ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲದ ಗೂಡಾದ ಕುಂದು ಕೊರತೆ ಸಭೆ

ಶಾಸಕರ ಬೆಂಬಲಿಗರು– ಪಕ್ಷದ ಮುಖಂಡರ ಕಡತ ವಿಲೇವಾರಿಗೆ ಆದ್ಯತೆ
Last Updated 28 ಜನವರಿ 2020, 12:19 IST
ಅಕ್ಷರ ಗಾತ್ರ

ಕೋಲಾರ: ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಗೌಡರು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯು ಗೊಂದಲದ ಗೂಡಾಯಿತು.

ಶಾಸಕರಾಗಲಿ ಅಥವಾ ಅಧಿಕಾರಿಗಳಾಗಲಿ ಸಭೆ ಬಗ್ಗೆ ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿಯನ್ನೇ ಕೊಟ್ಟಿರಲಿಲ್ಲ. ವೈಯಕ್ತಿಕ ಕೆಲಸಕ್ಕೆ ತಾಲ್ಲೂಕು ಕಚೇರಿಗೆ ಬಂದಿದ್ದ ಸಾರ್ವಜನಿಕರು ಶಾಸಕರ ಸಭೆಯ ಸುದ್ದಿ ತಿಳಿದು ಸರದಿ ಸಾಲಿನಲ್ಲಿ ನಿಂತರು.

ಆದರೆ, ಶಾಸಕರ ಬೆಂಬಲಿಗರು ಹಾಗೂ ಜೆಡಿಎಸ್‌ ಮುಖಂಡರು ಸಾಲಿನಲ್ಲೇ ನಿಲ್ಲದೆ ಏಕಾಏಕಿ ಶಾಸಕರ ಬಳಿ ಹೋಗಿ ತಮ್ಮ ಕಡತಗಳನ್ನು ವಿಲೇವಾರಿ ಮಾಡಿಸಿಕೊಂಡರು. ತಿಂಡಿ, ನೀರು ಇಲ್ಲದೆ ಗಂಟೆಗಟ್ಟಲೇ ಸಾಲಿನಲ್ಲಿ ಕಾದು ನಿಂತಿದ್ದ ಸಾರ್ವಜನಿಕರು ಶಾಸಕರ ಬೆಂಬಲಿಗರು ಹಾಗೂ ಜೆಡಿಎಸ್‌ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಮುಖಂಡರು ಹಾಗೂ ಬೆಂಬಲಿಗರು ಶಾಸಕರ ಶಿಫಾರಸ್ಸಿನ ಮೇರೆಗೆ ಸಾರ್ವಜನಿಕರನ್ನು ಲೆಕ್ಕಿಸದೆ ಕಚೇರಿಯೊಳಗೆ ಹೋದರು. ಇದರಿಂದ ಕೆಂಡಾಮಂಡಲರಾದ ಸಾರ್ವಜನಿಕರು, ‘ಇಲ್ಲಿ ಶಿಫಾರಸ್ಸಿನ ಮೇಲೆ ಬಂದವರಿಗಷ್ಟೇ ಅವಕಾಶ. ನಾವು ಮನುಷ್ಯರಲ್ಲವೇ? ನಿಯಮದ ಪ್ರಕಾರ ಸಾಲಿನಲ್ಲಿ ಹೋಗಿ’ ಎಂದು ಕಿಡಿಕಾರಿದರು. ಇದರಿಂದ ಪರಸ್ಪರ ವಾಗ್ವಾದ ನಡೆದು ಗೊಂದಲ ಸೃಷ್ಟಿಯಾಯಿತು.

ಆಗ ಮಧ್ಯಪ್ರವೇಶಿಸಿದ ಶಾಸಕರು, ‘ಗುಂಪಾಗಿ ಬರಬೇಡಿ. ಒಬ್ಬೊಬ್ಬರಾಗಿ ಸಾಲಿನಲ್ಲಿ ಬನ್ನಿ’ ಎಂದು ಸೂಚಿಸಿದರು. ಶಾಸಕರು ಹಿಂದಿನ ವಾರ ಕುಂದು ಕೊರತೆ ಸಭೆ ನಡೆಸದ ಕಾರಣ ರೈತರು ಮತ್ತು ಸಾರ್ವಜನಿಕರ ಸಂಖ್ಯೆ ಹೆಚ್ಚಿತ್ತು.

‘ಪಿ ಬಂಬರ್ ಸಮಸ್ಯೆ, ಪಹಣಿ ತಿದ್ದುಪಡಿ, ಭೂ ದಾಖಲೆಪತ್ರ ವಿತರಣೆ, ಸರ್ವೆ ಕಾರ್ಯ, ದುರಸ್ತಿಗೆ ಸಂಬಂಧಿಸಿದಂತೆ  80ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. ಈ ಅರ್ಜಿಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಬೇಕು’ ಎಂದು ಶಾಸಕರು ತಹಶೀಲ್ದಾರ್ ಶೋಭಿತಾ ಅವರಿಗೆ ಸೂಚಿಸಿದರು.

‘ಹಿಂದಿನ ಸಭೆಗಳಲ್ಲಿ ಸಲ್ಲಿಕೆಯಾದ ಅರ್ಜಿಗಳ ಪೈಕಿ ಎಷ್ಟು ಇತ್ಯರ್ಥಗೊಂಡಿವೆ. ಈ ಬಗ್ಗೆ ಮಾಹಿತಿ ಕೊಟ್ಟು ಸಭೆ ಮುಂದುವರಿಸಬೇಕು. ಮಾಹಿತಿ ನೀಡದೆ ಸಭೆ ನಡೆಸಿದರೆ ಪ್ರಯೋಜನವಿಲ್ಲ. ನಾನು ಹಿಂದಿನ ಸಭೆಯಲ್ಲಿ ಸಲ್ಲಿಸಿದ ಅರ್ಜಿಗೆ ಅಧಿಕಾರಿಗಳು ಸ್ಪಂದಿಸಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಯಾವ ಪುರುಷಾರ್ಥಕ್ಕೆ ಸಭೆ ನಡೆಸುತ್ತೀರಿ?’ ಎಂದು ತಾಲ್ಲೂಕಿನ ಹೂವಳ್ಳಿ ಗ್ರಾಮದ ಸಿ.ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದರು.

ದಲ್ಲಾಳಿಗಳ ಹಾವಳಿ: ‘ಸಕಾಲದಲ್ಲಿ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ದಾಖಲೆಪತ್ರ ಲಭ್ಯವಿಲ್ಲ ಎಂದು ಸಬೂಬು ಹೇಳುತ್ತಾರೆ. ತಾಲ್ಲೂಕು ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಿದೆ. ಜನಸಾಮಾನ್ಯರು ಬಂದರೆ ಅಧಿಕಾರಿಗಳು ಕ್ಯಾರೆ ಎನ್ನುವುದಿಲ್ಲ’ ಎಂದು ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ ದೂರಿದರು.

‘ತಾಲ್ಲೂಕು ವ್ಯಾಪ್ತಿಯಲ್ಲಿ ಭೂಗಳ್ಳರು ಸಾಕಷ್ಟು ಸರ್ಕಾರಿ ಜಮೀನು ಒತ್ತುವರಿ ಮಾಡುತ್ತಿದ್ದಾರೆ. ಈ ಅಕ್ರಮಕ್ಕೆ ಕಂದಾಯ ಇಲಾಖೆ ಅಧಿಕಾರಿಗಳೇ ನಕಲಿ ದಾಖಲೆಪತ್ರ ಸೃಷ್ಟಿಸಿ ಕೊಡುತ್ತಿದ್ದಾರೆ’ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್, ‘ನಾವು ಭೂಗಳ್ಳರ ಪರ ಕೆಲಸ ಮಾಡುತ್ತಿಲ್ಲ. ಸರ್ಕಾರಿ ಜಾಗ ಉಳಿಸುವ ಜವಾಬ್ದಾರಿ ನಮ್ಮ ಮೇಲೂ ಇದೆ. ಇದಕ್ಕೆ ಸಂಘ ಸಂಸ್ಥೆಗಳವರು, ಸಾರ್ವಜನಿಕರು ಸಹಕರಿಸಬೇಕು. ಒತ್ತುವರಿ ಸಂಬಂಧ ಪ್ರತ್ಯೇಕ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ಮಾತಿನ ಚಕಮಕಿ: ‘ಸರ್ಕಾರದಿಂದ ನಮಗೆ ಮಂಜೂರಾಗಿರುವ ಜಮೀನನ್ನು ಆಂಧ್ರಪ್ರದೇಶದ ಉದ್ಯಮಿ ಹರಿರೆಡ್ಡಿ ಎಂಬುವರು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವು ಮಾಡಿಸುವಂತ ತಹಶೀಲ್ದಾರ್‌ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ತಾಲ್ಲೂಕಿನ ಗಂಗಸರನಹಳ್ಳಿಯ ರೈತ ವೆಂಕಟೇಶಪ್ಪ ಅಳಲು ತೋಡಿಕೊಂಡರು.

ಇದಕ್ಕೆ ಉತ್ತರಿಸಿದ ತಹಶೀಲ್ದಾರ್, ‘ಜಮೀನಿಗೆ ಸಂಬಂಧಪಟ್ಟ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ’ ಎಂದು ಹೇಳಿದರು.

ಆಗ ರೈತ ವೆಂಕಟೇಶಪ್ಪ, ‘ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಗೊಂಡಿದ್ದು, ನಮ್ಮ ಪರವಾಗಿ ತೀರ್ಪು ಬಂದಿದೆ. ಜತೆಗೆ ಒತ್ತುವರಿ ತೆರವು ಮಾಡಿಸುವಂತೆ ಆದೇಶವಾಗಿದೆ. ಆದರೆ, ತಹಶೀಲ್ದಾರ್ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಕಣ್ಣೀರಿಟ್ಟರು.

ಈ ವಿಚಾರವಾಗಿ ರೈತ ಸೇನೆ ಸದಸ್ಯರು, ಗಂಗರಸನಹಳ್ಳಿ ಗ್ರಾಮಸ್ಥತರು ಹಾಗೂ ತಹಶೀಲ್ದಾರ್ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಕೋಪಗೊಂಡ ತಹಶೀಲ್ದಾರ್, ‘ನೀವು ಹೀಗೆ ಮಾಡಿದರೆ ನಿಮ್ಮ ವಿರುದ್ಧ ಎಫ್‌ಐಆರ್ ದಾಖಲಿಸುತ್ತೇನೆ’ ಎಂದು ಗುಡುಗಿದರು.

ಆಗ ಶಾಸಕರು ಮಧ್ಯಪ್ರವೇಶಿಸಿ, ‘ರೈತರ ವಿರುದ್ಧ ದೂರು ದಾಖಲಿಸಿದರೆ ಅದರ ಪರಿಣಾಮ ಬೇರೆಯಾಗುತ್ತದೆ. ರೈತರ ಕೆಲಸದ ವಿಚಾರದಲ್ಲಿ ಮೀನಾಮೇಷ ಎಣಿಸುವುದು ಸರಿಯಲ್ಲ. ಯಾವುದೇ ರೈತ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಪರಿಶೀಲಿಸಿ ನ್ಯಾಯ ದೊರಕಿಸಿ ಕೊಡಬೇಕು’ ಎಂದು ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT