ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನಭಾಗ್ಯ ಯೋಜನೆಯಡಿ 15 ಕೆ.ಜಿ ಅಕ್ಕಿ ನೀಡಿ: ಸಂಸದ ಎಸ್‌.ಮುನಿಸ್ವಾಮಿ

Published 19 ಜೂನ್ 2023, 14:37 IST
Last Updated 19 ಜೂನ್ 2023, 14:37 IST
ಅಕ್ಷರ ಗಾತ್ರ

ಕೆಜಿಎಫ್‌: ‘ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಕಡ್ಡಾಯವಾಗಿ ಹದಿನೈದು ಕೆ.ಜಿ ಅಕ್ಕಿ ಕೊಡಬೇಕು. ಅದಕ್ಕಿಂತ ಕಡಿಮೆಯಾದರೆ ಒಪ್ಪತಕ್ಕದಲ್ಲ’ ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.

ತಾಲ್ಲೂಕಿನ ಕ್ಯಾಸಂಬಳ್ಳಿ ಗ್ರಾಮದಲ್ಲಿ ಸೋಮವಾರ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.

‘ಕೇಂದ್ರ ಸರ್ಕಾರವು ಬಡವರಿಗಾಗಿ ಐದು ಕೆ.ಜಿ ಅಕ್ಕಿ ಕೊಡುತ್ತದೆ. ಈಗಿನ ಸರ್ಕಾರ ಚುನಾವಣೆಯಲ್ಲಿ ಗೆಲ್ಲಲು ಹತ್ತು ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ವಚನ ಕೊಟ್ಟಿದ್ದರು. ಅದರಂತೆ ರಾಜ್ಯ ಸರ್ಕಾರದ ಹತ್ತು ಕೆ.ಜಿ ಮತ್ತು ಕೇಂದ್ರ ಸರ್ಕಾರದ ಐದು ಕೆ.ಜಿ ಅಕ್ಕಿ, ಒಟ್ಟು ಹದಿನೈದು ಕೆ.ಜಿ ಅಕ್ಕಿಯನ್ನು ಬಡವರಿಗೆ ವಿತರಣೆ ಮಾಡಬೇಕು. ಕಾಂಗ್ರೆಸ್‌ನವರು ಗ್ಯಾರಂಟಿ ಎಂದು ಹೇಳಿಕೊಂಡು ಓಟ್ ಗಳಿಸಿದರು. ಈಗ ಚುನಾವಣೆ ನಡೆದರೆ ಅದಕ್ಕೆ ಅರ್ಧದಷ್ಟು ಮತ ಕೂಡ ಬರುವುದಿಲ್ಲ’ ಎಂದು ಹೇಳಿದರು.

ತಾಲ್ಲೂಕಿನಲ್ಲಿ 16,714 ಕಟ್ಟಡ ಕಾರ್ಮಿಕರಿದ್ದಾರೆ ಎಂಬ ಅಂಕಿ ಅಂಶಗಳಿವೆ. ಅವುಗಳಲ್ಲಿ ಶೇ 25ರಷ್ಟು ಕಟ್ಚಡ ಕಾರ್ಮಿಕರ ಮಕ್ಕಳಿಗೆ ಸರ್ಕಾರದ ಸವಲತ್ತು ನೀಡಿಲ್ಲ. ಕಾರ್ಮಿಕ ಇಲಾಖೆಯಲ್ಲಿ ಬೇಕಾದಷ್ಟು ಹಣ ಇದೆ. ಆ ದುಡ್ಡ ಕಾರ್ಮಿಕರ ಮಕ್ಕಳಿಗೆ ತಲುಪಬೇಕು. ಕಾರ್ಮಿಕ ಅಧಿಕಾರಿಗಳು ಗ್ರಾಮಗಳಿಗೆ ಹೋಗಿ ಅರಿವು ಮೂಡಿಸ ಬೇಕು. ಕಾರ್ಮಿಕರ ಮಕ್ಕಳ ನೋಂದಣಿ ಮಾಡಿಕೊಂಡು ಅವರಿಗೆ ಸರ್ಕಾರದ ವಿದ್ಯಾಭ್ಯಾಸ ನೆರವನ್ನು ನೀಡಬೇಕು. ಈ ಕಾರ್ಯ ಜಿಲ್ಲಾ ಮಟ್ಟದಲ್ಲಿ ನಡೆಯಬೇಕು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈ ನಿಟ್ಟಿನಲ್ಲಿ ಉಸ್ತುವಾರಿ ವಹಿಸಿ ಅಧಿಕಾರಿಗಳಿಗೆ ಗುರಿ ನಿಗದಿ ಮಾಡಬೇಕು ಎಂದು ತಿಳಿಸಿದರು.

ಕ್ಯಾಸಂಬಳ್ಳಿ ಗ್ರಾಮಕ್ಕೆ ಬೇಕಾದ ಆಂಬುಲೆನ್ಸ್ ದುರಸ್ತಿ ಮಾಡಿಸಬೇಕು. ಸರ್ಕಾರದಿಂದ ಅನುದಾನ ಸಿಗದೆ ಇದ್ದರೂ ಸ್ವಂತ ದುಡ್ಡಿನಿಂದ ಮಾಡಿಸುತ್ತೇನೆ ಎಂದು ಆರೋಗ್ಯ ಅಧಿಕಾರಿಗಳಿಗೆ ಮುನಿಸ್ವಾಮಿ ತಿಳಿಸಿದರು. ಅಂಗನವಾಡಿ ಮತ್ತು ಶಾಲೆಗಳ ಶಿಕ್ಷಕರು ಬಿಸಿಯೂಟಕ್ಕಾಗಿ ರೈತರಿಂದ ನೇರವಾಗಿ ತರಕಾರಿ ಖರೀದಿಸಬೇಕು. ನಗರದ ಮಾರುಕಟ್ಟೆಯಲ್ಲಿ ಖರೀದಿಸಬಾರದು. ಇದರಿಂದಾಗಿ ಸ್ಥಳೀಯ ರೈತರಿಗೆ ಆರ್ಥಿಕವಾಗಿ ಅನುಕೂಲವಾಗುತ್ತದೆ ಎಂದರು.

ಗ್ರಾಮಗಳ ಅಂಗಡಿಗಳಲ್ಲಿ ಮದ್ಯದ ಮಾರಾಟ ಜೋರಾಗಿ ನಡೆಯುತ್ತಿದೆ. ಅತಿಯಾದ ಮದ್ಯಸೇವೆನಯಿಂದಾಗಿ ವಯಸ್ಸಿಗೆ ಬಂದ ಯುವಕರು ಸಾವನ್ನಪ್ಪುತ್ತಿದ್ದಾರೆ. ಅವರ ಸಂಸಾರ ಅನಾಥವಾಗುತ್ತಿದೆ. ಅಬಕಾರಿ, ಪೊಲೀಸ್ ಮತ್ತು ಪಂಚಾಯಿತಿ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಮದ್ಯ ಮಾರಾಟವನ್ನು ನಿಲ್ಲಿಸಬೇಕು. ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುನಿಸ್ವಾಮಿ ಸೂಚಿಸಿದರು.

ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ಸಂಸದರ ಆದರ್ಶ ಗ್ರಾಮ ಕಾರ್ಯಕ್ರಮಕ್ಕೆ ಶಾಸಕರು ಬರಬೇಕಿತ್ತು. ಅವರು ಡಿಸಿಸಿ ಬ್ಯಾಂಕ್ ನಿರ್ದೇಶಕರು ಕೂಡ ಆಗಿದ್ದಾರೆ. ಮಹಿಳೆಯರು ಸಾಲ ತೀರಿಸಲಾಗದೆ ಬೀದಿಗೆ ಬಂದಿದ್ದಾರೆ. ಚುನಾವಣೆ ಮುನ್ನ ಮಹಿಳೆಯರ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿದ್ದವರು ಬಾರದೆ ಇರುವುದು ಸರಿಯಲ್ಲ ಎಂದು ಹೇಳಿದರು.

ಬೆಸ್ಕಾಂ ಇಲಾಖೆಯಲ್ಲಿ ಲಂಚ ಇಲ್ಲದೆ ಇದ್ದರೆ ಕೆಲಸ ಆಗುವುದಿಲ್ಲ. ಟ್ರಾನ್ಸ್ ಫಾರ್ಮ್‌ ಹಾಕಲು ₹50 ಸಾವಿರ ಲಂಚ ಕೇಳುತ್ತಾರೆ. ಬ್ಯಾಂಕ್‌ನವರು ಸಾಲಕ್ಕೆ ಹೆಚ್ಚಿನ ಬಡ್ಡಿ ವಿಧಿಸಿದ್ದಾರೆ. ಬೆಸ್ಕಾಂ ಬಿಲ್‌ ಹೆಚ್ಚಾಗಿದೆ. ತೋಟಗಾರಿಕೆ ಇಲಾಖೆಯಲ್ಲಿ ಫಲಾನುಭವಿಗಳ ಆಯ್ಕೆ ಸಮರ್ಪಕವಾಗಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬಂದವು.

ಸಂಸದ ಮುನಿಸ್ವಾಮಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್‌ ಕುಮಾರ್‌, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಮ್ಮ, ಉಪಾಧ್ಯಕ್ಷೆ ಅಂಜಲಿ ಪ್ರತಾಪ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್‌, ಸೂರ್ಯನಾರಾಯಣರಾವ್, ಶೃತಿ, ವೆಂಕಟಾಚಲಪತಿ, ಮುದ್ದಣ್ಣ, ರಮೇಶ್‌, ತಾಲ್ಲೂಕು ಪಂಚಾಯಿತಿ ಅಧಿಕಾರಿ ಮಂಜುನಾಥ್ ಹಾಜರಿದ್ದರು.

ಪ್ರತಿ ಮನೆಗೂ ವಿದ್ಯುತ್‌
ಯಾವುದೋ ಒಂದು ಮೂಲೆಯಲ್ಲಿ ಮನೆ ಇದ್ದರೂ ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಕೇಂದ್ರ ಸರ್ಕಾರ ಉಜ್ವಲ ನಿರಂತರ ಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದೆ. ಆದ್ದರಿಂದ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡಲು ಮೀನಾಮೇಷ ಎಣಿಸಬಾರದು. ರಾಜ್ಯ ಸರ್ಕಾರದ ಗ್ಯಾರಂಟಿ ಎಲ್ಲಾ ಫಲಾನುಭವಿಗಳಿಗೆ ಕೂಡ ತಲುಪಬೇಕು. ಈಗಾಗಲೇ ವಿದ್ಯುತ್ ಏರಿಕೆಯಿಂದ ಜನ ಕಂಗೆಟ್ಟಿದ್ದಾರೆ. ಉಚಿತ ವಿದ್ಯುತ್ ಫಲಾನುಭವಿಗಳನ್ನು ಗುರುತಿಸುವ ಕೆಲಸ ಬೆಸ್ಕಾಂ ಮಾಡಬೇಕು ಎಂದು ಮುನಿಸ್ವಾಮಿ ಹೇಳಿದರು.
ಅಧಿಕಾರಿಗಳ ಜತೆ ಬಿಜೆಪಿ ಮುಖಂಡರು
ಸಂಸದರ ಆದರ್ಶ ಗ್ರಾಮ ಯೋಜನೆಯಡಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ಜೊತೆ ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಅಶ್ವಿನಿ ಮತ್ತು ಜನಪ್ರಕಾಶ್‌ ನಾಯ್ಡು ಕುಳಿತಿದ್ದರು. ಸಂಸದ ಎಸ್‌.ಮುನಿಸ್ವಾಮಿ ವೇದಿಕೆಗೆ ಮಾಜಿ ಶಾಸಕ ವೈ.ಸಂಪಂಗಿ ಅವರನ್ನು ಆಹ್ವಾನಿಸಿದರೂ ಅವರು ವೇದಿಕೆಗೆ ಹೋಗದೆ ಸಭಿಕರ ಮುಂದಿನ ಸಾಲಿನಲ್ಲಿ ಕುಳಿತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT