ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ: ಹೆಚ್ಚು ಮಾನವ ದಿನ ಸೃಜಿಸಿ

ಸಭೆಯಲ್ಲಿ ಅಧಿಕಾರಿಗಳಿಗೆ ಜಿ.ಪಂ ಸಿಇಒ ದರ್ಶನ್‌ ಸೂಚನೆ
Last Updated 7 ಫೆಬ್ರುವರಿ 2020, 15:00 IST
ಅಕ್ಷರ ಗಾತ್ರ

ಕೋಲಾರ: ‘ನರೇಗಾ ಅಡಿ ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮೋದನೆ ಪಡೆದು ಅಭಿವೃದ್ಧಿ ಕೆಲಸ ಮುಂದುವರಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ದರ್ಶನ್ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಗ್ರಾಮೀಣ ಭಾಗದ ರೈತರ ಸಮಸ್ಯೆ ಅರಿತು ಹೆಚ್ಚು ಮಾನವ ದಿನ ಸೃಜಿಸಬೇಕು’ ಎಂದು ತಿಳಿಸಿದರು.

‘2020–21ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಪಾಲನೆ, ಅರಣ್ಯ ಇಲಾಖೆಗಳು ಶೀಘ್ರವೇ ಕ್ರಿಯಾಯೋಜನೆ ರೂಪಿಸಿ ಅನುಮೋದನೆ ಪಡೆಯಬೇಕು. ನರೇಗಾ ಯೋಜನೆಯಡಿ ಶೇ 60ರಷ್ಟು ಕೂಲಿ ಹಾಗೂ ಶೇ 40ರಷ್ಟು ಸಾಮಗ್ರಿ ವೆಚ್ಚಕ್ಕೆ ಅನುಗುಣವಾಗಿ ಕ್ರಿಯಾಯೋಜನೆ ರೂಪಿಸಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯ ವಸತಿ ಶಾಲೆಗಳಲ್ಲಿ ಕೊಳವೆ ಬಾವಿಗಳಿದ್ದರೂ ನೀರಿನ ಇಳುವರಿಯಿಲ್ಲ. 336 ಪ್ರೌಢ ಶಾಲೆಗಳ ಪೈಕಿ ಸ್ಥಳಾವಕಾಶ ಹಾಗೂ ಕಾಂಪೌಂಡ್ ವ್ಯವಸ್ಥೆಯಿರುವ ಶಾಲೆಗಳಲ್ಲಿ ಕೈತೋಟ ನಿರ್ಮಿಸಲು ಒತ್ತು ನೀಡಿ’ ಎಂದು ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ವೈ.ಚಕ್ರಪಾಣಿ ಅವರು ಸಭೆಗೂ ಗೈರಾಗಿದ್ದಕ್ಕೆ ಸಿಡಿಮಿಡಿಗೊಂಡ ಸಿಇಒ ಅರಣ್ಯ ಇಲಾಖೆ ಪರವಾಗಿ ಸಭೆಗೆ ಬಂದಿದ್ದ ವಲಯ ಅರಣ್ಯ ಸಂರಕ್ಷಣಾಧಿಕಾರಿಯನ್ನು (ಆರ್‌ಎಫ್‌ಒ) ಪ್ರಶ್ನಿಸಿದರು. ಆಗ ಆರ್‌ಎಫ್‌ಒ, ‘ಚಕ್ರಪಾಣಿ ಅವರು ಪ್ರಕರಣವೊಂದರ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹೋಗಿದ್ದಾರೆ’ ಎಂದು ಉತ್ತರಿಸಿದರು.

ನಂತರ ಸಿಇಒ, ‘ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಮುಂದಿನ ಸಭೆಗೆ ಖುದ್ದು ಬರಬೇಕು. ಇಲ್ಲವಾದರೆ ನೋಟಿಸ್‌ ಜಾರಿ ಮಾಡುತ್ತೇನೆ’ ಎಂದು ಎಚ್ಚರಿಕೆ ನೀಡಿ ಆರ್‌ಎಫ್‌ಒರನ್ನು ಸಭೆಯಿಂದ ಹೊರಗೆ ಕಳುಹಿಸಿದರು.

ತನಿಖೆ ನಡೆಸಿ

‘ಯೋಜನೆಯ ಲಾಗಿನ್‌ ಬುಕ್, ಎನ್‌ಎಂಆರ್‌ಗೆ 2ನೇ ಸಹಿಯಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸಹಿ ಮಾಡಬೇಕೆಂಬ ಆದೇಶದಿಂದ ಕೆಲಸ ವಿಳಂಬವಾಗುತ್ತಿದೆ. ಹಿಂದಿನ ಪದ್ಧತಿಯಂತೆ ಮುಂದುವರಿಯಬೇಕು. ಯೋಜನೆಯಲ್ಲಿ ಆಗುವ ಅಕ್ರಮ ತಡೆಯಲು ತನಿಖೆ ನಡೆಸಬೇಕು’ ಎಂದು ರೇಷ್ಮೆ ಇಲಾಖೆ ಉಪ ನಿರ್ದೇಶಕ ಎಂ.ಕೆ.ಪ್ರಭಾಕರ್ ಮನವಿ ಮಾಡಿದರು.

‘ಸಾಮಾಜಿಕ ಲೆಕ್ಕ ಪರಿಶೋಧಕರು ಸಣ್ಣಪುಟ್ಟ ವಿಷಯಕ್ಕೂ ಆಕ್ಷೇಪಣೆ ಎತ್ತಿ ವಸೂಲಾತಿಗೆ ಬರೆಯುತ್ತಿದ್ದಾರೆ. ಇದರಿಂದ ಕರ್ತವ್ಯ ನಿರ್ವಹಣೆಗೆ ಕಿರಿಕಿರಿಯಾಗುತ್ತದೆ. ಸಾಮಾಜಿಕ ಲೆಕ್ಕ ಪರಿಶೋಧಕರ ಸಭೆ ಕರೆಯಬೇಕು’ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಕೋರಿದರು.

ನ್ಯೂಟ್ರೀಷಿಯನ್ ಗಾರ್ಡನ್‌

‘ಈ ವರ್ಷ ಸರ್ಕಾರಿ ಶಾಲೆಗಳಲ್ಲಿ ನ್ಯೂಟ್ರೀಷಿಯನ್ ಗಾರ್ಡನ್‌ಗೆ ಒತ್ತು ನೀಡಲಾಗುವುದು. ಎಲ್ಲಾ ಬಗೆಯ ಸೊಪ್ಪು, ಮಾವು, ನೆಲ್ಲಿ, ನುಗ್ಗೆ, ಕರಿಬೇವು, ನಿಂಬೆ ಬೆಳೆಸಲು ಅವಕಾಶ ಕಲ್ಪಿಸಲಾಗುವುದು. ಇದರಡಿ 3.50 ಲಕ್ಷ ಮಾನವ ದಿನ ಸೃಜಿಸುವ ಗುರಿಯಿದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ವಿವರಿಸಿದರು.

ಜಿ.ಪಂ ಯೋಜನಾ ನಿರ್ದೇಶಕ ಸಿ.ಎಂ.ಮುನಿಕೃಷ್ಣಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ) ವಿ.ದೇವರಾಜ್, ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಎನ್‌.ಜಗದೀಶ್‌ಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT