ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಬ ಎಸ್‌.ಟಿ ಮೀಸಲಾತಿಗೆ ವಿರೋಧ ಸಲ್ಲದು

ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಗುಡುಗು
Last Updated 12 ಜನವರಿ 2021, 14:13 IST
ಅಕ್ಷರ ಗಾತ್ರ

ಕೋಲಾರ: ‘ಕುರುಬ ಸಮುದಾಯದ ಕಟ್ಟ ಕಡೆಯ ಮಗುವಿನ ಭವಿಷ್ಯ ಉಜ್ವಲವಾಗಬೇಕೆಂಬ ಉದ್ದೇಶಕ್ಕೆ ಎಸ್‌.ಟಿ ಮೀಸಲಾತಿ ಹಕ್ಕು ಕೇಳುತ್ತಿದ್ದೇವೆ. ಇದಕ್ಕೆ ಸರ್ಕಾರದ ವಿರೋಧ ಸಲ್ಲದು’ ಎಂದು ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಗುಡುಗಿದರು.

ಕುರುಬ ಸಮಾಜದ ಎಸ್‌.ಟಿ ಹೋರಾಟ ಸಮಿತಿ, ಕಾಗಿನಲೆ ಕನಕಗುರು ಪೀಠ ಹಾಗೂ ಕರ್ನಾಟಕ ಪ್ರದೇಶ ಕುರುಬ ಸಂಘದ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಮುಖ್ಯಮಂತ್ರಿಗಳು ಹಾಗೂ ಪ್ರಧಾನ ಮಂತ್ರಿಯವರಿಗೆ ಸಮುದಾಯದ ಎಸ್‌.ಟಿ ಮೀಸಲಾತಿ ಕೂಗು ಕೇಳುವವರೆಗೂ ಹೋರಾಟ ಮಾಡಬೇಕು’ ಎಂದರು.‌

‘ಕುರುಬರಿಗೆ ಅನ್ಯಾಯವಾಗಿದ್ದು, ಸಮುದಾಯದ ಸ್ವಾಮೀಜಿಗಳು ಬೀದಿಗೆ ಬಂದಿದ್ದಾರೆ. ರಾಜ್ಯದ 60 ಲಕ್ಷ ಕುರುಬರು ಸಂಘಟಿತರಾಗಿ ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಫೆ.7ರಂದು ನಡೆಯುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ನಮ್ಮ ಕೂಗು ಕೇಂದ್ರಕ್ಕೆ ತಲುಪುವಂತೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಕುರುಬರು ಬುಡಕಟ್ಟು ಸಮುದಾಯದವರೆಂದು ಬ್ರಿಟಿಷರ ಕಾಲದಲ್ಲೇ ಪ್ರಸ್ತಾಪವಾಗಿದೆ. ಸಮುದಾಯದ ಬಹುಪಾಲು ಮಂದಿ ಅವಿದ್ಯಾವಂತರಾಗಿದ್ದು, ಉದ್ಯೋಗ ಹಾಗೂ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಕುರುಬರನ್ನು ಬ್ರಿಟಿಷರೇ ಎಸ್‌.ಟಿ ಪಟ್ಟಿಯಲ್ಲಿರಿಸಿದ್ದರು. ಸ್ವಾತಂತ್ರ್ಯ ನಂತರ ನಮ್ಮ ಜನಾಂಗ ಮುಖ್ಯವಾಹಿನಿಗೆ ಬರಬೇಕೆಂದು ಅಂಬೇಡ್ಕರ್ ಎಸ್‌.ಟಿ ಮೀಸಲಾತಿಗೆ ಸೇರಿಸಿದ್ದರು’ ಎಂದು ವಿವರಿಸಿದರು.

‘ಹೊಸದಾಗಿ ಹೋರಾಟ ಮಾಡಿ ಮೀಸಲಾತಿ ಕೇಳುವ ಅಗತ್ಯವಿಲ್ಲ. ಸಂವಿಧಾನ ಬದ್ಧವಾಗಿ ನೀಡಿದ್ದ ಮೀಸಲಾತಿ ಹಕ್ಕಿನಿಂದ ಸಮುದಾಯ ವಂಚಿತವಾಗಿದ್ದು, ಈಗ ಕುರುಬರು ಜಾಗೃತರಾಗಿ ಎಸ್‌.ಟಿಗೆ ಸೇರಿಸಿ ಎಂದು ಕೇಳುತ್ತಿದ್ದಾರೆ ಅಷ್ಟೇ’ ಎಂದು ತಿಳಿಸಿದರು.

ಒಗ್ಗಟ್ಟಾಗಿ ಹೋಗಲಿಲ್ಲ: ‘1991ರಲ್ಲಿ ಪ್ರವರ್ಗ 1ರಲ್ಲಿದ್ದ ವಾಲ್ಮೀಕಿ ಜನಾಂಗದ ಮುಖಂಡರು ಒಗ್ಗಟ್ಟಾಗಿ ದೇವೇಗೌಡರ ಜತೆ ಹೋಗಿ ಆಗಿನ ಪ್ರಧಾನಮಂತ್ರಿ ಚಂದ್ರಶೇಖರ್ ಅವರ ಜತೆ ಚರ್ಚಿಸಿ ತಮ್ಮ ಸಮುದಾಯಕ್ಕೆ ಎಸ್‌.ಟಿ ಮೀಸಲಾತಿ ಪಡೆಯುವಲ್ಲಿ ಸಫಲರಾದರು. ಆದರೆ, ಕುರುಬ ಸಮುದಾಯವರು ಹಿಂದೆ ಮೀಸಲಾತಿ ಕೇಳಲಿಲ್ಲ ಮತ್ತು ಒಗ್ಗಟ್ಟಾಗಿ ಹೋಗಲಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಅಹಿಂದ ಸಮುದಾಯದಲ್ಲಿ ಕುರುಬರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ನಾವೇ ಅನ್ಯಾಯಕ್ಕೆ ಒಳಗಾಗಿದ್ದೇವೆ. ಎಸ್‌.ಟಿ ಮೀಸಲಾತಿಯಿಂದ ವಂಚಿತರಾಗಿದ್ದೇವೆ. ಕುರುಬ ಸಮುದಾಯ ಮೀಸಲಾತಿ ಪಡೆದು, ಅಹಿಂದ ಸಮುದಾಯದ ಇತರೆ ಜನಾಂಗಗಳಿಗೂ ಎಸ್‌.ಟಿ ಮೀಸಲಾತಿ ಕೊಡಿಸುವ ಜವಾಬ್ದಾರಿ ಕನಕಗುರು ಪೀಠ ವಹಿಸುತ್ತದೆ’ ಎಂದು ಭರವಸೆ ನೀಡಿದರು.

‘ಶೋಷಿತ ಹಾಗೂ ಹಿಂದುಳಿದ ಸಮುದಾಯವರು ತಮ್ಮ ಹಕ್ಕು ಪಡೆಯಲು ಮನೆಯಲ್ಲಿ ಕುಳಿತರೆ ಆಗುವುದಿಲ್ಲ. ಬದಲಿಗೆ ಸಂಘಟಿತರಾಗಿ ಬೀದಿಗಿಳಿದು ಹೋರಾಟ ಮಾಡಿ ಹಕ್ಕು ಪಡೆಯಬೇಕೆಂದು ಅಂಬೇಡ್ಕರ್ ಹೇಳಿದ್ದಾರೆ. ಅದೇ ರೀತಿ ಕುರುಬ ಸಮುದಾಯದ ಮುಖಂಡರು ಭಿನ್ನಾಭಿಪ್ರಾಯ, ಕುಂಟು ನೆಪ ಬಿಟ್ಟು ಒಗ್ಗಟ್ಟಾಗಿ ಹೋರಾಟ ಮಾಡಿ ಮೀಸಲಾತಿ ಹಕ್ಕು ಪಡೆಯಬೇಕು’ ಎಂದು ಸಲಹೆ ನೀಡಿದರು.

360 ಕಿ.ಮೀ: ‘ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಕಾಗಿನೆಲೆಯಿಂದ ಜ.15ರಂದು ಆರಂಭವಾಗುವ ಪಾದಯಾತ್ರೆ 22 ದಿನದಲ್ಲಿ 360 ಕಿ.ಮೀ ಸಾಗಲಿದೆ. ಬೆಂಗಳೂರಿನಲ್ಲಿ ಫೆ.7ರಂದು ಬೃಹತ್ ಸಮಾವೇಶ ನಡೆಸಲಾಗುತ್ತದೆ. ಜಿಲ್ಲೆಯ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಬೇಕು’ ಎಂದು ಮಾಜಿ ಸಚಿವ ಎಸ್‌.ಎಂ.ರೇವಣ್ಣ ಮನವಿ ಮಾಡಿದರು.

ಕುರುಬ ಸಮುದಾಯದ ಮುಖಂಡರಾದ ಮುಕುಡಪ್ಪ, ಎಸ್.ಎಂ.ರಘುನಾಥ್, ವಿ.ಮಂಜುನಾಥ್, ಸೋಮಶೇಖರ್, ದೊಡ್ಡಯ್ಯ, ನಾಗರಾಜ್, ಚಿಕ್ಕರೇವಣ್ಣ, ಮಹೇಶಪ್ಪ, ಸರಸ್ವತಮ್ಮ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT