಯಾರಿಸಲು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ನಾಗರಿಕರ ಆರೋಗ್ಯದ ದೃಷ್ಠಿಯಿಂದ ಅದನ್ನು ತಡೆಗಟ್ಟಲು ಅಂತಹ ಹೋಟಲ್‌ಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.