ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಾಂಗ ದಾನ: ಜನರಿಗೆ ಅರಿವು ಅಗತ್ಯ

ರಾಜ್ಯದಲ್ಲಿ 1.25 ಲಕ್ಷ ಜನರಿಗೆ ಅಂಧತ್ವ l 30ಕ್ಕೂ ಹೆಚ್ಚು ನಾಗರಿಕರಿಂದ ರಕ್ತದಾನ
Last Updated 3 ಸೆಪ್ಟೆಂಬರ್ 2021, 3:40 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ‘ವಿದ್ಯಾವಂತ ಸಮುದಾಯ ಅಂಗಾಂಗ ದಾನದ ಮಹತ್ವ ಕುರಿತು ಸಮಾಜದಲ್ಲಿ ಅರಿವು ಮೂಡಿಸಬೇಕು. ಸ್ವಯಂ ಪ್ರೇರಣೆಯಿಂದ ಅಂಗಾಂಗ ದಾನ ಮಾಡಲು ಪ್ರೇರೇಪಿಸಬೇಕು’ ಎಂದು ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮದ ಮಾಜಿ ಅಧ್ಯಕ್ಷ ಎಲ್. ಗೋಪಾಲಕೃಷ್ಣ
ಹೇಳಿದರು.

ಪಟ್ಟಣದ ಜಗದೀಶ್ ಸಭಾಂಗಣದಲ್ಲಿ ರೋಟರಿ ಸೆಂಟ್ರಲ್ ಶ್ರೀನಿವಾಸಪುರ, ಆರ್.ಎಲ್. ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕೆಂಪೇಗೌಡ ಮೆಡಿಕಲ್ ಸರ್ವೀಸ್ ಟ್ರಸ್ಟ್ ವತಿಯಿಂದ ಗುರುವಾರ ಏರ್ಪಡಿಸಿದ್ದ ನೇತ್ರದಾನ ಪಾಕ್ಷಿಕ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಬಡವರ ಆರೋಗ್ಯ ರಕ್ಷಣೆಗೆ ದಾನಿಗಳು ನೆರವು ನೀಡಬೇಕು ಎಂದು ಹೇಳಿದರು.

ಜಿಲ್ಲಾ ಅಂಧತ್ವ ನಿರ್ವಹಣಾಧಿಕಾರಿ ಡಾ.ಎನ್.ಸಿ. ನಾರಾಯಣಸ್ವಾಮಿ ಮಾತನಾಡಿ, ನೇತ್ರದಾನ ಮಹಾದಾನ. ನೇತ್ರದಾನ ಮಾಡುವುದರ ಮೂಲಕ ಇನ್ನೊಬ್ಬರ ಜೀವನ ಬದಲಾಯಿಸಲು ಸಾಧ್ಯವಾಗುತ್ತದೆ. ನೇತ್ರದಾನಿಯ ದೃಷ್ಟಿ ಶಾಶ್ವತವಾಗುತ್ತದೆ. ಅಂಧತ್ವ ನಿವಾರಣೆ ದೃಷ್ಟಿಯಿಂದ ನೇತ್ರದಾನ ಪ್ರತಿ ಕುಟುಂಬದ ಸಂಪ್ರದಾಯವಾಗಬೇಕು ಎಂದು ಹೇಳಿದರು.

ರಾಜ್ಯದಲ್ಲಿ 1.25 ಲಕ್ಷ ಜನರು ಅಂಧತ್ವದಿಂದ ಬಳಲುತ್ತಿದ್ದಾರೆ. ಆದರೆ, 10 ರಿಂದ 20 ಸಾವಿರ ಮಂದಿ ಮಾತ್ರ ನೇತ್ರದಾನ ಮಾಡಲು ಮುಂದೆ ಬರುತ್ತಿದ್ದಾರೆ. ಇದರಿಂದ ಪೂರ್ಣ ಪ್ರಮಾಣದಲ್ಲಿ ಅಂಧತ್ವ ನಿವಾರಣೆ ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ನೇತ್ರ ಸಂಗ್ರಹ ಕೇಂದ್ರ ಸ್ಥಾಪಿಸಲಾಗುವುದು. ನೇತ್ರದಾನಿ ಮರಣ ಹೊಂದಿದ 6 ಗಂಟೆಯೊಳಗೆ ನೇತ್ರ ತಜ್ಞರು ದಾನಿಯ ನೇತ್ರಗಳನ್ನು ಪಡೆದುಕೊಂಡು ಸಂಗ್ರಹ ಕೇಂದ್ರದಲ್ಲಿ ಇಡಲಾಗುವುದು. ಅಗತ್ಯ ಇರುವ ವ್ಯಕ್ತಿಗಳಿಗೆ ಅಳವಡಿಸಲಾಗುವುದು ಎಂದು ಹೇಳಿದರು.

ರೋಟರಿ ಸೆಂಟ್ರಲ್ ಶ್ರೀನಿವಾಸಪುರ ಅಧ್ಯಕ್ಷ ಡಾ.ವೈ.ವಿ. ವೆಂಕಟಾಚಲ ಮಾತನಾಡಿ, ಒಬ್ಬ ರಕ್ತದಾನಿ ನೀಡುವ ರಕ್ತದಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಮೂವರ ಜೀವ ಉಳಿಸಬಹುದು. ಸಮಯಕ್ಕೆ ಸರಿಯಾಗಿ ಅಗತ್ಯ ಗುಂಪಿಗೆ ಸೇರಿದ ರಕ್ತ ಸಿಗದೆ ಹೆಚ್ಚಿನ ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದರು.

ನಿಗದಿತ ವಯೋಮಾನದ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದಾಗಿದೆ. ರಕ್ತದಾನ ಮಾಡುವುದರಿಂದ ಯಾವುದೇ ಪ್ರತಿ ಪರಿಣಾಮ ಆಗುವುದಿಲ್ಲ. ನೀಡಿದ ರಕ್ತ ಕೆಲವೇ ದಿನಗಳಲ್ಲಿ ಮತ್ತೆ ಶೇಖರಣೆಯಾಗುತ್ತದೆ. ಮೂಢನಂಬಿಕೆ ಬಿಟ್ಟು ರಕ್ತದಾನ ಮಾಡಲು ಮುಂದೆ ಬರಬೇಕು. ಇನ್ನೊಬ್ಬರ ಜೀವ ಉಳಿಸಿದ ಪುಣ್ಯಕ್ಕೆ ಭಾಜನರಾಗಬೇಕು ಎಂದು ಹೇಳಿದರು.

30ಕ್ಕೂ ಹೆಚ್ಚು ಮಂದಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ರಕ್ತದಾನ ಮಾಡಿದ ವ್ಯಕ್ತಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ರೋಟರಿ ಸೆಂಟ್ರಲ್ ಶ್ರೀನಿವಾಸಪುರ ಕಾರ್ಯದರ್ಶಿ ಎಚ್.ಆರ್. ನಾರಾಯಣಸ್ವಾಮಿ, ಸಹಾಯಕ ಗೌರ್ನರ್ ರಾಮಚಂದ್ರ, ಜಾಲಪ್ಪ ಆಸ್ಪತ್ರೆಯ ನೇತ್ರ ತಜ್ಞೆ ಡಾ.ಇಂಚರ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್. ರಾಜೇಂದ್ರಪ್ರಸಾದ್, ಜಿಲ್ಲಾ ಆರೋಗ್ಯ ಶಿಕ್ಷಕಿ ಪ್ರೇಮಾ, ಮುಖಂಡರಾದ ಶಿವಮೂರ್ತಿ, ಎಂ. ಬೈರೇಗೌಡ, ಮಂಜುನಾಥರೆಡ್ಡಿ, ಸಿಐಟಿ ಮಂಜು, ಸೀತರೆಡ್ಡಿ, ಮುನಿರೆಡ್ಡಿ, ಸೀನಪ್ಪ ಹಾಜರಿದ್ದರು. ವೆಂಕಟೇಶ್ವರ ಪ್ಯಾರಾ ಮೆಡಿಕಲ್ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಡಾ.ವೈ.ವಿ.ವೆಂಕಟಾಚಲ ಅವರ ನೇತೃತ್ವದಲ್ಲಿ ಮೆರವಣಿಗೆ ನಡೆಸಿ ನೇತ್ರದಾನದ ಬಗ್ಗೆ ಅರಿವು ಮೂಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT