ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಅಧಿಕಾರಿಗಳ ವಿರುದ್ಧ ಸಚಿವೆ ಶಶಿಕಲಾ ಜೊಲ್ಲೆ ಸಿಡಿಮಿಡಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಪ್ರಗತಿ ಕುಂಠಿತ
Last Updated 26 ಜೂನ್ 2020, 15:59 IST
ಅಕ್ಷರ ಗಾತ್ರ

ಕೋಲಾರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೆಲ ಯೋಜನೆಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧನೆಯಾಗದ ಬಗ್ಗೆ ಅಸಮಧಾನಗೊಂಡ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು.

ಇಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ, ‘ಪೋಷಣಾ ಅಭಿಯಾನದಡಿ ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ ನಡೆಸಲಾಗಿದೆ. ತರಬೇತಿ, ಸಮುದಾಯ ಆಧಾರಿತ ಚಟುವಟಿಕೆಯಡಿ 12,366 ಕಾರ್ಯಕ್ರಮ ನಡೆಸಲಾಗಿದೆ’ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಸದ ಎಸ್‌.ಮುನಿಸ್ವಾಮಿ, ‘ಕಾರ್ಯಕ್ರಮ ನಡೆಸಿರುವ ಬಗ್ಗೆ ಜನರಿಗೆ ಮಾಹಿತಿಯಿಲ್ಲ’ ಎಂದು ದೂರಿದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಇದಕ್ಕೆ ಧ್ವನಿಗೂಡಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್ ವೆಂಕಟೇಶ್ ಸಹ ‘ಮಾಹಿತಿ ಇಲ್ಲ’ ಎಂದು ಹೇಳಿದರು.

ಇಲಾಖೆ ಕಾರ್ಯಕ್ರಮಗಳಿಗೆ ಪ್ರಚಾರ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವೆ, ‘ಸಭೆಯಲ್ಲಿ ಇರುವವರಲ್ಲೇ ಯಾರಿಗೂ ಮಾಹಿತಿ ಇಲ್ಲ. ಮತ್ತೆ ಏನು ಮಾಡಿದ್ದೀರಿ’ ಎಂದು ಸಿಡಿಪಿಒಗಳನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪಾಲಿ, ‘ಮುಳಬಾಗಿಲು ತಾಲ್ಲೂಕಿನ ಕುರುಡುಮಲೆಯಲ್ಲಿ ಜನಸ್ಪಂದನ ಕಾರ್ಯಕ್ರಮದ ವೇಳೆ ಸೀಮಂತ ಕಾರ್ಯಕ್ರಮ ಮತ್ತು ಜಿಲ್ಲಾ ಕೇಂದ್ರದ ರಂಗಮಂದಿರದಲ್ಲಿ ಸಂಸದರ ಸಮ್ಮುಖದಲ್ಲಿ ಸೀಮಂತ ಕಾರ್ಯಕ್ರಮ ನಡೆಸಿದ್ದೇವೆ’ ಎಂದರು. ಆದರೆ, ಸಿಡಿಪಿಒಗಳು ಸೂಕ್ತ ಮಾಹಿತಿ ನೀಡಲಿಲ್ಲ.

ಕೋಪ ಬರಿಸಬೇಡಿ: ಸಿಡಿಮಿಡಿಗೊಂಡ ಸಚಿವೆ, ‘ಕಾರ್ಯಕ್ರಮ ನಡೆಸಿದ್ದರೆ ಅದಕ್ಕೆ ಸೂಕ್ತ ಪ್ರಚಾರ ನೀಡಿದಂತಿಲ್ಲ. ಹೀಗಾಗಿ ಯಾರಿಗೂ ಮಾಹಿತಿ ಇಲ್ಲ. ಸರ್ಕಾರದ ಕಾರ್ಯಕ್ರಮಗಳಲ್ಲಿ ಫಲಾನುಭವಿಗಳಿಗೆ ಪ್ರಯೋಜನ ಸಿಕ್ಕಿದೆ ಎಂದು ಜನರಿಗೆ ತಿಳಿಯಬೇಕು, ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳನ್ನು ಕರೆಯಬೇಕು’ ಎಂದು ಸೂಚಿಸಿದರು.

‘ಸುಮ್ಮನೆ ನನಗೆ ಕೋಪ ಬರಿಸಬೇಡಿ. ಸಮಾಧಾನದಿಂದ ಇದ್ದೀನಿ, ಬೆನ್ನತ್ತಿದರೆ ಬಿಡುವುದಿಲ್ಲ. ರಾಜ್ಯದ 18 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಎಲ್ಲಾ ಕಡೆ ಇಂತಹ ಕಾರ್ಯಕ್ರಮ ಮಾಡಿದ್ದೀವಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಕೋಲಾರದಲ್ಲಿ ಮಾತ್ರ ಏನೂ ಹೇಳುತ್ತಿಲ್ಲ. ಸುಳ್ಳು ವರದಿ ಯಾಕೆ ಕೊಡುತ್ತೀರಿ’ ಎಂದು ಗರಂ ಆದರು.

‘ಬೇರೆ ಪಕ್ಷಗಳ ಸರ್ಕಾರದಂತೆ ನಮ್ಮ ಸರ್ಕಾರವಿಲ್ಲ, ಕಾರ್ಯಕ್ರಮ ಯಾವುದೇ ಇರಲಿ, ಜನಪ್ರತಿನಿಧಿಗಳಿಗೆ ತಿಳಿಸಿ. ಕಾರ್ಯಕ್ರಮಕ್ಕೆ ಬರಲಾಗದಿದ್ದರೆ ಯಾರನ್ನಾದರೂ ಕಳುಹಿಸಿ ಕೊಡುತ್ತೇವೆ’ ಎಂದು ಸಂಸದ ಮುನಿಸ್ವಾಮಿ ತಾಕೀತು ಮಾಡಿದರು.

ಲಿಂಗಾನುಪಾತ: ‘ಜಿಲ್ಲೆಯಲ್ಲಿ ಲಿಂಗಾನುಪಾತ 928 ಇದೆ. ಇದು ರಾಜ್ಯದ ಸರಾಸರಿಗಿಂತಲೂ ಕಡಿಮೆ. ಮಾಲೂರು ತಾಲ್ಲೂಕಿನಲ್ಲಿ ತೀರಾ ಕಡಿಮೆಯಿದೆ. ಇದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚುವಂತೆ ಸೂಚಿಸಿದ್ದೇವೆ. ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಪರಿಶೀಲಿಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಾಹಿತಿ ನೀಡಿದರು.

‘ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಸಾಕಷ್ಟು ಹುದ್ದೆ ಹಲವು ವರ್ಷಗಳಿಂದ ಖಾಲಿಯಿದ್ದು, ಮೇಲ್ವಿಚಾರಣೆ ಕಷ್ಟವಾಗುತ್ತಿದೆ’ ಎಂದು ಪಾಲಿ ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವೆ, ‘ಹುದ್ದೆಗಳ ಕೊರತೆ ಬಗ್ಗೆ ಪ್ರಸ್ತಾವ ಸಲ್ಲಿಸಿ. ಸಾಧ್ಯವಾದಷ್ಟು ಭರ್ತಿ ಮಾಡಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಅಕ್ರಮ ನಡೆದಿವೆ: ‘ಜಿಲ್ಲೆಯಲ್ಲಿ ಕಳೆದ 7 ವರ್ಷಗಳಿಂದ ಒಂದೇ ಸಂಸ್ಥೆಗೆ ಪೌಷ್ಟಿಕ ಆಹಾರ ಸರಬರಾಜಿನ ಗುತ್ತಿಗೆ ನೀಡಲಾಗಿದೆ. ಇದು ಬದಲಾಗಬೇಕು. ಇಲಾಖೆಯಲ್ಲಿ ಸಾಕಷ್ಟು ಅಕ್ರಮ ನಡೆದಿವೆ. ಇಂತಹ ತಪ್ಪು ಮರುಕಳಿಸಬಾರದು. ಈ ಬಾರಿ ಗುತ್ತಿಗೆದಾರರ ಬದಲಾಯಿಸಿ. ಬೇರೆಯವರಿಗೂ ಅವಕಾಶ ಸಿಗಲಿ’ ಎಂದು ಸಂಸದರು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿ, ‘ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ’ ಎಂದರು.

ಇದರಿಂದ ಕೆರಳಿದ ಸಂಸದರು, ‘ಗುತ್ತಿಗೆದಾರರು ಕೋರ್ಟ್‌ಗೆ ಹೋಗಿದ್ದರೆ ತಡೆಯಾಜ್ಞೆ ತೆರವು ಮಾಡಿಸಲು ಇಲಾಖೆಯು ಪೂರಕ ದಾಖಲೆಪತ್ರ ಸಲ್ಲಿಸಬೇಕು. ಅದು ಬಿಟ್ಟು ಗುತ್ತಿಗೆದಾರರು ಕೋರ್ಟ್‌ಗೆ ಹೋಗಿದ್ದಾರೆಂದು ಹೇಳಿಕೊಂಡು ಕುಳಿತರೆ ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದರ್ಥ’ ಎಂದು ಆರೋಪಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌, ಉಪಾಧ್ಯಕ್ಷೆ ಯಶೋದಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕಿ ಸುರೇಖಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT