ಬುಧವಾರ, ನವೆಂಬರ್ 13, 2019
22 °C

ಹಾಲು ಉತ್ಪಾದನೆ: ಪ್ರಥಮ ಸ್ಥಾನಕ್ಕೇರಲು ಸಹಕರಿಸಿ

Published:
Updated:
Prajavani

ಕೋಲಾರ: ‘ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಶೇ.97ರಷ್ಟು ಪ್ರಗತಿ ಸಾಧಿಸಿದ್ದು, ಪ್ರಥಮ ಸ್ಥಾನಕ್ಕೇರಲು ರೈತರು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು’ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಸಲಹೆ ನೀಡಿದರು.

ತಾಲ್ಲೂಕಿನ ಕಾಡಹಳ್ಳಿಯಲ್ಲಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಶನಿವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಕೋಲಾರ 2ನೇ ಸ್ಥಾನದಲ್ಲಿದೆ. ಗುಣಮಟ್ಟಕ್ಕೆ ಆದ್ಯತೆ ನೀಡಿದರೆ ಪ್ರಥಮ ಸ್ಥಾನಕ್ಕೇರಬಹುದು’ ಎಂದು ಹೇಳಿದರು.

‘ಕಾಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಈ ಸಾಲಿನಲ್ಲಿ 3 ಲಕ್ಷ ರೂ ಲಾಭ ಗಳಿಸಿರುವುದು ಸ್ವಾಗತಾರ್ಹ. ಹಾಲಿನ ಗುಣಮಟ್ಟ ಕಾಪಾಡುವಲ್ಲಿ ರಾಜಿ ಮಾಡಿಕೊಳ್ಳದಿರಿ. ಜಿಲ್ಲೆಯ ರೈತರು ಹೈನೋದ್ಯಮವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ರೈತರಿಗೆ ಸೌಕರ್ಯ ಕಲ್ಪಿಸದಿದ್ದರೆ ಅವರಿಗೆ ಮೋಸ ಮಾಡಿದಂತಾಗುತ್ತದೆ’ ಎಂದರು.

‘ಒಕ್ಕೂಟವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದೇವೆ, ಇಲ್ಲಿ ಯಾವುದೇ ರೀತಿ ರಾಜಕೀಯ ಮಾಡುತ್ತಿಲ್ಲ. ಹಾಲಿ ಗುಣಮಟ್ಟ ಕಾಪಾಡದಿದ್ದರೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದೇನೆ. ವೈಯಕ್ತಿಕ ಉದ್ದೇಶಕ್ಕೆ ಅಧಿಕಾರಕ್ಕೆ ಬಂದಿಲ್ಲ’ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ‘ಡಿಸಿಸಿ ಬ್ಯಾಂಕ್ ಇದೀಗ ಆರ್ಥಿಕವಾಗಿ ಸದೃಡವಾಗಿದ್ದು, ರೈತರು ಮತ್ತು ಮಹಿಳೆಯರಿಗೆ ಹೈನುಗಾರಿಕೆಗೆ ಸಾಲ ಸೌಕರ್ಯ ಒದಗಿಸುತ್ತಿದೆ. ಮಹಿಳಾ ಸಂಘಗಳಿಗೆ ನೀಡುತ್ತಿರುವ ಶೂನ್ಯ ಬಡ್ಡಿ ಸಾಲದಿಂದ ಹಸು ಖರೀದಿಸಿ ಸ್ವಾವಲಂಬನೆಯ ಜೀವನ ನಡೆಸಲು ಸಹಕಾರ ಸಂಘಗಳು ಕ್ರಮವಹಿಸಬೇಕು’ ಎಂದು ಸಲಹೆ ನೀಡಿದರು.

ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಶ್ರೀನಿವಾಸಗೌಡ ಮಾತನಾಡಿ, ‘ಎಸ್‍ಎನ್‍ಎಫ್ ಫಲಿತಾಂಶದ ಆಧಾರದ ಮೇರೆಗೆ ಹಾಲಿಗೆ ದರ ನಿಗಧಿ ಮಾಡಿದ ಮೇಲೆ ಪೌಷ್ಠಿಕ ಆಹಾರಕ್ಕೆ ಬೇಡಿಕೆ ಹೆಚ್ಚಾಗಿದೆ. ಬಿಎಂಸಿ ಕೇಂದ್ರಗಳ ಸ್ಥಾಪನೆಯಾದ ಮೇಲೆ ಗುಣಮಟ್ಟದ ಹಾಲು ಉತ್ಪಾದನೆ ಹೆಚ್ಚಾಯಿತು, ಬರಗಾಲದಲ್ಲೂ ನಿರೀಕ್ಷೆಗೂ ಮೀರಿ ಹಾಲು ಉತ್ಪಾದನೆ ಮಾಡುತ್ತಿದ್ದಾರೆ’ ಎಂದರು.

ಸಂಘದ ಅಧ್ಯಕ್ಷ ಎಂ.ವಾನರಾಸಪ್ಪ, ಉಪಾಧ್ಯಕ್ಷ ದೇವರಾಜ, ನಿರ್ದೇಶಕರಾದ ಕೆ.ಎಸ್.ರಾಮರೆಡ್ಡಿ, ಬಾಲರಾಜ, ಕೆ.ವಿ.ಮಂಜುನಾಥ್, ಕೆ.ಆರ್.ಮಂಜುನಾಥ, ಕೆ.ವಿ.ರಾಮದಾಸ, ಕೆ.ಶ್ರೀನಿವಾಸ, ಸರಸ್ವತಮ್ಮ, ನಂದೀಶಮ್ಮ, ಮೇಲ್ವಿಚಾರಕ ಕೆ.ಎಂ.ಶ್ರೀನಿವಾಸರೆಡ್ಡಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)