ಮಂಗಳವಾರ, ಅಕ್ಟೋಬರ್ 20, 2020
25 °C

ಕೆಜಿಎಫ್‌ ನಗರಸಭೆ ಅಭ್ಯರ್ಥಿ ಆಯ್ಕೆಗೆ ಕಸರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ರಾಬರ್ಟ್‌ಸನ್‌ಪೇಟೆ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಬೆಂಬಲಿತ ಸದಸ್ಯರ ಅಭಿಪ್ರಾಯ ಪಡೆಯಲು ಶಾಸಕಿ ಎಂ.ರೂಪಕಲಾ ಕೋಲಾರದ ಹೊರವಲಯದ ರೆಸಾರ್ಟ್‌ನಲ್ಲಿ ಭಾನುವಾರ ಸಭೆ ನಡೆಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿ, ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗಿದೆ. ಆಕಾಂಕ್ಷಿಗಳು ಕೂಡ ಇದ್ದಾರೆ. ಈ ನಿಟ್ಟಿನಲ್ಲಿ ಇತರ ಸದಸ್ಯರ ಅಭಿಪ್ರಾಯ ಮುಖ್ಯವಾಗಿದೆ. ಎಲ್ಲರ ಅಭಿಪ್ರಾಯದಂತೆ ಅಧಿಕಾರ ನೀಡಲಾಗುವುದು ಎಂದರು.

ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗುವವರು ನಗರದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕು. ಜನರ ಮತ್ತು ಪಕ್ಷದ ಹಿತಕ್ಕೆ ತಕ್ಕಂತೆ ವರ್ತಿಸಬೇಕು. ಸಮಸ್ಯೆ ಇದ್ದರೆ ನೇರವಾಗಿ ನನಗೆ ಹೇಳಬೇಕು. ಅಭಿವೃದ್ಧಿ ವಿಚಾರದಲ್ಲಿ ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರ ನಡೆಸಬೇಕು ಎಂದರು.

ಎಲ್ಲರ ಅಭಿಪ್ರಾಯವನ್ನು ಪಡೆದು, ಚುನಾವಣೆಗೆ ಮುನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು. ಸದಸ್ಯರು ಸಹಕರಿಸಬೇಕು ಎಂದು ಕೋರಿದರು.

ಸಭೆಯಲ್ಲಿ ಕಾಂಗ್ರೆಸ್‌ನ 13 ಸದಸ್ಯರು, ಜೆಡಿಎಸ್‌ನ 3 ಸದಸ್ಯರು ಮತ್ತು 8 ಪಕ್ಷೇತರರು ಇದ್ದರು. ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮುಖಂಡರು ಕೋರಿದ್ದರು. ಬೇರೆ ಪಕ್ಷದವರು ನಮ್ಮನ್ನು ಸಂಪರ್ಕಿಸಿಲ್ಲ. ನಮ್ಮ ವಾರ್ಡ್‌ಗಳ ಅಭಿವೃದ್ಧಿಗೆ ಒತ್ತು ಕೊಟ್ಟರೆ ಬೆಂಬಲ ನೀಡುವುದಾಗಿ ತಿಳಿಸಿರುವುದಾಗಿ ಜೆಡಿಎಸ್‌ ಮುಖಂಡ ರಮೇಶ್ ಮಾಹಿತಿ ನೀಡಿದರು.

ಕಾಂಗ್ರೆಸ್‌ ಪಕ್ಷದಿಂದ ವಳ್ಳಲ್‌ ಮುನಿಸ್ವಾಮಿ, ರಮೇಶ್‌ ಕುಮಾರ್, ಮಾಣಿಕ್ಯಂ, ಜಯಪಾಲ್‌ ಆಕಾಂಕ್ಷಿಗಳಾಗಿದ್ದೇವೆ ಎಂದು ಶಾಸಕಿಗೆ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.