ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ವಿರೋಧ

ಉಪ ವಿಭಾಗಾಧಿಕಾರಿ ಕಚೇರಿ ಎದುರು ರೈತ ಸಂಘ ಸದಸ್ಯರ ಧರಣಿ
Last Updated 21 ಸೆಪ್ಟೆಂಬರ್ 2020, 15:48 IST
ಅಕ್ಷರ ಗಾತ್ರ

ಕೋಲಾರ: ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಪ್ರೊ.ನಂಜುಂಡಸ್ವಾಮಿ ಬಣ) ಸದಸ್ಯರು ಇಲ್ಲಿ ಸೋಮವಾರ ಉಪ ವಿಭಾಗಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

‘ಸರ್ಕಾರ ರಿಯಲ್‌ ಎಸ್ಟೇಟ್‌ ದಂಧೆಕೋರರು, ಬಂಡವಾಳಶಾಹಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಮಣಿದು ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿದೆ. ಸರ್ಕಾರದ ಈ ನಡೆ ಖಂಡನೀಯ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಸ್ವಾತಂತ್ರ್ಯ ನಂತರ ದೇಶದಲ್ಲಿ ಭೀಕರ ಬರಗಾಲ ಎದುರಾಗಿ ಜನ ಹಸಿವಿನಿಂದ ಮೃತಪಟ್ಟ ಸಂದರ್ಭದಲ್ಲಿ ಸರ್ಕಾರ ಪ್ರತಿ ಹಳ್ಳಿಯಲ್ಲೂ ಕೃಷಿಗೆ ಭೂಮಿ ವಿಂಗಡಣೆ ಮಾಡಿ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದಿತು. ಆದರೆ, ಈಗಿನ ಸರ್ಕಾರಗಳು ಕೃಷಿ ನಾಶ ಮಾಡಿ ಕಾರ್ಪೊರೇಟ್‌ ಕಂಪನಿಗಳ ಬೂಟು ನೆಕ್ಕಿ ಆಹಾರ ಭದ್ರತೆಗಾಗಿ ಹೊರ ದೇಶಗಳತ್ತ ಕೈಚಾಚುವ ಪರಿಸ್ಥಿತಿ ಸೃಷ್ಟಿಸುತ್ತಿವೆ’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮುಶಿವಣ್ಣ ಕಿಡಿಕಾರಿದರು.

‘ಸರ್ಕಾರ ರೈತರನ್ನು ಬೀದಿಗೆ ತಳ್ಳಿ, ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಹಿತ ಕಾಯಲು ಹೊರಟಿದೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಕೈಗೊಂಬೆಯಾಗಿರುವ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಸಣ್ಣ ಭೂ ಹಿಡುವಳಿದಾರರು ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಪಾಯಕಾರಿ ಕಾಯ್ದೆ: ‘ಈವರೆಗೆ ಕೃಷಿಕರಿಗೆ ಮಾತ್ರ ಕೃಷಿ ಭೂಮಿ ಖರೀದಿಸಲು ಅವಕಾಶವಿತ್ತು. ಕಾಯ್ದೆ ತಿದ್ದುಪಡಿ ಮಾಡಿರುವುದರಿಂದ ಕೃಷಿಕರಲ್ಲದವರಿಗೂ ಕೃಷಿ ಭೂಮಿ ಖರೀದಿಸಲು ಅವಕಾಶ ಸಿಕ್ಕಿದೆ. ಸರ್ಕಾರ ಕೋವಿಡ್‌ ಸಂದರ್ಭ ಬಳಸಿಕೊಂಡು ಬ್ರಿಟೀಷರಿಗಿಂತಲೂ ಕಡೆಯಾದ ಅಪಾಯಕಾರಿ ಕಾಯ್ದೆ ಜಾರಿಗೊಳಿಸಿದೆ’ ಎಂದು ಧರಣಿನಿರತರು ಆರೋಪಿಸಿದರು.

‘ರೈತರು, ಕೃಷಿ ಕಾರ್ಮಿಕರು, ಭೂರಹಿತ ಬಡವರ ಪರವಾಗಿದ್ದ ಭೂ ಸುಧಾರಣೆ ಕಾಯ್ದೆಗೆ ಸರ್ಕಾರ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿರುವುದು ಖಂಡನೀಯ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಪೊರೇಟ್‌ ಕಂಪನಿಗಳು ಹಾಗೂ ಬಂಡವಾಳಶಾಹಿಗಳ ಹಿತರಕ್ಷಣೆಗಾಗಿ ರೈತ ವಿರೋಧಿ ಧೋರಣೆ ಅನುಸರಿಸುತ್ತಿವೆ. ಸರ್ಕಾರಗಳ ಈ ನಡೆ ಸಮಾನತೆ ತತ್ವಕ್ಕೆ ವಿರೋಧವಾಗಿದೆ’ ಎಂದು ದೂರಿದರು.

‘ಸರ್ಕಾರ ಕಾರ್ಪೊರೇಟ್‌ ಕಂಪನಿಗಳು ಹಾಗೂ ಬಂಡವಾಳಶಾಹಿಗಳ ಹಿತ ಕಾಯುವುದನ್ನು ಬಿಟ್ಟು ರೈತರ ಪರವಾಗಿ ವರ್ತಿಸಬೇಕು. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ನಂದಕುಮಾರ್, ಕಾರ್ಯಾಧ್ಯಕ್ಷ ಗಣೇಶ್, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರು ಮತ್ತು ಸದಸ್ಯರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT