ಶುಕ್ರವಾರ, ಏಪ್ರಿಲ್ 3, 2020
19 °C
ಮಹಾ ಶಿವರಾತ್ರಿ ಹಬ್ಬದೊಂದಿಗೆ ಬೆಸೆದ ಶ್ರಮದ ಕೊಂಡಿ

ಕೋಲಾರ | ಸಾಮರಸ್ಯ ಬೆಸೆವ ಶಿವರಾತ್ರಿ: ನೈವೇದ್ಯದ ಅರಳಿಟ್ಟು ಹುರಿಯುವ ಮುಸ್ಲಿಮರು

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

ಕೋಲಾರ: ಮಹಾ ಶಿವರಾತ್ರಿ ಬಂತೆಂದರೆ ಜಿಲ್ಲಾ ಕೇಂದ್ರದ ಸುಲ್ತಾನ್‌ ತಿಪ್ಪಸಂದ್ರ, ಜಮಾಲ್‌ಷಾ ನಗರ ಬಡಾವಣೆಯ ಮುಸ್ಲಿಂ ಸಮುದಾಯದ ಮನೆಗಳಲ್ಲಿ ದುಡಿಮೆಯ ಸಂಭ್ರಮ. ಹಿಂದೂಗಳ ಹಬ್ಬ ಶಿವರಾತ್ರಿಯೊಂದಿಗೆ ಮುಸ್ಲಿಂ ಬಾಂಧವರ ಶ್ರಮದ ಕೊಂಡಿ ಬೆಸೆದಿದೆ.

ಶಿವರಾತ್ರಿ ಹಬ್ಬದ ದಿನ ಶಿವನಿಗೆ ಸಾಮೆ, ರಾಗಿ, ಜೋಳ, ಭತ್ತದಿಂದ ತಯಾರಿಸಿದ ಅರಳಿಟ್ಟು ನೈವೇದ್ಯ ಮಾಡುವುದು ಹಿಂದಿನಿಂದ ನಡೆದುಕೊಂಡ ಬಂದ ವಾಡಿಕೆ. ನಗರದ ಹಾಗೂ ಸುತ್ತಮುತ್ತಲಿನ ಜನರಿಗೆ ಹಬ್ಬಕ್ಕೆ ಬೇಕಾದ ಸಾಮೆ, ಜೋಳ ಹಾಗೂ ಭತ್ತದ ಪುರಿಯನ್ನು ಮುಸ್ಲಿಂ ಸಮುದಾಯದವರು ಹುರಿದು ಕೊಡುತ್ತಾರೆ.

ಸುಲ್ತಾನ್‌ ತಿಪ್ಪಸಂದ್ರ, ಜಮಾಲ್‌ಷಾ ನಗರದಲ್ಲಿನ ಸಾಕಷ್ಟು ಮುಸ್ಲಿಂ ಕುಟುಂಬಗಳು ಈ ಕಾಯಕದಲ್ಲೇ ಬದುಕು ಕಟ್ಟಿಕೊಂಡಿವೆ. ವಂಶಪಾರಂಪರ್ಯವಾಗಿ ಬಂದಿರುವ ಈ ಕಾಯಕ ಮುಂದುವರಿಸಿಕೊಂಡು ಹೋಗುತ್ತಿವೆ. ಹಿಂದೂ ಸಮುದಾಯದವರು ಹಿಂದೆ ಈ ಕುಟುಂಬಗಳಿಗೆ ಸಾಮೆ, ಜೋಳ, ರಾಗಿ ಕೊಟ್ಟು ಪುರಿ ಹುರಿಸಿಕೊಳ್ಳುತ್ತಿದ್ದರು. ಇದರಿಂದ ಕುಟುಂಬಗಳಿಗೆ ಹಣ ಸಂಪಾದನೆಯಾಗುತ್ತಿತ್ತು.


ಕೋಲಾರದ ಸುಲ್ತಾನ್‌ ತಿಪ್ಪಸಂದ್ರ ಬಡಾವಣೆಯ ಮನೆಯೊಂದರಲ್ಲಿ ಸಾಮೆ ಪುರಿ ಹುರಿಯುತ್ತಿರುವುದು.

ಕಾಲ ಬದಲಾದಂತೆ ಈ ಆಚರಣೆ ನೇಪಥ್ಯಕ್ಕೆ ಸರಿದಿದೆ. ಈಗ ಮುಸ್ಲಿಂ ಕುಟುಂಬಗಳೇ ತಮಿಳುನಾಡು, ವಿಜಯಪುರ, ದಾವಣಗೆರೆ, ಚಿಕ್ಕಬಳ್ಳಾಪುರ ಕಡೆಯಿಂದ ಸಾಮೆ, ಭತ್ತ, ಜೋಳ, ರಾಗಿ ಖರೀದಿಸಿ ತಂದು ಹುರಿದು ಪೊಟ್ಟಣ ಕಟ್ಟಿ ಮಾರಾಟ ಮಾಡುತ್ತಿವೆ. ಶಿವರಾತ್ರಿಗೂ ಮುನ್ನ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಹಗಲಿರುಳು ಇದೇ ಕೆಲಸ. ಹಬ್ಬ ಮುಗಿದ ನಂತರ ಕಾರದ ಶೇಂಗಾ ಬೀಜ, ಹೆಸರು ಕಾಳು ತಯಾರಿಕೆಯ ಕಾಯಕ.

ಹುರಿಯುವ ಪರಿ: ಸಮುದ್ರ ದಂಡೆಯಲ್ಲಿ ಸಿಗುವ ಶುದ್ಧ ಮರಳನ್ನು ಪುರಿ ಹುರಿಯುವುದಕ್ಕೆ ಬಳಸಲಾಗುತ್ತದೆ. ಒಲೆಯ ಮೇಲಿನ ಕಬ್ಬಿಣದ ಬಾಣಲೆಗೆ ಮರಳು ಹಾಕಿ ಬಿಸಿ ಮಾಡಲಾಗುತ್ತದೆ. ಬಿಸಿಯಾದ ಮರಳಿಗೆ ಸಾಮೆ, ಜೋಳ ಹಾಗೂ ಭತ್ತ ಹಾಕುತ್ತಿದ್ದಂತೆ ಪುರಿ ಹುರಿಯುತ್ತದೆ. ನಂತರ ಜಾಲರಿಯಿಂದ ಮರಳು ಮತ್ತು ಪುರಿ ಕಾಳು ಪ್ರತ್ಯೇಕಿಸಲಾಗುತ್ತದೆ.

ಬಳಿಕ 2 ಹಂತದಲ್ಲಿ ಪುರಿಯನ್ನು ಜರಡಿ ಮಾಡಿ, ಪ್ಲಾಸ್ಟಿಕ್‌ ಪೊಟ್ಟಣ ಕಟ್ಟಲಾಗುತ್ತದೆ. ಈ ಕೆಲಸದಲ್ಲಿ ಕುಟುಂಬದ ಮಹಿಳೆಯರು ಕೈ ಜೋಡಿಸುತ್ತಾರೆ. ಮಾರುಕಟ್ಟೆಯಲ್ಲಿ 1 ಲೀಟರ್‌ ಪುರಿಗೆ ₹ 20 ದರವಿದೆ. ಶಿವರಾತ್ರಿ ಹಬ್ಬದ ಹಿಂದಿನ ದಿನ ಪುರಿ ವ್ಯಾಪಾರ ಭರ್ಜರಿಯಾಗಿರುತ್ತದೆ.


ಕೋಲಾರದ ಹಳೆ ಬಸ್‌ ನಿಲ್ದಾಣದ ಬಳಿಯ ಮಾರುಕಟ್ಟೆಯಲ್ಲಿ ಗ್ರಾಹಕರು ಸಾಮೆ ಪುರಿ ಖರೀದಿಸುತ್ತಿರುವುದು.

ಪ್ರಸಾದವಾಗಿ ಸ್ವೀಕಾರ: ಶಿವರಾತ್ರಿ ದಿನ ಜಾಗರಣೆ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಜನರಲ್ಲಿ ಬೇರೂರಿದೆ. ಹಬ್ಬದಂದು ರಾತ್ರಿಯಿಡೀ ಶಿವನಾಮ ಸ್ಮರಣೆಯಲ್ಲಿ ಜಾಗರಣೆ ಮಾಡುವುದು ವಿಶೇಷ. ಶಿವ ದೇವಾಲಯಗಳಲ್ಲಿ ಬಿಲ್ವ ಪತ್ರೆ ಅರ್ಚನೆ ಪ್ರಮುಖವಾದುದು.

ಗ್ರಾಮೀಣ ಭಾಗದಲ್ಲಿ ಶಿವನಿಗೆ ನೈವೇದ್ಯವಾಗಿ ಸಾಮೆ ಅಥವಾ ರಾಗಿ ಅರಳಿಟ್ಟು ಇಡುವುದು ಹಿಂದಿನಿಂದ ನಡೆದುಕೊಂಡು ಪದ್ಧತಿ. ಹುರಿದ ಸಾಮೆ, ಜೋಳ, ಭತ್ತದ ಕಾಳುಗಳು ಹಾಲಿನಂತೆ ಬೆಳ್ಳಗೆ, ಹೂವಿನಂತೆ ಹಗುರವಾಗಿರುತ್ತವೆ. ಈ ಕಾಳುಗಳನ್ನು ಸಕ್ಕರೆ ಅಥವಾ ಬೆಲ್ಲದ ಪಾಕದಲ್ಲಿ ಹಾಕಿ ಉಂಡೆ ಮಾಡಿ ನೈವೇದ್ಯವಾಗಿ ಇಟ್ಟು ನಂತರ ಪ್ರಸಾದವಾಗಿ ಸ್ವೀಕರಿಸುತ್ತಾರೆ.

ನೈವೇದ್ಯ ಸ್ವೀಕಾರಕ್ಕೂ ಮುನ್ನ ಹಕ್ಕಿಗಳಿಗೆ ಒಂದು ಎಡೆ ಮೀಸಲಿಡಲಾಗುತ್ತದೆ. ನೈವೇದ್ಯವಾಗಿ ಏನೇ ಇಟ್ಟರೂ ವಿಷಕಂಠ ಶಿವ ಪ್ರೀತಿಯಿಂದ ಸ್ವೀಕರಿಸುತ್ತಾನೆ ಎಂದು ಭಕ್ತರು ನಂಬಿದ್ದಾರೆ. ನಾಗರೀಕತೆ ಬೆಳೆದಂತೆ ಹಬ್ಬದ ಆಚರಣೆ ಕೂಡ ಬದಲಾಗುತ್ತಿದೆ. ಧಾನ್ಯ ಹುರಿಯಲು ಯಂತ್ರೋಪಕರಣ ಬಳಸುತ್ತಿರುವುದರಿಂದ ಸಾಂಪ್ರದಾಯಿಕ ಪದ್ಧತಿಯಲ್ಲಿ ಪುರಿ ಹುರಿಯುವವರ ಸಂಖ್ಯೆ ಕ್ಷೀಣಿಸುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)