ಮುನಿಯಪ್ಪ ಜನರ ಸಮಸ್ಯೆಗೆ ಸ್ಪಂದಿಸಿಲ್ಲ: ಪಕ್ಷೇತರ ಅಭ್ಯರ್ಥಿ ರಮೇಶ್‌ಬಾಬು ಲೇವಡಿ

ಬುಧವಾರ, ಏಪ್ರಿಲ್ 24, 2019
30 °C

ಮುನಿಯಪ್ಪ ಜನರ ಸಮಸ್ಯೆಗೆ ಸ್ಪಂದಿಸಿಲ್ಲ: ಪಕ್ಷೇತರ ಅಭ್ಯರ್ಥಿ ರಮೇಶ್‌ಬಾಬು ಲೇವಡಿ

Published:
Updated:

ಕೋಲಾರ: ‘ಜಿಲ್ಲೆಯ ಸಮಸ್ಯೆ ಬಗೆಹರಿಸುವಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ವಿಫಲರಾಗಿದ್ದು, ಅವರಿಗೆ ಕ್ಷೇತ್ರದ ಹಿತಕ್ಕಿಂತ ಕುಟುಂಬದ ಹಿತಾಸಕ್ತಿಯೇ ಮುಖ್ಯವಾಗಿದೆ’ ಎಂದು ಪಕ್ಷೇತರ ಅಭ್ಯರ್ಥಿ ಎಂ.ಸಿ.ರಮೇಶ್‌ಬಾಬು ಲೇವಡಿ ಮಾಡಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸತತ 7 ಬಾರಿ ಸಂಸದರಾಗಿರುವ ಮುನಿಯಪ್ಪರ ಕೊಡುಗೆ ಶೂನ್ಯ. ಅವರ ಅವಧಿಯಲ್ಲಿ ಮಹತ್ವದ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ’ ಎಂದು ದೂರಿದರು.

‘ಜಿಲ್ಲೆಯು ಸತತ ಬರಕ್ಕೆ ಸಿಲುಕಿ ನೀರು, ಕೆಲಸವಿಲ್ಲದೆ ಜನ ಉದ್ಯೋಗಕ್ಕಾಗಿ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುನಿಯಪ್ಪ ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ನಾನು ರಾಜಕೀಯ ಪ್ರವೇಶಿಸಿದ್ದೇನೆ’ ಎಂದು ಹೇಳಿದರು.

‘ಬಿಜೆಪಿ ಸೇರಿ ಟಿಕೆಟ್‌ ನಿರೀಕ್ಷೆಯಲ್ಲಿದ್ದೆ. ನನಗೆ ಚುನಾವಣೆ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಪಕ್ಷದ ವರಿಷ್ಠರು ಭರವಸೆ ಕೊಟ್ಟಿದ್ದರು. ಆದರೆ, ಅಂತಿಮ ಕ್ಷಣದಲ್ಲಿ ಕೆಲ ಕಾಣದ ಶಕ್ತಿಗಳ ಕೈವಾಡದಿಂದ ಟಿಕೆಟ್ ತಪ್ಪಿತು. ಹೀಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧಿಸಿದ್ದೇನೆ’ ಎಂದು ವಿವರಿಸಿದರು.

‘ಮುಖ್ಯವಾಗಿ ಜಿಲ್ಲೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ. ಕುಡಿಯುವ ನೀರು, ನಿರುದ್ಯೋಗ ಮತ್ತು ಕೃಷಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕನಸಿದೆ. ಎಲ್ಲರಿಗೂ ವಸತಿ ಸೌಲಭ್ಯ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವ ಆಶಯ ಹೊಂದಿದ್ದೇನೆ’ ಎಂದು ಮಾಹಿತಿ ನೀಡಿದರು.

ಹಣ ಮುಖ್ಯವಾಗಿದೆ: ‘ಲೋಕಸಭೆ ಚುನಾವಣೆಗೆ ಸ್ವರ್ಧಿಸಲು ಕನಿಷ್ಠ ಅರ್ಹತೆಗಳಾದರೂ ಇರಬೇಕು. ಸ್ಥಳೀಯರಾಗಿರಬೇಕು, ವಿದ್ಯಾವಂತರಾಗಿರಬೇಕು. ಸತ್ಯ ಧರ್ಮ ಪಾಲನೆಯ ಸಜ್ಜನ ವ್ಯಕ್ತಿಯಾಗಿರಬೇಕು. ಆದರೆ, ಬಿಜೆಪಿಯು ಈ ಅರ್ಹತೆಗಳೇ ಇಲ್ಲದ ವ್ಯಕ್ತಿಗೆ ಟಿಕೆಟ್‌ ನೀಡಿದೆ. ಬಿಜೆಪಿ ಮುಖಂಡರಿಗೆ ಹಣವೇ ಮುಖ್ಯವಾಗಿದೆ’ ಎಂದು ಭಗತ್ ಸೇನೆ ರಾಜ್ಯ ಘಟಕದ ಕೃಷ್ಣ ಶಾನುಬೋಗ್ ಟೀಕಿಸಿದರು.

‘8ನೇ ಬಾರಿಗೆ ಚುನಾವಣೆಗೆ ಸ್ವರ್ಧಿಸಿರುವ ಮುನಿಯಪ್ಪ ಅವರಿಗೆ ಈ ಬಾರಿ ಸೋಲು ಕಟ್ಟಿಟ್ಟ ಬುತ್ತಿ. ಜಿಲ್ಲೆಯ ಚಿನ್ನದ ಗಣಿ, ನೀರು. ಕೃಷಿ ಸಮಸ್ಯೆ ಬಗ್ಗೆ ಅವರು ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ’ ಎಂದು ಕಿಡಿಕಾರಿದರು.

ಭಗತ್ ಸೇನೆ ಪಧಾಧಿಕಾರಿಗಳಾದ ರುದ್ರಪ್ಪ, ಪಟೇಲ್, ಲೋಕೇಶ್, ನಾಗರಾಜ್, ನಿಶಾಂತ್, ಮಂಜುನಾಥ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !