ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಕಾರ್ಮಿಕ ಕಾನೂನು ಉಲ್ಲಂಘನೆ ಆರೋಪ, ಬಡ್ವೆ ಕಂಪನಿಗೆ ನೋಟಿಸ್‌ ಜಾರಿ

ಕಾರ್ಮಿಕ ಕಾನೂನು ಉಲ್ಲಂಘನೆ ಆರೋಪ: ಪ್ರಕರಣ ದಾಖಲು
Last Updated 19 ಅಕ್ಟೋಬರ್ 2020, 16:09 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಬಡ್ವೆ ಎಂಜಿನಿಯರಿಂಗ್‌ ಲಿಮಿಟೆಡ್‌ ಕಂಪನಿಯಲ್ಲಿ ಕಾರ್ಮಿಕ ಕಾನೂನುಗಳ ಉಲ್ಲಂಘನೆಯ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕಾರ್ಮಿಕ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿ ಕಂಪನಿಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಿದ್ದಾರೆ.

ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಬಡ್ವೆ ಕಂಪನಿಯ 2 ಘಟಕಗಳಿದ್ದು, ಹೊರ ಗುತ್ತಿಗೆ ಆಧಾರದಲ್ಲಿ ಖಾಸಗಿ ಏಜೆನ್ಸಿಗಳಿಂದ ಸುಮಾರು 4 ಸಾವಿರ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ. ಸ್ಥಳೀಯ, ಅಕ್ಕಪಕ್ಕದ ಜಿಲ್ಲೆಗಳ ಹಾಗೂ ಹೊರ ರಾಜ್ಯಗಳ ಕಾರ್ಮಿಕರು ಕಂಪನಿಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

ಕಾರ್ಮಿಕರ ವೇತನ, ಸವಲತ್ತು, ಕೆಲಸದ ಅವಧಿ ಮತ್ತು ಸ್ವರೂಪದ ಸಂಬಂಧ ಆಡಳಿತ ಮಂಡಳಿಯು ಏಜೆನ್ಸಿಗಳ ಜತೆ ಕರಾರು ಮಾಡಿಕೊಂಡಿದೆ. ಆದರೆ, ಕಂಪನಿ ಆಡಳಿತ ಮಂಡಳಿಯು ಕರಾರು ನಿಯಮ ಉಲ್ಲಂಘಿಸಿ ಕೆಲಸಗಾರರನ್ನು ಬೇರೆ ಕೆಲಸಗಳಿಗೆ ನಿಯೋಜಿಸಿದ ಸಂಬಂಧ ಕೆಲಸಗಾರರು ಕಾರ್ಮಿಕ ಇಲಾಖೆಗೆ ದೂರು ಕೊಟ್ಟಿದ್ದರು.

‘ಕಾರ್ಖಾನೆಯಲ್ಲಿ ಸರಕುಗಳ ಲೋಡಿಂಗ್‌ ಮತ್ತು ಅನ್‌ಲೋಡಿಂಗ್‌ ಕೆಲಸಕ್ಕೆ ನಿಯೋಜಿಸುವುದಾಗಿ ಆಡಳಿತ ಮಂಡಳಿಯು ಗುತ್ತಿಗೆ ಕರಾರು ಮಾಡಿಕೊಂಡಿತ್ತು. ಆದರೆ, ಈ ಕರಾರು ಉಲ್ಲಂಘಿಸಿ ಯಂತ್ರೋಪಕರಣಗಳ ನಿರ್ವಹಣೆಯ ಕೆಲಸ ಮಾಡಿಸುತ್ತಿದೆ’ ಎಂದು ಕಾರ್ಮಿಕರು ದೂರಿನಲ್ಲಿ ಆರೋಪಿಸಿದ್ದರು.

‘ಲೋಡಿಂಗ್‌ ಮತ್ತು ಅನ್‌ಲೋಡಿಂಗ್‌ ಕೆಲಸಕ್ಕೆ ಕಡಿಮೆ ವೇತನ ನಿಗದಿಪಡಿಸಿ ನೇಮಕ ಮಾಡಿಕೊಳ್ಳಲಾಗಿತ್ತು. ನಂತರ ಉತ್ಪಾದನಾ ಚಟುವಟಿಕೆಗಳಿಗೆ ನಿಯೋಜಿಸಿ ಕಡಿಮೆ ವೇತನದಲ್ಲಿ ಹೆಚ್ಚಿನ ಕೆಲಸ ಮಾಡಿಸಲಾಗುತ್ತಿದೆ. ಕರಾರು ಉಲ್ಲಂಘನೆ ಸಂಬಂಧ ಪ್ರಶ್ನೆ ಮಾಡಿದರೆ ಆಡಳಿತ ಮಂಡಳಿಯವರು ಹಾಗೂ ಏಜೆನ್ಸಿಯವರು ಕೆಲಸದಿಂದ ವಜಾಗೊಳಿಸುವುದಾಗಿ ಬೆದರಿಸುತ್ತಾರೆ’ ಎಂದು ಕಾರ್ಮಿಕರು ದೂರಿದ್ದರು.

ಪರಿಶೀಲನೆ: ಕಾರ್ಮಿಕ ಇಲಾಖೆ ಅಧಿಕಾರಿಗಳು ಕಂಪನಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಗುತ್ತಿಗೆ ಕಾರ್ಮಿಕರು ಯಂತ್ರೋಪಕರಣ ನಿರ್ವಹಣೆಯ ಕೆಲಸ ಮಾಡುತ್ತಿದ್ದ ಸಂಗತಿ ಬಯಲಾಗಿದೆ. ಹೀಗಾಗಿ ಅಧಿಕಾರಿಗಳು ಕಂಪನಿ ಆಡಳಿತ ಮಂಡಳಿಯ 5 ನಿರ್ದೇಶಕರು ಮತ್ತು 13 ಏಜೆನ್ಸಿಗಳ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.

‘ಕಂಪನಿಗೆ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸಗಾರರನ್ನು ನಿಯೋಜಿಸಿರುವ ಆರ್‌ಜಿಎಸ್‌ ಹಾಗೂ ಎಸ್‌ಎಲ್‌ವಿ ಏಜೆನ್ಸಿ ಹೆಸರನ್ನು ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಆರೋಪಪಟ್ಟಿಯಲ್ಲಿ ಕೈಬಿಟ್ಟಿದ್ದಾರೆ. ಅಧಿಕಾರಿಗಳ ಈ ನಡೆ ಅನುಮಾನಾಸ್ಪದವಾಗಿದೆ’ ಎಂದು ಕಾರ್ಮಿಕರು ದೂರಿದ್ದಾರೆ.

ಮೀನಮೇಷ: ‘ಪ್ರಕರಣ ಸಂಬಂಧ ಸಮಗ್ರ ವರದಿ ನೀಡುವಂತೆ ಕಾರ್ಮಿಕ ಸಚಿವರು, ಇಲಾಖೆ ಆಯುಕ್ತರು ಹಾಗೂ ಸಹಾಯಕ ಆಯುಕ್ತರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಆದರೂ ಅಧಿಕಾರಿಗಳು ಆಯುಕ್ತರಿಗೆ ವರದಿ ನೀಡಿಲ್ಲ. ಜತೆಗೆ ಆಡಳಿತ ಮಂಡಳಿ ಮತ್ತು ಗುತ್ತಿಗೆ ಏಜೆನ್ಸಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಆಯುಕ್ತರಿಗೆ ಪತ್ರ ಬರೆಯಲು ಮೀನಮೇಷ ಎಣಿಸುತ್ತಿದ್ದಾರೆ’ ಎಂದು ಕಾರ್ಮಿಕರು ಗಂಭೀರ ಆರೋಪ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT