ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯಗಳ ಸ್ಥಿತಿಗತಿ ತಿಳಿಯುವುದಷ್ಟೇ ಜಾತಿ ಗಣತಿ ಉದ್ದೇಶ: ಬೈರತಿ ಸುರೇಶ್‌

Published 30 ನವೆಂಬರ್ 2023, 15:24 IST
Last Updated 30 ನವೆಂಬರ್ 2023, 15:24 IST
ಅಕ್ಷರ ಗಾತ್ರ

ಕೋಲಾರ: ‘ಜಾತಿ ಜನಗಣತಿ ಮೂಲಕ ಯಾವ ಜಾತಿಯವರು ಎಷ್ಟು ಮಂದಿ ಇದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು ನಮ್ಮ ಉದ್ದೇಶವಲ್ಲ. ಬದಲಾಗಿ ಸಮುದಾಯಗಳ ಜನಜೀವನ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಅರಿಯುವುದು, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ದುರ್ಬಲರಾಗಿರುವವರನ್ನು ಮೇಲೆತ್ತುವ ಉದ್ದೇಶ ಹೊಂದಿದ್ದೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಆಳಂದ ಶಾಸಕ ಬಿ.ಆರ್.ಪಾಟೀಲ ಹಾಗೂ ಸಿದ್ದರಾಮಯ್ಯ 1983ರಿಂದ ಗೆಳೆಯರು. ಇಬ್ಬರೂ ಕುಳಿತು ಮಾತನಾಡಿದ್ದು, ಸಮಸ್ಯೆ ಬಗೆಹರಿದಿದೆ. ನಾನೂ ಜೊತೆಯಲ್ಲಿದ್ದೆ. ಸಚಿವ ಕೃಷ್ಣಬೈರೇಗೌಡರು ಹೇಳಿದ್ದರಲ್ಲಿ ಹಾಗೂ ಬಿ.ಆರ್‌.ಪಾಟೀಲ ಅರ್ಥ ಮಾಡಿಕೊಂಡಿದ್ದರಲ್ಲಿ ಗೊಂದಲ ಉಂಟಾದ ಕಾರಣ ಈ ಸಮಸ್ಯೆ ಉದ್ಭವಿಸಿತ್ತು’ ಎಂದರು.

‘ಸಿಬಿಐ ತನಿಖೆಗೆ ಅನುಮತಿ ನೀಡಿದ್ದ ಹಿಂದಿನ ಬಿಜೆಪಿ ಸರ್ಕಾರದ್ದು ತಪ್ಪು ಇದೆ. ಸಿಬಿಐ ತನಿಖೆಗೆ ಸಂಬಂಧಿಸಿದ ವಿಚಾರದಲ್ಲಿ ನ್ಯಾಯಾಲಯ ಡಿ.ಕೆ.ಶಿವಕುಮಾರ್‌ ಅವರ ನಿಲುವನ್ನು ಎತ್ತಿ ಹಿಡಿದಿದೆ. ನಮಗೆ ನ್ಯಾಯಾಲಯವೇ ದೇವರು. ಈ ಬಗ್ಗೆ ಯಾರೂ ಟೀಕೆ ಮಾಡಬಾರದು’ ಎಂದು ಹೇಳಿದರು.

‘ನಿಗಮ ಮಂಡಳಿಗೆ ನೇಮಕ ವಿಚಾರ ಹೈಕಮಾಂಡ್‌ ನಿರ್ಧಾರಕ್ಕೆ ಬಿಟ್ಟದ್ದು. ಈಗಾಗಲೇ ಪಟ್ಟಿ ಅವರಿಗೆ ಹೋಗಿದೆ. ಅಲ್ಲಿಂದ ಒಪ್ಪಿಗೆ ಪಡೆದು ಬರಬೇಕಷ್ಟೇ. ಅಸಮಾಧಾನ ತಣಿಸುವ ಶಕ್ತಿ ಕಾಂಗ್ರೆಸ್‌ಗೆ ಇದೆ. ನಮ್ಮನ್ನು ಗೆಲ್ಲಿಸಿರುವ ಜನರಿಗೆ ತೊಂದರೆ, ಅನ್ಯಾಯ ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ’ ಎಂದು ಪ್ರತಿಕ್ರಿಯಿಸಿದರು.

‘ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳು ಅಭಿವೃದ್ಧಿ ಕೆಲಸವಲ್ಲವೇ? ಯಜಮಾನಿಗೆ ಪ್ರತಿ ತಿಂಗಳು ₹ 2 ಸಾವಿರ ನೀಡುವುದು, ಮಹಿಳೆಯರಿಗೆ ಉಚಿತವಾಗಿ ಬಸ್‌ನಲ್ಲಿ ಸಂಚಾರ ಅವಕಾಶ, 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌, 5 ಕೆ.ಜಿ ಅಕ್ಕಿ ಬದಲು ಹಣ ನೀಡುವುದು ಅಭಿವೃದ್ಧಿ ಕೆಲಸ ಅಲ್ಲವೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT