ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಡಿ ಭಾಗದ ಕೆರೆಗಳ ನೀರು ಆಂಧ್ರದ ಪಾಲು

ನೀರು ಉಳಿಸಲು ತಾಲ್ಲೂಕಿಗೆ ಬೇಕಿದೆ ಯರಗೋಳ್ ಡ್ಯಾಮ್ ಮಾದರಿ ಯೋಜನೆ
ಕೆ.ತ್ಯಾಗರಾಜ್ ಕೊತ್ತೂರು
Published 12 ಆಗಸ್ಟ್ 2024, 8:46 IST
Last Updated 12 ಆಗಸ್ಟ್ 2024, 8:46 IST
ಅಕ್ಷರ ಗಾತ್ರ

ಮುಳಬಾಗಿಲು: ರಾಜ್ಯದ ಕಟ್ಟ ಕಡೆಯ ಹಾಗೂ ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡ ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ತುಂಬಿ ತುಳುಕುವ ಕೆರೆ ಮತ್ತು ಮಳೆಯ ನೀರು ವ್ಯರ್ಥವಾಗಿ ಆಂಧ್ರಪ್ರದೇಶಕ್ಕೆ ಹರಿದುಹೋಗುತ್ತಿದೆ. ಆದರೆ, ಮಳೆಗಾಲದಲ್ಲಿ ವ್ಯರ್ಥವಾಗಿ ಆಂಧ್ರಪ್ರದೇಶದತ್ತ ಹರಿಯುವ ಹೆಚ್ಚುವರಿ ನೀರನ್ನು ಶೇಖರಿಸಿಟ್ಟುಕೊಂಡು ಬೇಸಿಗೆ ಮತ್ತು ಚಳಿಗಾಲದಲ್ಲಿ ಸದುಪಯೋಗಪಡಿಸಿಕೊಳ್ಳಲು ಯರಗೋಳ್ ಜಲಾಶಯದ ಮಾದರಿಯಲ್ಲೇ ಜಲಾಶಯವೊಂದನ್ನು ನಿರ್ಮಿಸಬೇಕು ಎಂಬುದು ತಾಲ್ಲೂಕಿನ ಜನರ ಒತ್ತಾಯವಾಗಿದೆ. 

ತಾಲ್ಲೂಕಿನ ಸುಮಾರು 150 ಗ್ರಾಮಗಳ ಕೆರೆಗಳು ಮಳೆಯ ನೀರಿಗೆ ತುಂಬಿ ಕೋಡಿ ಹರಿದರೆ, ಒಂದು ತುಂಬಿ ಮತ್ತೊಂದಕ್ಕೆ ಹರಿದು ಕೊನೆಗೆ ಆಂಧ್ರಪ್ರದೇಶಕ್ಕೆ ವ್ಯರ್ಥವಾಗಿ ಹರಿದು ಹೋಗುತ್ತದೆ. ಗಡಿ ಗ್ರಾಮಗಳಲ್ಲಿ ಹಾಗೂ ಗಡಿಯ ರೈತರು ಕೃಷಿ ಚಟುವಟಿಕೆಗಳಿಗೆ ನೀರಿಲ್ಲದೆ ಪರದಾಡುವಂತಾಗಿದೆ. ಇದನ್ನು ತಡೆಯಲು ಯರಗೋಳ್ ಜಲಾಶಯದ ಮಾದರಿಯಲ್ಲಿ ಗಡಿ ಗ್ರಾಮಗಳಲ್ಲಿ ಜಲಾಶಯವೊಂದನ್ನು ನಿರ್ಮಿಸಬೇಕು. ಈ ಮೂಲಕ ಕೆರೆಗಳ ನೀರು ಒಂದು ಕಡೆ ಸಂಗ್ರಹವಾಗುವಂತೆ ಮಾಡಬೇಕು. ಇದರೊಂದಿಗೆ ಕೆರೆಗಳ ಹೆಚ್ಚುವರಿ ನೀರು ವ್ಯರ್ಥವಾಗಿ ಹೋಗದಂತೆ ತಡೆಯಬಹುದು. ಜೊತೆಗೆ ಅಂತರ್ಜಲ ವೃದ್ಧಿಯಾಗಿ ಕೊಳವೆಗಳು ಮತ್ತು ಬಾವಿಗಳಲ್ಲಿ ನೀರು ಸಿಗುತ್ತದೆ ಎಂಬುದು ಜನರ ವಾದ.

ತಾಲ್ಲೂಕಿನಲ್ಲಿಯೇ ಅತಿದೊಡ್ಡ ಕೆರೆಯಾದ ನಂಗಲಿ, ನಗವಾರ, ಬ್ಯಾಟನೂರು, ಮಾಣಿಕ್ಯನ ಕೆರೆ, ಮುಷ್ಟೂರು, ಪೆದ್ದೂರು, ವೆಂಕಟಾಪುರ, ತಿಮ್ಮರಾವುತ್ತನಹಳ್ಳಿ, ತಾಯಲೂರು ಗಡಿಯ ಕೆರೆಗಳು, ಗೂಕುಂಟೆ, ಹೆಬ್ಬಣಿ, ಗುಡಿಪಲ್ಲಿ, ಕೆ. ಬೈಯಪ್ಪನಹಳ್ಳಿ, ಶೆಟ್ಟಿಕಲ್ಲು ಸುತ್ತಮುತ್ತಲಿನ ಕೆರೆಗಳಲ್ಲಿ ನೀರು ತುಂಬಿದ ಕೂಡಲೇ ಕೋಡಿಯ ನೀರು ಆಂಧ್ರಪ್ರದೇಶದ ಮಾಡಿ, ಶಿವಾಡಿ ಕೆರೆಗಳು, ರಾಮ ಸಮುದ್ರಂ ಸಮೀಪ ಹಾಗೂ ತೀರ್ಥ ಗಡ್ಡೂರು ಹಾಗೂ ಪಸಪತ್ತೂರು, ವಿ.ಕೋಟೆ ಮತ್ತಿತರ ಕೆರೆಗಳಿಗೆ ಸೇರುತ್ತದೆ. ಇದರಿಂದಾಗಿ ಕೆರೆಗಳು ಇದ್ದಾಗ್ಯೂ, ತಾಲ್ಲೂಕಿನ ಜನರಿಗೆ ಅವುಗಳ ಪ್ರಯೋಜನ ಸಿಗದಂತಾಗಿದೆ. 

ನಾಲ್ಕು ವರ್ಷಗಳ ಹಿಂದೆ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿತ್ತು. ಇದರಿಂದಾಗಿ ಬಹುತೇಕ ಕೆರೆಗಳು ತುಂಬಿದ್ದವು. ಆದರೆ, ಕೆರೆ ಕೋಡಿಗಳು ಒಡೆದು, ನೀರೆಲ್ಲ ಆಂಧ್ರಪ್ರದೇಶಕ್ಕೆ ಹೋದ ಕಾರಣ ಯಾವುದೇ ಕೆರೆಗಳಲ್ಲಿ ನೀರು ಉಳಿದಿಲ್ಲ. ಹೀಗಾಗಿ ತಾಲ್ಲೂಕಿನಲ್ಲಿ ಈಗಾಗಲೇ ನೀರಿನ ಸಮಸ್ಯೆ ಉಲ್ಬಣವಾಗಿದೆ.

ನಗವಾರ, ಬ್ಯಾಟನೂರು, ಉಪ್ಪರಹಳ್ಳಿ, ಗೂಕುಂಟೆ, ತಿಮ್ಮರಾವುತ್ತನಹಳ್ಳಿ ಮತ್ತಿತರ ಕಡೆಗಳಲ್ಲಿರುವ ಕೆರೆಗಳು ವೈಜ್ಞಾನಿಕವಾಗಿಲ್ಲ. ಕೆರೆಗಳು ತುಂಬಿದ ತಕ್ಷಣ ಕೋಡಿಯ ನೀರು ಆಂಧ್ರಪ್ರದೇಶದ ಜಮೀನು ಹಾಗೂ ಏಟಿಗಳಲ್ಲಿ ಹರಿದು ಹೋಗುತ್ತದೆ. ಹೀಗಾಗಿ ಗಡಿಯ ಭಾಗದ ಯಾವುದೇ ಗ್ರಾಮದವರಿಗೆ ಕೆರೆಗಳ ನೀರು ಪ್ರಯೋಜನಕ್ಕೆ ಬರುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ನೆರೆಯ ಆಂಧ್ರಪ್ರದೇಶ ಸರ್ಕಾರ ಸುಮಾರು 428 ಕಿಲೋ ಮೀಟರ್ ದೂರದ ಕೃಷ್ಣ ನದಿಯಿಂದ ತೆರೆದ ಕಾಲುವೆಯ ಮೂಲಕ ತಾಲ್ಲೂಕಿಗೆ ಹೊಂದಿಕೊಂಡಂತೆ ಕೆಜಿಎಫ್ ಸಮೀಪದ ಆಂದ್ರಪ್ರದೇಶದ ಕುಪ್ಪಂಗೆ ನೀರು ಹರಿಸುತ್ತಿದೆ. ಆದರೆ ರಾಜ್ಯದ ಕಾವೇರಿ ನದಿಯ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ. ಆದರೆ ತಾಲ್ಲೂಕಿಗೆ ಹರಿಸುವ ಯೋಜನೆಗೆ ಯಾರೂ ಮುಂದಾಗದಿರುವುದು ವಿಪರ್ಯಾಸದ ಸಂಗತಿ. 

ಮುಳಬಾಗಿಲು ತಾಲ್ಲೂಕಿನ ಬ್ಯಾಟನೂರು ಮಾಣಿಕ್ಯನ ಕೆರೆಯಿಂದ ನೇರವಾಗಿ ಆಂಧ್ರಪ್ರದೇಶಕ್ಕೆ ಹರಿಯುತ್ತಿರುವ ನೀರು. ( ಸಂಗ್ರಹ ಚಿತ್ರಗಳು)
ಮುಳಬಾಗಿಲು ತಾಲ್ಲೂಕಿನ ಬ್ಯಾಟನೂರು ಮಾಣಿಕ್ಯನ ಕೆರೆಯಿಂದ ನೇರವಾಗಿ ಆಂಧ್ರಪ್ರದೇಶಕ್ಕೆ ಹರಿಯುತ್ತಿರುವ ನೀರು. ( ಸಂಗ್ರಹ ಚಿತ್ರಗಳು)

‘ಕೆರೆ ನೀರು ಉಳಿಸಲು ಕ್ರಮ ಕೈಗೊಳ್ಳಲಿ’ ಬರಗಾಲದ ತಾಲ್ಲೂಕು ಎಂದೇ ಕುಖ್ಯಾತಿ ಪಡೆದ ಮುಳಬಾಗಿಲು ತಾಲ್ಲೂಕಿನಲ್ಲಿ ಬಹುತೇಕ ರೈತರು ಮಳೆ ಹಾಗೂ ಕೆರೆ ನೀರನ್ನೇ ನಂಬಿ ಕೃಷಿ ಚಟುವಟಿಕೆ ನಡೆಸುತ್ತಾರೆ. ಆದರೆ ಕೆರೆಗಳಲ್ಲಿ ನೀರು ತುಂಬಿದ ತಕ್ಷಣ ಹೆಚ್ಚುವರಿ ನೀರು ಆಂಧ್ರಪ್ರದೇಶ ಸೇರುತ್ತಿದೆ. ಇದರಿಂದ ಗಡಿಯ ಪ್ರದೇಶಗಳಲ್ಲಿ ಯರಗೋಳ್ ಮಾದರಿ ನೀರಾವರಿ ಯೋಜನೆ ಹಮ್ಮಿಕೊಂಡರೆ ಜನರಿಗೆ ನೀರಿನ ಬವಣೆ ತಪ್ಪಲಿದೆ.  ಪಿ.ಎಸ್.ವರದರಾಜಪ್ಪ ಪೆದ್ದೂರು ಬಂಗಾರಪೇಟೆ ಬಳಿ ಇರುವ ಯರಗೋಳ್ ಜಲಾಶಯ ಸುಮಾರು ನಾಲ್ಕು ವರ್ಷಗಳಿಂದ ತುಂಬಿರುವ ಕಾರಣ ಆ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಇದೇ ಮಾದರಿಯಲ್ಲಿ ತಾಲ್ಲೂಕಿನಲ್ಲಿ ಜಲಾಶಯ ನಿರ್ಮಿಸಿದರೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸಾವಿರಾರು ಅಡಿಗಳಷ್ಟು ಆಳದ ಕೊಳವೆ ಬಾವಿಗಳನ್ನು ತೋಡುವ ಸಮಸ್ಯೆ ತಪ್ಪಲಿದೆ. ನಮೋ ನಾರಾಯಣ ಸ್ವಾಮಿ ನಂಗಲಿ

ಬರಗಾಲ ಪೀಡಿತ ತಾಲ್ಲೂಕುಗಳಪಟ್ಟಿಯಲ್ಲಿ ‘ಮುಳಬಾಗಿಲು’ ಸರ್ಕಾರವೇ ಘೋಷಿಸಿರುವ ಪಟ್ಟಿಯಲ್ಲಿ ಮುಳಬಾಗಿಲು ಬರಗಾಲದ ತಾಲ್ಲೂಕು ಆಗಿದೆ. ಇಲ್ಲಿ ಸರ್ಕಾರ ಯಾವುದೇ ವಿಧವಾದ ನೀರಾವರಿ ಯೋಜನೆಗಳನ್ನು ಹಮ್ಮಿಕೊಳ್ಳದ ಕಾರಣ ಕೃಷಿಕರು ಮಳೆ ಯಾವಾಗ ಬೀಳುವುದೊ ಎಂದು ಜಾತಕ ಪಕ್ಷಿಗಳಂತೆ ಎದುರು ನೋಡುತ್ತಿರುತ್ತಾರೆ. ಒಂದು ವೇಳೆ ಮಳೆ ಬೀಳದೆ ಇದ್ದರೆ ಹೊಲಗಳಲ್ಲಿ ರಾಗಿ ಭತ್ತ ನೆಲಗಡಲೆ ಮತ್ತಿತರ ಯಾವ ಬೆಳೆಗಳನ್ನೂ ಬೆಳೆಯಲಾಗದ ಸ್ಥಿತಿ ಎದುರಾಗುತ್ತದೆ. ಹೀಗಿರುವಾಗ ಮಳೆಯಿಂದಾಗಿ ಕೆರೆಗಳು ತುಂಬಿ ಕೋಡಿ ಹರಿದು ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಶಾಶ್ವತವಾಗಿ ಸಂಗ್ರಹಿಸಿಟ್ಟುಕೊಂಡರೆ ಗಡಿ ಗ್ರಾಮಗಳ ಜನರಿಗಾದರೂ ನೀರನ್ನು ಉಳಿಸಿದಂತಾಗಲಿದೆ.  ಬಂಗಾರಪೇಟೆ ತಾಲ್ಲೂಕಿನ ಕಾಮ ಸಮುದ್ರಂ ಬಳಿಯ ಯರಗೋಳ್‌ನಿಂದ ವ್ಯರ್ಥವಾಗಿ ತಮಿಳುನಾಡಿಗೆ ಹರಿದುಹೋಗುವ ನೀರನ್ನು ಸಂಗ್ರಹಿಸಲು ಜಲಾಶಯವೊಂದನ್ನು ನಿರ್ಮಿಸಲಾಗಿದೆ. ಇದರಲ್ಲಿ ಸಂಗ್ರಹವಾದ ನೀರು ಮಾಲೂರು ಕೋಲಾರ ಹಾಗೂ ಬಂಗಾರಪೇಟೆ ತಾಲ್ಲೂಕಿನ ಒಟ್ಟು 45 ಗ್ರಾಮಗಳಿಗೆ ಅನುಕೂಲವಾಗಿದೆ. ಇದೇ ಮಾದರಿಯಲ್ಲಿ ತಾಲ್ಲೂಕಿನಲ್ಲೂ ಡ್ಯಾಂ ನಿರ್ಮಿಸಬೇಕು ಎಂಬುದು ಜನರ ಒತ್ತಾಸೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT