ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಗೌಡ ಕಾಂಗ್ರೆಸ್‌ ಸೇರ್ಪಡೆಗೆ ವಿರೋಧ

ರಾಜಕೀಯ ಗೊಂದಲ ಸೃಷ್ಟಿ: ಮುನಿಯಪ್ಪ ಬಣದ ಮುಖಂಡರ ಆಕ್ಷೇಪ
Last Updated 21 ಸೆಪ್ಟೆಂಬರ್ 2021, 16:40 IST
ಅಕ್ಷರ ಗಾತ್ರ

ಕೋಲಾರ: ‘ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡರನ್ನು ಕಾಂಗ್ರೆಸ್‌ಗೆ ಮಾಡಿಕೊಳ್ಳಲು ವಿರೋಧವಿದೆ. ಈ ಹಿಂದೆ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿದ್ದ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಅನಿವಾರ್ಯತೆ ಏನಿದೆ?’ ಎಂದು ಕಾಂಗ್ರೆಸ್‌ ಪಾಳಯದಲ್ಲಿನ ಕೆ.ಎಚ್‌.ಮುನಿಯಪ್ಪ ಬಣದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಕಿಸಾನ್‌ ಖೇತ್‌ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ‘ಈ ಹಿಂದೆ 2 ಬಾರಿ ಸೋತಿದ್ದ ಶ್ರೀನಿವಾಸಗೌಡರನ್ನು ಕ್ಷೇತ್ರದ ಮತದಾರರು 2018ರಲ್ಲಿ ಪಕ್ಷಾತೀತವಾಗಿ ಬೆಂಬಲಿಸಿ ಆಯ್ಕೆ ಮಾಡಿದ್ದಾರೆ. ಆದರೆ, ಈಗ ಅವರು ಕಾಂಗ್ರೆಸ್ ಸೇರುವುದಾಗಿ ಘೋಷಿಸಿ ಕ್ಷೇತ್ರದಲ್ಲಿ ರಾಜಕೀಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಲೋಕಸಭಾ ಚುನಾವಣೆಯಲ್ಲಿ ಶ್ರೀನಿವಾಸಗೌಡರು ಮುನಿಯಪ್ಪರ ವಿರುದ್ದ ಅಪಪ್ರಚಾರ ಮಾಡಿದ್ದರು. ಅಲ್ಲದೇ, ಬಿಜೆಪಿಯ ಮುನಿಸ್ವಾಮಿ ಅವರು ಚುನಾವಣೆಯಲ್ಲಿ ಗೆದ್ದಾಗ ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು. ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಾದಿ ಚುನಾವಣೆ ವೇಳೆ ಜೆಡಿಎಸ್ ಜತೆ ಹೊಂದಾಣಿಕೆ ಮಾತುಕತೆ ನಡೆಸಿದಾಗ ಕಾಲ ಮಿಂಚಿ ಹೋಗಿದೆ ಎಂದು ನಿರಾಕರಿಸಿದ್ದ ಅವರು ಈಗ ಕಾಂಗ್ರೆಸ್‌ ಮನೆ ಬಾಗಿಲಿಗೆ ಬಂದಿದ್ದಾರೆ’ ಎಂದು ಕುಟುಕಿದರು.

ಕೊಡುಗೆ ಏನು: ‘ಮುನಿಯಪ್ಪ ಅವರು ಕೆ.ಸಿ ವ್ಯಾಲಿ ಯೋಜನೆಗೆ ರೂಪುರೇಷೆ ನೀಡಿದವರು. ನಂತರ ರಮೇಶ್‌ಕುಮಾರ್‌ ಸಚಿವರಾಗಿ ಯೋಜನೆ ಜಾರಿಗೆ ಒತ್ತು ಕೊಟ್ಟರು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ದೂರದೃಷ್ಟಿಯಿಂದ ಯೋಜನೆ ಅನುಷ್ಠಾನಗೊಂಡಿತು’ ಎಂದು ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಉದಯ್‌ಶಂಕರ್ ಹೇಳಿದರು.

‘ಕೆ.ಸಿ ವ್ಯಾಲಿ ಯೋಜನೆ ವಿಚಾರದಲ್ಲಿ ಶ್ರೀನಿವಾಸಗೌಡರು ಕಾಂಗ್ರೆಸ್ ಮನೆಗೆ ಬೆಂಕಿ ಹಚ್ಚುತ್ತಿದ್ದಾರೆ. ದೆೇಶದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಎಲ್ಲಾ ರಾಜಕೀಯ ನಾಯಕರು ಗೌರವದಿಂದ ಕಾಣುತ್ತಾರೆ. ಅಂತಹವರನ್ನು ಟೀಕಿಸಿರುವ ಶ್ರೀನಿವಾಸಗೌಡರು ಯಾವ ರಾಜಕಾರಣ ಮಾಡಲು ಕಾಂಗ್ರೆಸ್‌ಗೆ ಬರುತ್ತಿದ್ದಾರೆ?’ ಎಂದು ಕೇಳಿದರು.

‘ಶ್ರೀನಿವಾಸಗೌಡರು ಕ್ಷೇತ್ರದ ವಿಚಾರದಲ್ಲಿ ಚರ್ಚೆ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರ ಬಳಿ ಹೋಗಿರುವುದಕ್ಕೆ ತಕರಾರಿಲ್ಲ. ಕಾಂಗ್ರೆಸ್‌ಗೆ ಅವರ ಅಗತ್ಯವಿಲ್ಲ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಯಾರೂ ಸಿದ್ಧರಿಲ್ಲ. ಶ್ರೀನಿವಾಸಗೌಡರು ಮುನಿಯಪ್ಪರ ವಿರುದ್ಧ ಲಘುವಾಗಿ ಮಾತನಾಡಿದರೆ ಸಭೆ ಸಮಾರಂಭಗಳಲ್ಲಿ ಘೇರಾವ್‌ ಹಾಕುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸ್ವಾರ್ಥ ರಾಜಕಾರಣ: ‘ಜಿ.ಪಂ ಚುನಾವಣೆಯಲ್ಲಿ ಮಗನಿಗೆ ಕಾಂಗ್ರೆಸ್‌ನ ಟಿಕೆಟ್ ಕೊಡಿಸಲು ಹೊರಟಿರುವ ಶ್ರೀನಿವಾಸಗೌಡರಿಗೆ ಯಾವ ರಾಜಕೀಯ ಸಿದ್ಧಾಂತವಿದೆ? ರಾಜಕೀಯ ಲಾಭಕ್ಕಾಗಿ ಪಕ್ಷಾಂತರ ಮಾಡುವ ಸ್ವಾರ್ಥ ರಾಜಕಾರಣ ಅವರಿಗೆ ಬೇಕೇ? ಮುನಿಯಪ್ಪರನ್ನು ತೆಗಳುವುದೇ ಶ್ರೀನಿವಾಸಗೌಡ ಹಾಗೂ ಅವರ ತಂಡದ ಅಜೆಂಡಾ’ ಎಂದು ನಗರ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಪ್ರಸಾದ್‌ಬಾಬು ಗುಡುಗಿದರು.

‘ಶ್ರೀನಿವಾಸಗೌಡರು ಮುನಿಯಪ್ಪರ ವಿರುದ್ಧ ಪಿತೂರಿ ಮಾಡಿದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಪಕ್ಷದಲ್ಲಿನ ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆಯದೆ ಶ್ರೀನಿವಾಸಗೌಡರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ತೀರ್ಮಾನ ಮಾಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ’ ಎಂದರು.

ಕಾಂಗ್ರೆಸ್‌ ಜಿಲ್ಲಾ ವಕ್ತಾರ ಎಲ್.ಎ.ಮಂಜುನಾಥ್, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಕೆಪಿಸಿಸಿ ಎಸ್ಸಿ ವಿಭಾಗದ ಉಪಾಧ್ಯಕ್ಷ ಎಚ್.ವಿ.ಕುಮಾರ್, ಅಲ್ಪಸಂಖ್ಯಾತ ಘಟಕದ ಮುಖಂಡ ಇಕ್ಬಾಲ್ ಅಹಮ್ಮದ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT