ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಕು ಮೂಡಿಸುವ ಪ್ರಯತ್ನ ಬೇಡ: ಜಿ.ಸುರೇಶ್‌ಬಾಬು

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ್‌ಬಾಬು ಮನವಿ
Last Updated 24 ಜೂನ್ 2021, 16:56 IST
ಅಕ್ಷರ ಗಾತ್ರ

ಕೋಲಾರ: ‘ನೌಕರರ ಸಮಸ್ಯೆಗಳ ವಿರುದ್ಧ ಹೋರಾಡಲು ಸಂಘದ ಪದಾಧಿಕಾರಿಗಳು ಕೈಜೋಡಿಸಬೇಕು’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮನವಿ ಮಾಡಿದರು.

ಇಲ್ಲಿ ಗುರುವಾರ ಸಂಘದ ನೂತನ ಪದಾಧಿಕಾರಿಗಳ ಹೆಸರು ಪ್ರಕಟಿಸಿ ಪ್ರಮಾಣಪತ್ರ ವಿತರಿಸಿ ಮಾತನಾಡಿ, ‘ನಮ್ಮ ಹೋರಾಟ ನೌಕರರ ಸಮಸ್ಯೆಗಳ ವಿರುದ್ಧವೇ ಹೊರತೂ ನಮ್ಮಗಳ ವಿರುದ್ಧವಲ್ಲ’ ಎಂದರು.

‘ಕೆಟ್ಟ ವಿಚಾರಗಳ ಬಗ್ಗೆ ಚರ್ಚೆ ಬೇಡ. ಒಳ್ಳೆಯದರ ಪ್ರೇರಣೆಯೊಂದಿಗೆ ಕೆಲಸ ಮಾಡೋಣ. ಇಲ್ಲಿ ಎಲ್ಲರೂ ಅಧ್ಯಕ್ಷರೇ, ಭಿನ್ನಾಭಿಪ್ರಾಯವಿದ್ದರೆ ಚರ್ಚಿಸಲು ಸಂಘದ ವೇದಿಕೆಯಿದೆ. ಬಹಿರಂಗವಾಗಿ ನಾವು ಮಾತನಾಡಿದರೆ ಸಂಘಟನೆಗೆ ಪೆಟ್ಟು ಬೀಳುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರು ಜಿಲ್ಲಾ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ₹ 1 ಕೋಟಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಅವರ ಬದ್ಧತೆಯಿಂದ ನೌಕರರ ಸಂಘದ ಇತಿಹಾಸದಲ್ಲೇ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ನಾನು ಅಧ್ಯಕ್ಷನಾದ ಬಳಿಕ 6 ತಿಂಗಳಲ್ಲಿ ಎಲ್ಲರ ಸಹಕಾರದಿಂದ ನೌಕರರ ಕ್ರೀಡಾಕೂಟ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದ್ದೇವೆ. ನೌಕರರ ಸಮಸ್ಯೆ ಚರ್ಚೆಗೆ ಜಂಟಿ ಸಮಾಲೋಚನಾ ಸಮಿತಿ ರಚಿಸಲಾಗಿದೆ. ನೌಕರರ ಭವನ, ಸಮುದಾಯ ಭವನಕ್ಕೆ 5 ಎಕರೆ ಜಮೀನು ಪಡೆಯಲು ಪ್ರಯತ್ನ ನಡೆಸಿದ್ದೇವೆ’ ಎಂದು ವಿವರಿಸಿದರು.

‘ಸಂಘದಲ್ಲಿ ಒಡಕು ಮೂಡಿಸುವ ಪ್ರಯತ್ನ ಮಾಡಬಾರದು. ನೌಕರರ ಹಿತರಕ್ಷಣೆಯು ನಮ್ಮ ಧ್ಯೇಯ. ಸಂಘದಲ್ಲಿ ಜಾತಿ, ಧರ್ಮದ ಪ್ರಶ್ನೆಯಿಲ್ಲ. ನಾವೆಲ್ಲಾ ಸರ್ಕಾರಿ ನೌಕರರ ಜಾತಿ’ ಎಂದು ತಿಳಿಸಿದರು.

ಎದೆಗುಂದಬೇಡಿ: ‘ನೌಕರರ ಸಂಘದ ಬೈಲಾದಡಿ 33 ಹುದ್ದೆಗಳಿದ್ದು, ಸಂಘಟನೆಗಾಗಿ ಕೆಲಸ ಮಾಡುವವರಿಗೆ ಆದ್ಯತೆ ನೀಡುವ ಮೂಲಕ ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಪ್ರಯತ್ನ ಮಾಡಲಾಗಿದೆ. ‘ಸಂಘವನ್ನು ರಾಜ್ಯಕ್ಕೆ ಮಾದರಿಯಾಗಿಸೋಣ. ಟೀಕೆಗಳಿಗೆ ಎದೆಗುಂದುವ ಅಗತ್ಯವಿಲ್ಲ. ಕೆಲಸದ ಮೂಲಕ ಟೀಕಾಕಾರರಿಗೆ ಉತ್ತರ ನೀಡೋಣ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ ಹೇಳಿದರು.

ಸಂಘದ ನೂತನ ಗೌರವಾಧ್ಯಕ್ಷ ಶ್ರೀನಿವಾಸರೆಡ್ಡಿ, ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಉಪಾಧ್ಯಕ್ಷ ಪುರುಷೋತ್ತಮ್, ಖಜಾಂಚಿ ವಿಜಯ್‌, ರಾಜ್ಯ ಪರಿಷತ್ ಸದಸ್ಯ ಗೌತಮ್, ಜಿಲ್ಲಾ ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷ ಅಜಯ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್, ಕಾರ್ಯದರ್ಶಿ ಶಿವಕುಮಾರ್, ಗೌರವಾಧ್ಯಕ್ಷ ಆರ್.ನಾಗರಾಜ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT