ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್: ಬೆಮಲ್‌ ಖಾಸಗೀಕರಣಕ್ಕೆ ವಿರೋಧಿ

ಶೀಘ್ರವೇ ವಿಧಾನಸೌಧ ಮುತ್ತಿಗೆ ಕಾರ್ಮಿಕರ ತೀರ್ಮಾನ
Last Updated 14 ಫೆಬ್ರುವರಿ 2021, 3:06 IST
ಅಕ್ಷರ ಗಾತ್ರ

ಕೆಜಿಎಫ್: ಲಾಭದಾಯಕವಾದ ಕೇಂದ್ರ ಸರ್ಕಾರಿ ಉದ್ದಿಮೆಗಳನ್ನು ಖಾಸಗೀಕರಣ ಮಾಡಿ ಬಂಡವಾಳ ತೆಗೆಯಲು ಯತ್ನಿಸುವುದು ಜನ ವಿರೋಧಿ ಕ್ರಮ ಎಂದು ಕಾರ್ಮಿಕ ಮುಖಂಡ ಮುನಿರತ್ನಂ ಆರೋಪಿಸಿದರು.

ಬೆಮಲ್ ನಗರದಲ್ಲಿ ಶನಿವಾರ ಬೆಮಲ್ ಖಾಸಗೀಕರಣದ ವಿರುದ್ಧ ನಿವೃತ್ತ ಬೆಮಲ್ ಕಾರ್ಮಿಕ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸರ್ಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗೀಕರಣ ಮಾಡಿದರೆ ₹1,75,000 ಕೋಟಿ ಹಣ ಹೊಂದಾಣಿಕೆ ಮಾಡಿ ಬಜೆಟ್ ಖೋತಾ ಸರಿದೂಗಿಸಬಹುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಆದರೆ ಅವರು ಸರ್ಕಾರದ ಆದಾಯದ ಮೂಲವನ್ನು ಮರೆಮಾಚಿದ್ದಾರೆ. ರಿಸರ್ವ್ ಬ್ಯಾಂಕ್ ನಿಂದ ₹1,76,000 ಕೋಟಿ ಹಿಂತೆಗೆಯಲಾಗಿದೆ. ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆಯಿಂದ ₹20 ಲಕ್ಷ ಕೋಟಿ ಸಂಗ್ರಹವಾಗಿದೆ. ಜೊತೆಗೆ ದೇಶದ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಸಾವಿರಾರು ಕೋಟಿ ಲಾಭಾಂಶವನ್ನು ಪ್ರತಿವರ್ಷ ಕೇಂದ್ರಕ್ಕೆ ನೀಡುತ್ತಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಪರೋಕ್ಷ ತೆರಿಗೆಯಿಂದ ಜನರ ಮೇಲೆ ಹೊರೆ ಹಾಕುತ್ತಿದೆ. ಸಾರ್ವಜನಿಕರು ಖರ್ಚು ಮಾಡುವ ಪ್ರತಿಯೊಂದು ರೂಪಾಯಿಯಲ್ಲಿಯೂ ಜಿಎಸ್‌ಟಿ ಕಡಿತವಾಗುತ್ತಿದೆ. ಅದೇ ಪ್ರಮಾಣದಲ್ಲಿ ಜನರಿಗೆ ಅನುಕೂಲಗಳು ಸಿಗುತ್ತಿಲ್ಲ. ಕಾರ್ಪೋರೇಟ್ ಉದ್ದಿಮೆಗಳಿಗೆ ಸಾಲ, ಬಡ್ಡಿ ಮನ್ನಾಗಳು ಮಾತ್ರ ಸರಾಗವಾಗಿ ನಡೆಯುತ್ತಿದೆ ಎಂದು ದೂರಿದರು.

ಕೇವಲ ಐದು ಕೋಟಿ ಬಂಡವಾಳದಿಂದ 1964 ರಲ್ಲಿ ಪ್ರಾರಂಭವಾದ ಬೆಮಲ್ ಇಂದು ಸಾವಿರಾರು ಕೋಟಿ ಮೌಲ್ಯದ ಉದ್ದಿಮೆಯಾಗಿ ಬೆಳೆದಿದೆ. ಇಂತಹ ಸನ್ನಿವೇಶದಲ್ಲಿ ಬೆಮಲ್ ಖಾಸಗೀಕರಣ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಬೆಮಲ್ ಕಾರ್ಮಿಕ ಸಂಘದ ಅಧ್ಯಕ್ಷ ಆಂಜನೇಯರೆಡ್ಡಿ ಮಾತನಾಡಿ, ಬೆಮಲ್ ಮಾರಾಟಕ್ಕೆ ಇಲ್ಲ ಎಂದು ಕಾರ್ಮಿಕರು ಘೋಷಿಸಿದ್ದೇವೆ. ಖಾಸಗೀಕರಣದ ಉರುಳು ತಪ್ಪಿಸಿಕೊಳ್ಳಲು ಹಂತ ಹಂತದ ಹೋರಾಟ ಶುರು ಮಾಡಿದ್ದೇವೆ. ಎಂತಹ ಪರಿಸ್ಥಿತಿಯಲ್ಲಿಯೂಖಾಸಗಿಯವರನ್ನು ಕಾರ್ಖಾನೆಯೊಳಗೆ ಬಿಡುವುದಿಲ್ಲ. ಶೀಘ್ರದಲ್ಲಿಯೇ 2000 ಕಾರ್ಮಿಕರು ವಿಧಾನಸೌಧ ಮುತ್ತಿಗೆ ಹಾಕುತ್ತೇವೆ ಎಂದು ಘೋಷಿಸಿದರು.

ಒಂದು ಸಮಯದಲ್ಲಿ 17ಸಾವಿರ ಕಾರ್ಮಿಕರಿದ್ದ ಬೆಮಲ್‌ನಲ್ಲಿ ಇಂದು ಕೇವಲ 2000 ಕಾರ್ಮಿಕರು, ಅಧಿಕಾರಿಗಳು ಇದ್ದಾರೆ. ಬೆಮಲ್ ಕೂಡ ಬಿಜಿಎಂಎಲ್ ರೀತಿಯಲ್ಲಿ ಆಗಬಾರದು. ಸಂಘಟಿತ ಹೋರಾಟ ನಡೆಸಿ ಕಾರ್ಖಾನೆಯನ್ನು ಉಳಿಸಿಕೊಳ್ಳಬೇಕು ಎಂದು ಮುಖಂಡ ಅರ್ಜುನನ್ ಹೇಳಿದರು.

ಕಾರ್ಮಿಕ ಮುಖಂಡರಾದ ಭರತ್ ಭೂಷಣ್, ಪಿ.ಶ್ರೀನಿವಾಸ್, ಅಶ್ವಥ ನಾರಾಯಣ, ರಾಜಶೇಖರ್, ಜಯಶೀಲನ್, ಗಣೇಶ್ ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT