ಶುಕ್ರವಾರ, ಮೇ 20, 2022
23 °C
ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ ಪರಿಶೀಲನೆ

ತುರ್ತು ನಿಗಾ ಘಟಕ ಸ್ಥಳಾಂತರಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಎಸ್ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿನ ಅಪಘಾತ ತುರ್ತು ನಿಗಾ ಘಟಕವನ್ನು ಆಸ್ಪತ್ರೆ ಹಿಂಭಾಗಕ್ಕೆ ಸ್ಥಳಾಂತರಿಸಬೇಕು. ಜತೆಗೆ ಘಟಕದ ಹಾಸಿಗೆ ಸಾಮರ್ಥ್ಯವನ್ನು 10ಕ್ಕೆ ಹೆಚ್ಚಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚಿಸಿದರು.

ಎಸ್‌ಎನ್‌ಆರ್‌ ಆಸ್ಪತ್ರೆಗೆ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ‘ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ ಆಸ್ಪತ್ರೆಗೆ ಬರುವ ಅಪಘಾತದ ಗಾಯಾಳುಗಳ ಸಂಖ್ಯೆ ಸಹ ಹೆಚ್ಚಾಗಿದೆ. 5 ಹಾಸಿಗೆ ಸಾಮರ್ಥ್ಯದ ತುರ್ತು ನಿಗಾ ಘಟಕ ಸಾಕಾಗುವುದಿಲ್ಲ’ ಎಂದು ಹೇಳಿದರು.

‘ತುರ್ತು ನಿಗಾ ಘಟಕ ಸ್ಥಳಾಂತರ ಸಂಬಂಧ ವಾರದೊಳಗೆ ವರದಿಯನ್ನು ಸಿದ್ಧಪಡಿಸಿ ಕಳುಹಿಸಿ. ಆಸ್ಪತ್ರೆಯಲ್ಲೇ ಒಂದು ಸುಸಜ್ಜಿತ ಕೊಠಡಿ ಗುರುತಿಸಿ. ಅಗತ್ಯವಿದ್ದರೆ ಕಟ್ಟಡ ದುರಸ್ತಿ ಮಾಡಿಸಿ, ಅಲ್ಲಿ ತುರ್ತು ನಿಗಾ ಘಟಕ ತೆರೆಯಿರಿ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್‌.ಜಿ.ನಾರಾಯಣಸ್ವಾಮಿ ಅವರಿಗೆ ಸೂಚಿಸಿದರು.

ಆಸ್ಪತ್ರೆಯ ಕೆಲ ವಿಭಾಗಗಳಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಗಮನಿಸಿ ಅಸಮಾಧಾನಗೊಂಡ ಜಿಲ್ಲಾಧಿಕಾರಿ, ‘ಆಸ್ಪತ್ರೆಯಲ್ಲಿ ಮುಖ್ಯವಾಗಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಸ್ವಚ್ಛತಾ ಕಾರ್ಯ ನಿರ್ವಹಿಸುವ ಗುತ್ತಿಗೆದಾರರನ್ನು ಬದಲಿಸಿ’ ಎಂದು ಆದೇಶಿಸಿದರು.

ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್‌ಗಳ ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಖಾಲಿ ಹುದ್ದೆ ಭರ್ತಿಗೆ ಶೀಘ್ರವೇ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್‌ಎಚ್‌ಎಂ) ಲಭ್ಯವಿರುವ ಸೌಲಭ್ಯ ಪಡೆದು ಆಸ್ಪತ್ರೆಯನ್ನು ಮತ್ತಷ್ಟು ಸುಸಜ್ಜಿತಗೊಳಿಸುತ್ತೇವೆ’ ಎಂದು ಭರವಸೆ ನೀಡಿದರು.

ಮುನ್ನೆಚ್ಚರಿಕೆ ಇರಲಿ

‘ಜಿಲ್ಲಾ ಆಸ್ಪತ್ರೆಗೆ ಇದೇ ಮೊದಲ ಬಾರಿ ಭೇಟಿ ನೀಡಿದ್ದೇನೆ. 10 ದಿನದಲ್ಲಿ ಮತ್ತೊಮ್ಮೆ ಆಸ್ಪತ್ರೆಗೆ ಬಂದು ಪರಿಶೀಲನೆ ಮಾಡುತ್ತೇನೆ. ಆಸ್ಪತ್ರೆಯಲ್ಲಿ ತುರ್ತಾಗಿ ಆಗಬೇಕಿರುವ ಕಾಮಗಾರಿ ಪಟ್ಟಿ ಸಿದ್ಧಪಡಿಸಿ. ಜಿಲ್ಲೆಯಲ್ಲಿ ಈವರೆಗೆ 2 ಲಕ್ಷ ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಕೋವಿಡ್‌ ವಿಚಾರದಲ್ಲಿ ಇದೇ ರೀತಿ ಮುನ್ನೆಚ್ಚರಿಕೆ ಇರಬೇಕು’ ಎಂದು ಕಿವಿಮಾತು ಹೇಳಿದರು.

‘ರಕ್ತ ಪರೀಕ್ಷೆ, ಸಿ.ಟಿ ಸ್ಕ್ಯಾನ್ ಮತು ಎಂಆರ್‍ಐ ಸ್ಕ್ಯಾನ್‌ ಸೇವೆಗೆ ಸ್ವಲ್ಪ ಮಟ್ಟಿನ ಶುಲ್ಕ ವಿಧಿಸುವುದರಿಂದ ಆಸ್ಪತ್ರೆಯ ಖರ್ಚು ವೆಚ್ಚಕ್ಕೆ ಹಣ ಹೊಂದಿಸಬಹುದು. ಬಿಪಿಎಲ್ ಮತ್ತು ಎಪಿಎಲ್ ಪಡಿತರದಾರರನ್ನು ಪರಿಗಣಿಸಿ ಶುಲ್ಕ ವಿಧಿಸಲು ಅನುಮತಿ ನೀಡಬೇಕು’ ಎಂದು ನಾರಾಯಣಸ್ವಾಮಿ ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.