ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಸಂಸದ ಸುರೇಶ್‌ರ ಪ್ರತಿಕೃತಿ ದಹನ, ಪ್ರತಿಭಟನೆ

ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌–ಕಾಂಗ್ರೆಸ್‌ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ
Last Updated 4 ಜನವರಿ 2022, 15:27 IST
ಅಕ್ಷರ ಗಾತ್ರ

ಕೋಲಾರ: ರಾಮನಗರದಲ್ಲಿ ನಡೆದ ಅಂಬೇಡ್ಕರ್ ಮತ್ತು ಕೆಂಪೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ತೋರಿದ ವರ್ತನೆ ಸರಿಯಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿ ಮಂಗಳವಾರ ಪ್ರತಿಭಟನೆ ಮಾಡಿದರು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ವೃತ್ತದಲ್ಲಿ ಡಿ.ಕೆ.ಸುರೇಶ್‌ರ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಕಾಂಗ್ರೆಸ್‌ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಅಂಬೇಡ್ಕರ್ ಮತ್ತು ಕೆಂಪೇಗೌಡರ ಪ್ರತಿಮೆ ಅನಾವರಣ ಹಾಗೂ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಸುರೇಶ್ ಮತ್ತು ವಿಧಾನ ಪರಿಷತ್‌ ಸದಸ್ಯ ರವಿಕುಮಾರ್ ನಡೆದುಕೊಂಡ ರೀತಿ ಖಂಡನೀಯ. ಡಿ.ಕೆ.ಶಿವಕುಮಾರ್‌ ಸಹೋದರರು ರಾಮನಗರದಲ್ಲಿ ಹಣ ಮತ್ತು ತೋಳ್ಬಲದಿಂದ ರಾಜಕಾರಣ ಮಾಡುತ್ತಿರುವುದಕ್ಕೆ ಇದು ಸ್ಪಷ್ಟ ನಿರ್ದೇಶನ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್‌ ಕಿಡಿಕಾರಿದರು.

‘ಕಾಂಗ್ರೆಸ್ ಮೊದಲಿನಿಂದಲೂ ಗೂಂಡಾಗಿರಿ ಸಂಸ್ಕೃತಿಯಲ್ಲಿ ಬೆಳೆದಿದೆ. ಇದು ರಾಜ್ಯಕ್ಕೆ ಅಪಾಯದ ಸಂಕೇತ. ಸುರೇಶ್‌ ಅವರಿಗೆ ಜವಾಬ್ದಾರಿಯುತ ಸಂಸದರಾಗಿ ಮುಖ್ಯಮಂತ್ರಿ ಎದುರು ಹೇಗೆ ವರ್ತಿಸಬೇಕೆಂಬ ಕನಿಷ್ಠ ಪರಿಜ್ಞಾನವಿಲ್ಲ. ಪರಿಷತ್‌ ಸದಸ್ಯ ರವಿಕುಮಾರ್‌ ವೇದಿಕೆಯಲ್ಲಿ ಮಾತನಾಡುತ್ತಿದ್ದ ಅಶ್ವತ್ಥನಾರಾಯಣ ಅವರಿಂದ ಮೈಕ್ ಕಿತ್ತುಕೊಂಡು ಹಲ್ಲೆಗೆ ಯತ್ನಿಸಿದ್ದಾರೆ. ಇದು ಗೂಂಡಾ ಸಂಸ್ಕೃತಿಯ ನಡೆ’ ಎಂದು ಟೀಕಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ನ ಒಬ್ಬರೇ ಸಂಸದರಿದ್ದು, ಅವರು ಗೂಂಡಾ ರೀತಿ ವರ್ತಿಸಿದ್ದಾರೆ. ಕಾಂಗ್ರೆಸ್‌ಗೆ ರಾಜ್ಯದ ಜನ ಪಾಠ ಕಲಿಸಿದರೂ ಬುದ್ದಿ ಬಂದಿಲ್ಲ. ಡಿ.ಕೆ.ಶಿವಕುಮಾರ್‌ ವ್ಯವಸ್ಥಿತವಾಗಿ ಸಂಚು ರೂಪಿಸಿ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಸುರೇಶ್‌ರ ವರ್ತನೆಯಿಂದ ನಾಡಿನ ಜನ ತಲೆ ತಗ್ಗಿಸುವಂತಾಗಿದೆ’ ಎಂದು ಕುಟುಕಿದರು.

ಸರ್ವಾಧಿಕಾರಿ ವರ್ತನೆ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತನಾಡುವ ಅವಕಾಶವಿದೆ. ಆದರೆ, ಸಂಸದ ಸುರೇಶ್ ಅವರು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡು ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ. ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮುಖಂಡರು ಅನಾಗರಿಕವಾಗಿ ನಡೆದುಕೊಂಡು ಅಂಬೇಡ್ಕರ್ ಮತ್ತು ಕೆಂಪೇಗೌಡರಿಗೆ ಅವಮಾನ ಮಾಡಿದ್ದಾರೆ’ ಎಂದು ಪ್ರತಿಭಟನಾಕಾರರು ಗುಡುಗಿದರು.

‘ಶಿಸ್ತಿನ ಪಕ್ಷವಾಗಿ ಬಿಜೆಪಿಗೆ ಸಂಯಮವಿದೆ. ಆದರೆ, ಕಾಂಗ್ರೆಸ್ ಗೂಂಡಾಗಿರಿ ಸಂಸ್ಕೃತಿಯ ಪಕ್ಷ. ಗಲಭೆ ಸೃಷ್ಟಿಸಿ ಅಧಿಕಾರಕ್ಕೆ ಬರುವುದು ಆ ಪಕ್ಷದ ಅಜೆಂಡಾ. ಆದರೆ, ಬಿಜೆಪಿ ಇದಕ್ಕೆ ಅವಕಾಶ ಕೊಡುವುದಿಲ್ಲ. ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ರಂಪಾಟ ಮಾಡಿರುವ ಸುರೇಶ್‌ ಮತ್ತು ರವಿಕುಮಾರ್ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಸಮನ್ವಯ ಸದಸ್ಯ ವಿಜಿಕುಮಾರ್‌, ಯುವ ಮೋರ್ಚಾ ಅಧ್ಯಕ್ಷ ಬಾಲಾಜಿ, ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ ಹಾಗೂ ಮುಖಂಡರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT