ಶುಕ್ರವಾರ, ಸೆಪ್ಟೆಂಬರ್ 24, 2021
26 °C
ರೈತರಿಗೆ ತೋಟಗಾರಿಕೆ ಇಲಾಖೆ ನಿವೃತ್ತ ಹೆಚ್ಚುವರಿ ನಿರ್ದೇಶಕ ಹಿತ್ತಲಮನಿ ಸಲಹೆ

ಮಾವು: ರೋಗ ಹತೋಟಿಗೆ ಸವರುವಿಕೆ ಮುಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮಾವು ಕೊಯ್ಲು ನಂತರದ ಹಂಗಾಮಿನಲ್ಲಿ ಮರಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡು ಮುಂದಿನ ಹಂಗಾಮಿನಲ್ಲಿ ಇಳುವರಿ ಹೆಚ್ಚಿಸಿ’ ಎಂದು ತೋಟಗಾರಿಕೆ ಇಲಾಖೆ ನಿವೃತ್ತ ಹೆಚ್ಚುವರಿ ನಿರ್ದೇಶಕ ಎಸ್.ವಿ.ಹಿತ್ತಲಮನಿ ರೈತರಿಗೆ ಕಿವಿಮಾತು ಹೇಳಿದರು.

ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಗಟ್ಟಹಳ್ಳಿ ಗ್ರಾಮದಲ್ಲಿ ಬುಧವಾರ ರೈತರಿಗೆ ಹಮ್ಮಿಕೊಂಡಿದ್ದ ಮಾವು ಕೊಯ್ಲು ನಂತರದ ಹಂಗಾಮಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

‘ತೋಟಗಾರಿಕೆ ಪಿತಾಮಹಾ ಎಂದು ಹೆಸರಾಗಿರುವ ಎಂ.ಎಚ್.ಮರಿಗೌಡರು ಇಲಾಖೆಗೆ ಅಪಾರ ಕೊಡುಗೆ ನೀಡಿದ್ದಾರೆ. 1950ರ ನಂತರ ಅವರು ರಾಜ್ಯದಲ್ಲಿ ರೈತರಿಗೆ ಮಾವು ಬೆಳೆ ಪರಿಚಯಿಸಿದರು. ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಅವರು ಪ್ರಮುಖ ಕಾರಣಕರ್ತರು. ಮರಿಗೌಡರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತೋಟಗಾರಿಕೆ ಸಸ್ಯ ಕ್ಷೇತ್ರಗಳನ್ನು ಅಭಿಧಿವೃದ್ಧಿಪಡಿಸಿ ಮಾವು ಮತ್ತು ಇತರೆ ಹಣ್ಣಿನ ಬೆಳೆಗಳನ್ನು ಮೂಲೆ ಮೂಲೆಗೂ ಪರಿಚಯಿಸಿದರು’ ಎಂದು ಸ್ಮರಿಸಿದರು.

‘ಮಾವು ಬೆಳೆಯಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಗಿಡಗಳ ಸವರುವಿಕೆಯಿಂದ ಮರಗಳಿಗೆ ಹೆಚ್ಚು ಸೂರ್ಯನ ಬೆಳಕು ಬಿದ್ದು ರೋಗ ಮತ್ತು ಕೀಟ ಬಾಧೆ ನಿಯಂತ್ರಣಕ್ಕೆ ಬರುತ್ತದೆ. ಇದರಿಂದ ಹಣ್ಣುಗಳ ಗುಣಮಟ್ಟ ಚೆನ್ನಾಗಿ ಬರುತ್ತದೆ’ ಎಂದು ತಿಳಿಸಿದರು.

‘ಮಾವು ಬೆಳೆಯು ಹೆಚ್ಚು ಸುಣ್ಣ ಬಯಸುವ ಬೆಳೆಯಾಗಿದೆ. 4ರಿಂದ 5 ವರ್ಷದ ಮರಗಳಿಗೆ ಅರ್ಧ ಕೆ.ಜಿ, 7ರಿಂದ 8 ವರ್ಷದ ಮರಗಳಿಗೆ 1 ಕೆ.ಜಿ, 10ರಿಂದ 12 ವರ್ಷದ ಮರಗಳಿಗೆ 2 ಕೆ.ಜಿ, 15ರಿಂದ 16 ವರ್ಷದ ಮರಗಳಿಗೆ 5 ಕೆ.ಜಿ ಹಾಗೂ 20 ವರ್ಷಕ್ಕಿಂತ ಮೇಲ್ಪಟ್ಟ ಮರಗಳಿಗೆ 8 ಕೆ.ಜಿಯಂತೆ ಅರಳಿದ ಸುಣ್ಣವನ್ನು 2ರಿಂದ 3 ವರ್ಷಕ್ಕೆ ಒಂದು ಬಾರಿ ನೀಡಿದರೆ ಮರಗಳ ಆರೋಗ್ಯ ಸುಧಾರಿಸಿ ಗುಣಮಟ್ಟದ ಹಣ್ಣು ಪಡೆಯಬಹುದು’ ಎಂದು ಸಲಹೆ ನೀಡಿದರು.

ಪೇಸ್ಟ್ ಲೇಪಿಸಿ: ‘ಕಾಂಡ ಕೊರಕದ ಪುನರಾವರ್ತನೆ ತಪ್ಪಿಸಲು ಮಾವಿನ ಮರಗಳ ಕಾಂಡಕ್ಕೆ ರಕ್ಷಣಾ ಪೇಸ್ಟ್ ಲೇಪಿಸಬೇಕು ಅಗತ್ಯತೆ ಇದೆ. 50 ಗ್ರಾಂ ಕಾಪರ್‌ ಆಕ್ಸಿ ಕ್ಲೋರೈಡ್, 10 ಮಿ.ಲೀ ಕ್ಲೋರೋಪೈರೀಪಾಸ್, 5 ಮಿ.ಲೀ ಹೆಕ್ಸಾಕೋನಾಜೋಲ್ ಮತ್ತು ಬಿಳಿ ಬಣ್ಣದ 100 ಮಿ.ಲೀ ಡಿಸ್ಟಂಪರ್‌ ಅನ್ನು ಒಂದು ಲೀಟರ್ ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ ಬ್ರಶ್‌ ಸಹಾಯದಿಂದ ಮಾವಿನ ಬುಡಕ್ಕೆ 3 ಅಡಿ ಎತ್ತರದವರೆಗೆ ಲೇಪಿಸಬೇಕು’ ಎಂದು ವಿವರಿಸಿದರು.

‘ಮಾವಿನ ತೋಟಗಳಲ್ಲಿ ಹಣ್ಣಿನ ನೊಣ ಅಥವಾ ಇತರೆ ಕಾರಣಗಳಿಂದ ಕೊಳೆತು ಬಿದ್ದಿರುವ ಮಾವಿನ ಹಣ್ಣುಗಳು, ಅವುಗಳ ಅವಶೇಷಗಳನ್ನು ಆಯ್ದು ಗುಂಡಿಯಲ್ಲಿ ಹಾಕಿ ಮುಚ್ಚಬೆಕು. ಇದರಿಂದ ಹಣ್ಣಿನ ನೊಣಗಳ ಸಂತತಿ ಕಡಿಮೆಯಾಗುತ್ತದೆ ಮತ್ತು ತೋಟದ ನೈರ್ಮಲ್ಯ ಕಾಪಾಡಲು ಸಹಕಾರಿಯಾಗುತ್ತದೆ’ ಎಂದು ಮಾಹಿತಿ ನೀಡಿದರು.

ಪಾತಿ ಮಾಡಬೇಕು: ‘ಮಾವಿನ ತೋಟದ ಭೂಮಿಯನ್ನು ಉಳುಮೆ ಮಾಡಿಸಿ ಕಸ, ಕಡ್ಡಿ, ಹುಲ್ಲು ತೆಗೆದು ಸ್ವಚ್ಛವಾಗಿಡಬೇಕು. ಮಾವಿನ ಮರಗಳಿಗೆ ಅವುಗಳ ವಯಸ್ಸಿಗೆ ಅನುಗುಣವಾಗಿ ಸೂಕ್ತ ಅಳತೆಯ ಪಾತಿ ಮಾಡಬೇಕು. ಪಾತಿಯಲ್ಲಿ ಉದುರಿ ಬಿದ್ದಿರುವ ಮಾವಿನ ಎಲೆಗಳನ್ನು ಮಣ್ಣಿನಲ್ಲಿ ಮಿಶ್ರಣಗೊಳಿಸಲು ಲಘು ಅಗೆತ ಮಾಡಬೇಕು’ ಎಂದು ಸೂಚಿಸಿದರು.

ಮಾವು ಅಭಿವೃದ್ಧಿ ಕೇಂದ್ರದ ಉಪ ನಿರ್ದೇಶಕ ಜೆ.ಗುಣವಂತ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಸ್‌.ಎ.ರವಿಕುಮಾರ್‌, ಸಹಾಯಕ ತೋಟಗಾರಿಕೆ ನಿರ್ದೇಶಕ ಎಚ್.ಎನ್.ಮಂಜುನಾಥ್, ಹೋಳೂರು ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಶ್ರೀನಿವಾಸಮೂರ್ತಿ, ಸಿಇಒ ಇಮ್ರಾನ್ ಹಾಗೂ ಮಾವು ಬೆಳೆಗಾರರು ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು