ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮ್ಮವಾರಿಪೇಟೆ ಮಾಂಸ ಮಾರುಕಟ್ಟೆ;ಸಮಸ್ಯೆಗಳ ಸರಮಾಲೆ, ವರ್ತಕರು–ವ್ಯಾಪಾರಿಗಳು ಹೈರಾಣ

ಮೂಲಸೌಕರ್ಯ ಮರೀಚಿಕೆ
Published : 16 ಸೆಪ್ಟೆಂಬರ್ 2018, 19:30 IST
ಫಾಲೋ ಮಾಡಿ
Comments

ಕೋಲಾರ: ನಗರದ ಅಮ್ಮವಾರಿಪೇಟೆ ಮಾಂಸ ಮಾರುಕಟ್ಟೆಯಲ್ಲಿ ಮೂಲಸೌಕರ್ಯ ಮರೀಚಿಕೆಯಾಗಿದೆ. ರಸ್ತೆ, ಚರಂಡಿ, ಶೌಚಾಲಯ, ನೀರು, ಸ್ವಚ್ಛತೆ ಹೀಗೆ ಪಟ್ಟಿ ಮಾಡಿದರೆ ಸಮಸ್ಯೆಗಳ ಸರಮಾಲೆಯೇ ಇಲ್ಲಿದೆ.

ನಗರದ ಹೃದಯ ಭಾಗದಲ್ಲಿರುವ ಈ ಮಾರುಕಟ್ಟೆಯಲ್ಲಿ ಕುರಿ ಹಾಗೂ ಕೋಳಿ ಮಾಂಸ, ಮೀನು ಮಾರಾಟ ಮಳಿಗೆಗಳಿವೆ. ಇಲ್ಲಿ ವಾರದ ಏಳೂ ದಿನವು ವಹಿವಾಟು ನಡೆಯುತ್ತದೆ. ಮಾರುಕಟ್ಟೆಯು ಸುಮಾರು 50 ವರ್ತಕರ ಕುಟುಂಬಗಳಿಗೆ ಅನ್ನದ ಮಾರ್ಗ ಕಲ್ಪಿಸಿದೆ.

ಮಾರುಕಟ್ಟೆಯಲ್ಲಿನ ಕೆಲ ವರ್ತಕರು ನಗರಸಭೆ ಮಳಿಗೆಗಳನ್ನು ಬಾಡಿಗೆಗೆ ಪಡೆದು ವಹಿವಾಟು ನಡೆಸುತ್ತಿದ್ದಾರೆ. ಮತ್ತೆ ಕೆಲ ವರ್ತಕರು ಬಾರ್ಲೈನ್‌ ಮಸೀದಿಗೆ ಸೇರಿದ ಮಳಿಗೆಗಳಲ್ಲಿ ಅಂಗಡಿ ತೆರೆದಿದ್ದಾರೆ. ಇನ್ನು ಕೆಲವರು ಮಾರುಕಟ್ಟೆ ಆವರಣದ ಖಾಸಗಿ ಕಟ್ಟಡಗಳಲ್ಲಿ ಮಳಿಗೆ ನಡೆಸುತ್ತಿದ್ದಾರೆ.

ಮಾರುಕಟ್ಟೆ ರಸ್ತೆಗಳು ಕಚ್ಚಾ ರಸ್ತೆಗಳಾಗಿರುವ ಕಾರಣ ಸಂಪೂರ್ಣ ರಾಡಿಯಾಗಿವೆ. ಗ್ರಾಹಕರು ಈ ರಾಡಿ ರಸ್ತೆಗಳಲ್ಲಿ ಜಾರಿ ಬೀಳುವುದು ಸಾಮಾನ್ಯವಾಗಿದೆ. ಮಳೆಗಾಲದಲ್ಲಿ ರಸ್ತೆ ಸಮಸ್ಯೆ ತೀವ್ರಗೊಂಡು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ.

ನೈರ್ಮಲ್ಯ ಸಮಸ್ಯೆ

ಮಾರುಕಟ್ಟೆಯಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆ ಹಳಿ ತಪ್ಪಿದೆ. ತ್ಯಾಜ್ಯ ಸಂಗ್ರಹಣೆಗೆ ಕಸದ ತೊಟ್ಟಿ ನಿರ್ಮಿಸಿಲ್ಲ ಅಥವಾ ಡಬ್ಬಿಗಳನ್ನು ಅಳವಡಿಸಿಲ್ಲ. ಪೌರ ಕಾರ್ಮಿಕರು ಪ್ರತಿನಿತ್ಯ ಮಳಿಗೆಗಳ ಬಳಿ ಬಂದು ತ್ಯಾಜ್ಯ ಸಂಗ್ರಹಿಸುತ್ತಿಲ್ಲ. ಹೀಗಾಗಿ ಮಳಿಗೆ ಕೆಲಸಗಾರರು ಹಾಗೂ ಮಾಲೀಕರು ರಸ್ತೆ ಬದಿಯಲ್ಲಿ, ಮಳಿಗೆಗಳ ಅಕ್ಕಪಕ್ಕ ಹಾಗೂ ಮುಂಭಾಗದಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು, ಮಾರುಕಟ್ಟೆಯಲ್ಲಿ ನೈರ್ಮಲ್ಯ ಸಮಸ್ಯೆ ಎದುರಾಗಿದೆ.

ಮಾರುಕಟ್ಟೆ ಆವರಣದಲ್ಲಿ ರಾಶಿಯಾಗಿ ಬಿದ್ದಿರುವ ತ್ಯಾಜ್ಯವನ್ನು ತೆರವುಗೊಳಿಸಿಲ್ಲ. ತ್ಯಾಜ್ಯವು ಚರಂಡಿಗಳಿಗೆ ವ್ಯಾಪಿಸಿ ಕೊಳಚೆ ನೀರಿನ ಹರಿವಿಗೆ ಅಡ್ಡಿಯಾಗಿದೆ. ತ್ಯಾಜ್ಯದ ಜತೆ ಮಳೆ ನೀರು ಹಾಗೂ ಚರಂಡಿ ನೀರು ಸೇರಿ ಕಸ ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದೆ. ಚರಂಡಿಗಳನ್ನು ಸ್ವಚ್ಛಗೊಳಿಸಿದ ಕಾರಣ ಕೊಳಚೆ ನೀರು ರಸ್ತೆಗೆ ಹರಿಯುತ್ತಿದೆ. ಗ್ರಾಹಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ.

ನೈರ್ಮಲ್ಯ ಸಮಸ್ಯೆಯಿಂದ ನಾಯಿ, ನೊಣ, ಸೊಳ್ಳೆ ಕಾಟ ಹೆಚ್ಚಿದೆ. ಮಾಂಸದ ಮೇಲೆ ನೊಣಗಳು ಕುಳಿತಿರುವ ದೃಶ್ಯ ಕಂಡುಬರುತ್ತದೆ. ಮಳಿಗೆ ಮಾಲೀಕರು ಗಾಜಿನ ಪೆಟ್ಟಿಗೆಗೆಗಳಲ್ಲಿ ಮಾಂಸವಿಡದೆ ಸ್ವಚ್ಛತೆ ನಿರ್ಲಕ್ಷಿಸಿದ್ದಾರೆ.

ಸ್ಥಳಾವಕಾಶವಿಲ್ಲ

ಮಾರುಕಟ್ಟೆಯಲ್ಲಿ ಗ್ರಾಹಕರ ವಾಹನಗಳ ನಿಲುಗಡೆಗೆ ಸ್ಥಳಾವಕಾಶವಿಲ್ಲ. ಹೀಗಾಗಿ ಗ್ರಾಹಕರು ಮಳಿಗೆಗಳ ಅಕ್ಕಪಕ್ಕ ಅಥವಾ ಮುಂಭಾಗದಲ್ಲಿ ವಾಹನ ನಿಲ್ಲಿಸುವುದರಿಂದ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಹಬ್ಬ ಹಾಗೂ ಕೆಲ ವಿಶೇಷ ಸಂದರ್ಭಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿರುವ ಕಾರಣ ವಾಹನ ನಿಲುಗಡೆಗೆ ಸ್ಥಳವೇ ಸಿಗುವುದಿಲ್ಲ. ರಸ್ತೆಗಳು ಕಿರಿದಾಗಿರುವ ಕಾರಣ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ.

ಮೂಲಸೌಕರ್ಯ ಸಮಸ್ಯೆ ಪರಿಹರಿಸುವಂತೆ ವರ್ತಕರು ಹಲವು ಬಾರಿ ಮನವಿ ಸಲ್ಲಿಸಿದ್ದರೂ ನಗರಸಭೆ ಆಡಳಿತ ಯಂತ್ರ ಮೌನಕ್ಕೆ ಶರಣಾಗಿದೆ. ನಗರಸಭೆಯ ನಿರ್ಲಕ್ಷ್ಯದಿಂದ ವರ್ತಕರು ಹಾಗೂ ಗ್ರಾಹಕರು ಹೈರಾಣಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT