ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ನೀತಿ ಪುನರ್‌ ರಚಿಸಲಿ: ನಾಗಮೋಹನದಾಸ್‌

Last Updated 4 ನವೆಂಬರ್ 2022, 12:19 IST
ಅಕ್ಷರ ಗಾತ್ರ

ಕೋಲಾರ: 'ಮೀಸಲಾತಿ ನೀತಿ ಈಗ ಅಪ್ರಸ್ತುತವಾಗುತ್ತಿದ್ದು, ಪ್ರಸಕ್ತ ಸನ್ನಿವೇಶಕ್ಕೆ ತಕ್ಕಂತೆ ಪುನರ್ ರಚಿಸುವ ಅವಶ್ಯವಿದೆ. ಇದರರ್ಥ ಇದ್ದುದ್ದನ್ನು ಕಳೆದುಕೊಳ್ಳುವುದಲ್ಲ. ಬದಲಾಗಿ ಪರಿಣಾಮಕಾರಿಯಾಗಿ ಮರುರೂಪಿಸಬೇಕಿದೆ' ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್‌.ನಾಗಮೋಹನದಾಸ್ ಹೇಳಿದರು.

ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾವು ಬರೆದಿರುವ ‘ಮಾನವ ಹಕ್ಕು’ ಹಾಗೂ 'ಮೀಸಲಾತಿ; ಭ್ರಮೆ ಮತ್ತು ವಾಸ್ತವ' ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಈಗ ಸೃಷ್ಟಿಯಾಗುತ್ತಿರುವ ಶೇ 98 ಉದ್ಯೋಗಗಳು ಖಾಸಗಿ ಕ್ಷೇತ್ರದವು. ಅಲ್ಲಿ‌‌ ಮೀಸಲಾತಿ ಅನ್ವಯಿಸುವುದಿಲ್ಲ. ಇನ್ನುಳಿದ ಶೇ 2 ಉದ್ಯೋಗಗಳಲ್ಲಿ ಶೇ 1 ಎಸ್‌ಸಿ, ಎಸ್ಟಿ, ಒಬಿಸಿಗೆ ಹಾಗೂ ಶೇ 1 ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಸಿಗುತ್ತಿವೆ. ಕೇಂದ್ರ, ರಾಜ್ಯ ಸರ್ಕಾರ ಹಾಗೂ ಪಿಎಸ್‌ಯುಗಳಲ್ಲಿ ಮೀಸಲಾತಿಯಡಿ ಮಂಜೂರಾದ 60 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ. ರಾಜ್ಯದಲ್ಲಿ ಎರಡೂವರೆ ಲಕ್ಷ ಹುದ್ದೆಗಳು ಖಾಲಿ ಇವೆ. ಬದಲಾಗಿ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯುತ್ತಿದ್ದು, ಇಲ್ಲಿ ಮೀಸಲಾತಿ ಅನ್ವಯ ಆಗುತ್ತಿಲ್ಲ. ಈ ಬಗ್ಗೆ ಯಾರಾದರೂ ಧ್ವನಿ ಎತ್ತಿದ್ದಾರೆಯೇ? ಏಕೀ ಈ ಮೌನ? ಈ ಬಗ್ಗೆ ಹೋರಾಟ ರೂಪಿಸಬೇಕಿದೆ, ಚರ್ಚೆ ನಡೆಯಬೇಕಿದೆ’ ಎಂದು ಕರೆ ನೀಡಿದರು.

'ಮೀಸಲಾತಿ ಬಗ್ಗೆ ಸ್ಪಷ್ಟತೆ ಅಗತ್ಯವಾಗಿದೆ. ಹೀಗಾಗಿ, ಜನಾಭಿಪ್ರಾಯ ಮೂಡಿಸಬೇಕು. ಶಾಸಕಾಂಗದ ಗಮನ ಸೆಳೆಯಬೇಕು. ಇದು ಜನರ ಕೆಲಸ' ಎಂದರು.

‘ಎಸ್‌ಸಿ, ಎಸ್ಟಿ ಮೀಸಲಾತಿ ಸಂಬಂಧ ರಾಜ್ಯ ಸರ್ಕಾರ ನನ್ನ ವರದಿ ಒಪ್ಪಿರುವುದನ್ನು ಸ್ವಾಗತಿಸುತ್ತೇನೆ. ಸುಗ್ರಿವಾಜ್ಞೆ ಮೂಲಕ ಅಧಿಸೂಚನೆ ಹೊರಡಿಸಿ ಅನುಷ್ಠಾನಗೊಳಿಸಿರುವುದು ಮತ್ತಷ್ಟು ಖುಷಿ ಉಂಟು ಮಾಡಿದೆ. ಆದರೆ, ಇಷ್ಟು ಸಾಲದು. ಮೀಸಲಾತಿ ಸಂಬಂಧ ಹಲವು ಪ್ರಶ್ನೆ, ಸವಾಲುಗಳಿವೆ. ಒಳ ಮೀಸಲಾತಿ, ಕೆನೆಪದರ, ಬಡ್ತಿಯಲ್ಲಿ ಮೀಸಲಾತಿ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಬಗ್ಗೆ ಸರಿಯಾದ ಕಾನೂನುಗಳೇ ಇಲ್ಲ, ಸರಿಯಾದ ಮಾರ್ಗದರ್ಶಿ ಇಲ್ಲ, ನ್ಯಾಯಾಲಯದ ಸರಿಯಾದ ತೀರ್ಪುಗಳೂ ಇಲ್ಲ’ ಎಂದು ಹೇಳಿದರು.

‘ಜಾತಿ, ‌ಅಸಮಾನತೆ ಇರುವವರೆಗೆ ಮೀಸಲಾತಿ ವ್ಯವಸ್ಥೆ ಬೇಕೇಬೇಕು.‌ ಶಿಕ್ಷಣ‌ ಹಾಗೂ ಉದ್ಯೋಗ ಮೂಲಭೂತ ಹಕ್ಕು ಆಗಬೇಕು. ಹೆಚ್ಚು ಶಿಕ್ಷಣ‌ ಅವಕಾಶ, ಉದ್ಯೋಗ ಅವಕಾಶ ಸಿಕ್ಕಿದರೆ ಮೀಸಲಾತಿ ವಿಚಾರ ತಾನಾಗಿಯೇ ಹಿಂದಕ್ಕೆ‌ ಸರಿಯುತ್ತದೆ‌‌’ ಎಂದು ಅಭಿಪ್ರಾಯಪಟ್ಟರು.

‘ಕೃಷಿ ಕ್ಷೇತ್ರ ಬಹಳ ಬಿಕ್ಕಟ್ಟಿನಲ್ಲಿದೆ. ರೈತರು ಆರ್ಥಿಕವಾಗಿ ದಿವಾಳಿಯಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪರಿಹಾರ‌ದ ಮೂಲಕ ರೈತರ ಸಮಸ್ಯೆ ನೀಗಿಸಬೇಕೋ ಅಥವಾ ಅವರಿಗೆ ಮೀಸಲಾತಿ ಕಲ್ಪಿಸಬೇಕೋ ಎಂಬ ಚರ್ಚೆ ನಡೆಯಬೇಕು’ ಎಂದರು.

ಜಿಲ್ಲಾಧಿಕಾರಿ ವೆಂಕಟ್‌ ರಾಜಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವ ಡಾ.ಡಿ.ಡೊಮಿನಿಕ್‌ ಹಾಗೂ ಜನ ಪ್ರಕಾಶನದ ಬಿ.ರಾಜಶೇಖರ್ ಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT