ಶನಿವಾರ, ಅಕ್ಟೋಬರ್ 31, 2020
20 °C
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರಘುನಾಥ್ ಅಭಿಪ್ರಾಯ

ಸದೃಢ ಬದುಕಿಗೆ ಮಾನಸಿಕ ಆರೋಗ್ಯ ಮುಖ್ಯ: ಸತ್ರ ನ್ಯಾಯಾಧೀಶ ಎಂ.ಎಲ್‌.ರಘುನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ದೇಹ ಮತ್ತು ಮನಸ್ಸು ನಾಣ್ಯದ ಎರಡು ಮುಖಗಳಿದ್ದಂತೆ. ಈ ಎರಡೂ ಆರೋಗ್ಯವಾಗಿದ್ದಾಗ ಮಾತ್ರ ಮನುಷ್ಯನ ಜೀವನ ಅರ್ಥಪೂರ್ಣ’ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್‌.ರಘುನಾಥ್ ಅಭಿಪ್ರಾಯಪಟ್ಟರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್‌ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಮಾತನಾಡಿದರು.

‘ಜೀವನಕ್ಕೆ ನೆಲೆ- ಬೆಲೆ ನೀಡುವ ಮಾನಸಿಕ ಆರೋಗ್ಯ ಅತ್ಯಗತ್ಯವಾಗಿದ್ದು, ಸದೃಢ ಬದುಕು ಕಟ್ಟಿಕೊಳ್ಳಲು ಮುಖ್ಯವಾಗಿದೆ. ಮಾನಸಿಕ ಅನಾರೋಗ್ಯಕ್ಕೆ ವಯಸ್ಸಿನ ಭೇದವಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ವಿವಿಧ ಕಾರಣಕ್ಕೆ ಖಿನ್ನತೆ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗಿರುವರನ್ನು ರಕ್ಷಣೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಜನರು ಆಧುನಿಕ ಜೀವನ ಶೈಲಿಯಲ್ಲಿ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಕಡೆಗಣಿಸುತ್ತಿದ್ದಾರೆ. ಇದರಿಂದ ಬದುಕಿನಲ್ಲಿ ನೆಮ್ಮದಿ, ಶಾಂತಿ ಕಳೆದುಕೊಂಡು ಮಾನಸಿಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಕೌಟುಂಬಿಕ ಕಲಹ, ಪತಿ ಪತ್ನಿ ವಿಚ್ಛೇದನ, ಸ್ವಯಂ ತೊಂದರೆ ಸೇರಿದಂತೆ ಹಲವು ಕಾರಣಗಳಿಂದ ಜನ ಖಿನ್ನತೆಗೆ ಒಳಗಾಗುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ಆತಂಕಪಡಬೇಕಿಲ್ಲ: ‘ಮಾನಸಿಕ ರೋಗವೆಂದರೆ ಹುಚ್ಚು ಅಥವಾ ಕಾಯಿಲೆಯೆಂದು ಆತಂಕಪಡಬೇಕಿಲ್ಲ. ಸಮಸ್ಯೆ ಎಂದು ಪರಿಗಣಿಸಿ ಸೂಕ್ತ ಚಿಕಿತ್ಸೆ ಪಡೆದು ಹೊರಬರಲು ಪ್ರಯತ್ನಿಸಬೇಕು. ಮಾನಸಿಕ ಅಸ್ವಸ್ಥರು ಕಂಡುಬಂದರೆ ಅಂತಹವರನ್ನು ಗುರುತಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಆರೋಗ್ಯ ಇಲಾಖೆಯ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಒಪ್ಪಿಸಬೇಕು’ ಎಂದು ಸಲಹೆ ನೀಡಿದರು.

‘ಮಾನಸಿಕ ಸಮಸ್ಯೆಯಿಂದ ಜಗತ್ತಿನಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿವೆ. ಭಾರತವು ಜಾಗತಿಕವಾಗಿ ಅತಿ ಹೆಚ್ಚು ಕಿರಿಯ ವಯಸ್ಸಿನ ನಾಗರಿಕರನ್ನು ಹೊಂದಿರುವ ರಾಷ್ಟ್ರವಾಗಿದೆ. 26 ವರ್ಷದವರ ಸಂಖ್ಯೆ ವೃದ್ಧಿಸಿ ದುಡಿಯುವ ಶಕ್ತಿಯೂ ಹೆಚ್ಚಿದೆ. ಆದರೆ, ಹದಿಹರೆಯದಲ್ಲಿ ಒತ್ತಡ, ಖಿನ್ನತೆಗೆ ಒಳಗಾಗುವವರ ಸಂಖ್ಯೆ ಹೆಚ್ಚಿ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿವೆ’ ಎಂದು ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ರಘುಪತಿಗೌಡ ಹೇಳಿದರು.

10 ಸಾವಿರ ಮನೋರೋಗಿಗಳು: ‘ಪ್ರತಿ ವರ್ಷ ವಿಶ್ವ ಮಾನಸಿಕ ಆರೋಗ್ಯ ದಿನ ಆಚರಿಸಲಾಗುತ್ತದೆ. ಈ ಬಾರಿ ‘ಎಲ್ಲರಿಗೂ ಮಾನಸಿಕ ಆರೋಗ್ಯ: ಹೆಚ್ಚಿನ ಹೂಡಿಕೆ- ಚಿಕಿತ್ಸೆಗೆ ಹೆಚ್ಚಿನ ಅವಕಾಶ’ ಎಂಬ ಘೋಷ ವಾಕ್ಯದೊಂದಿಗೆ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಸಪ್ತಾಹ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ ವಿವರಿಸಿದರು.

‘ದೇಶದಲ್ಲಿ 4.57 ಕೋಟಿ ಜನರು ಅಲ್ಪ ಮಟ್ಟದ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು 10 ಸಾವಿರ ಮಂದಿ ಮನೋರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ 4 ಸಾವಿರ ಮಂದಿ ಮೂರ್ಛೆ ರೋಗದಿಂದ ಮತ್ತು 2,504 ಮಂದಿ ತೀವ್ರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. 709 ಮಂದಿ ಬುದ್ಧಿಮಾಂದ್ಯ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್‌.ಗಂಗಾಧರ್, ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಪವನೇಶ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ ಗಜಾನನಭಟ್, ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು