ಗುರುವಾರ , ಫೆಬ್ರವರಿ 27, 2020
19 °C
‘ಪ್ರಜಾವಾಣಿ’ ಫೋನ್‌–ಇನ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪಾಲಿ ಭರವಸೆ

ಜಿಲ್ಲೆಯ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಭಾಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯಲ್ಲಿ ಸುಮಾರು 450 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಈ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ ಹೇಳಿದರು.

‘ಪ್ರಜಾವಾಣಿ’ಯು ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಮಾತನಾಡಿ, ‘ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸುವ ಸಂಬಂಧ ಜಿಲ್ಲಾಧಿಕಾರಿ ಇತ್ತೀಚೆಗೆ ಸಭೆ ನಡೆಸಿದ್ದಾರೆ. ಅಂಗನವಾಡಿ ಕಟ್ಟಡಗಳಿಗೆ ನಿವೇಶನ ಗುರುತಿಸುವ ಪ್ರಯತ್ನ ನಡೆದಿದೆ’ ಎಂದು ವಿವರಿಸಿದರು.

ಬೆಳಿಗ್ಗೆ 10 ಗಂಟೆಗೆ ಆರಂಭವಾದ ಫೋನ್‌–ಇನ್‌ ಕಾರ್ಯಕ್ರಮಕ್ಕೆ ಜಿಲ್ಲೆಯ ಮೂಲೆ ಮೂಲೆಯಿಂದ ಸಾರ್ವಜನಿಕರು ಕರೆ ಮಾಡಿ ಸಮಸ್ಯೆ ಹೇಳಿಕೊಂಡರು. ಸತತ ಒಂದೂವರೆ ತಾಸು ಕರೆಗಳು ರಿಂಗಣಿಸಿದವು. ಉಪ ನಿರ್ದೇಶಕಿ ಎಂ.ಜಿ.ಪಾಲಿ, ಜಿಲ್ಲಾ ಅಂಗವಿಕಲರು ಮತ್ತು ಹಿರಿಯ ನಾಗರೀಕರ ಸಬಲೀಕರಣಾಧಿಕಾರಿ ಎನ್‌.ಎಂ.ಜಗದೀಶ್‌, ಜಿಲ್ಲಾ ಪರಿವೀಕ್ಷಣಾಧಿಕಾರಿ ಎಚ್‌.ಜಿ.ಮಹೇಶ್‌ಬಾಬು, ಸಿಡಿಪಿಒಗಳಾದ ರಮೇಶ್‌, ಜಯದೇವಿ. ವಂಶಿಕೃಷ್ಣ, ಮುನಿರಾಜು, ರೋಸಲಿನ್‌ ಸತ್ಯ ಹಾಗೂ ಪ್ರಭಾವತಿ ಅವರು ಜನರು ಅಹವಾಲು ಆಲಿಸಿದರು. ಬಿಡುವಿಲ್ಲದೆ ಕರೆ ಸ್ವೀಕರಿಸಿ ಸಮಸ್ಯೆಗೆ ಪರಿಹಾರ ಸೂಚಿಸಿದರು. ಜನರ ಪ್ರಶ್ನೆಗಳಿಗೆ ಪಾಲಿ ಅವರು ನೀಡಿದ ಉತ್ತರ ಕೆಳಗಿನಂತಿದೆ.

* ಶಾಂತಮ್ಮ, ಮಾಸ್ತೇನಹಳ್ಳಿ ಅಂಗನವಾಡಿ ಸಹಾಯಕಿ: ದಳಸನೂರು ಅಂಗನವಾಡಿಯ ಸಹಾಯಕಿ ಹುದ್ದೆಗೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದೇನೆ. ಆದರೆ, ವರ್ಗಾವಣೆ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.
–ವಾಸ ಸ್ಥಳದಿಂದ 3 ಕಿ.ಮೀ ವ್ಯಾಪ್ತಿಯ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆ ಮಾಡಲು ಅವಕಾಶವಿದೆ. ವಾಸ ಸ್ಥಳದ ಬಗ್ಗೆ ಹಾಗೂ ಅಂಗನವಾಡಿ ಕೇಂದ್ರಕ್ಕೂ ಇರುವ ದೂರದ ಸಂಬಂಧ ಅರ್ಜಿಯೊಂದಿಗೆ ದಾಖಲೆಪತ್ರ ಸಲ್ಲಿಸಿದರೆ ಪರಿಶೀಲಿಸಿ. ದಳಸನೂರು ಅಂಗನವಾಡಿಯಲ್ಲಿನ ಸಹಾಯಕಿ ಹುದ್ದೆ ಖಾಲಿಯಾದ ಕೊಡಲೇ ಆದ್ಯತೆ ಮೇರೆಗೆ ಖಂಡಿತ ವರ್ಗಾವಣೆ ಮಾಡುತ್ತೇವೆ.

* ಪುಷ್ಪಲತಾ, ಕೆಜಿಎಫ್: ಮಾತೃ ವಂದನಾ ಯೋಜನೆ ಸವಲತ್ತು ಪಡೆಯುವುದು ಹೇಗೆ?
–ಮಾತೃ ವಂದನಾ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಫಲಾನುಭವಿಗಳನ್ನು ಗುರುತಿಸುತ್ತಾರೆ. ಗರ್ಭಿಣಿಯರಿಗೆ ಮೊದಲ ಹೆರಿಗೆಗೆ ಈ ಯೋಜನೆಯಡಿ ಎರಡು ಹಂತದಲ್ಲಿ ಒಟ್ಟಾರೆ ₹5 ಸಾವಿರ ಸಹಾಯಧನ ನೀಡಲಾಗುತ್ತದೆ. ಫಲಾನುಭವಿಗಳು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರಿಗೆ ಹೆರಿಗೆಗೂ ಮುನ್ನ ಮತ್ತು ಹೆರಿಗೆ ನಂತರ 2 ಬಾರಿ ಅರ್ಜಿ ಕೊಟ್ಟು ಹೆಸರು ನೋಂದಾಯಿಸಬೇಕು. ಅರ್ಜಿಯ ಜತೆ ಕಡ್ಡಾಯವಾಗಿ ತಾಯಿ ಕಾರ್ಡ್‌ ಸಲ್ಲಿಸಬೇಕು.

* ಲಕ್ಷ್ಮಿ, ಮಾಲೂರು: ಬಡ್ತಿಗಾಗಿ ಸಿಡಿಪಿಒ ಕಚೇರಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದೇನೆ. ಆದರೆ, ಅಧಿಕಾರಿಗಳು ಬಡ್ತಿ ನೀಡಲು ವಿಳಂಬ ಮಾಡುತ್ತಿದ್ದಾರೆ.
–ಅಂಗನವಾಡಿ ಸಹಾಯಕರಿಗೆ ಬಡ್ತಿ ನೀಡಲು ಜಿಲ್ಲಾಧಿಕಾರಿ ಅವರಿಂದ ಅನುಮೋದನೆ ಪಡೆಯಬೇಕು. ಶಿಶು ಅಭಿವೃದ್ಧಿ ಅಧಿಕಾರಿ ಕಚೇರಿಗೆ ಸಲ್ಲಿಸಿರುವ ಅರ್ಜಿ ಪ್ರತಿಯನ್ನು ಕಳುಹಿಸಿಕೊಟ್ಟರೆ ಪರಿಶೀಲಿಸುತ್ತೇವೆ. ಬಡ್ತಿ ನೀಡಿಕೆಗೆ ಕಾಲಮಿತಿಯಿಲ್ಲ.

* ಚೈತ್ರಾ, ಬಂಗಾರಪೇಟೆ: ಹೆರಿಗೆಯಾಗಿ ನಾಲ್ಕು ವರ್ಷವಾಗಿದೆ. ಮಾತೃ ವಂದನಾ ಯೋಜನೆಗೆ ಹೆಸರು ನೋಂದಾಯಿಸಿ ಸಹಾಯಧನ ಪಡೆಯಲು ಅವಕಾಶವಿದೆಯಾ?
–ಹೆರಿಗೆ ನಂತರ 2 ವರ್ಷದೊಳಗೆ ಮಾತೃ ವಂದನಾ ಯೋಜನೆಗೆ ಹೆಸರು ನೋಂದಾಯಿಸಿ ಸಹಾಯಧನ ಪಡೆಯಬಹುದು. 2 ವರ್ಷ ಮೀರಿರುವುದರಿಂದ ಸಹಾಯಧನ ಸಿಗುವುದಿಲ್ಲ. ಆದರೆ, ಅಂಗನವಾಡಿಗಳಲ್ಲಿ ಸಿಗುವ ಪೌಷ್ಟಿಕ ಆಹಾರ, ಚುಚ್ಚುಮದ್ದು ಸೇವೆ ಪಡೆಯಬಹುದು.

* ರೂಪಾ, ಬಂಗಾರಪೇಟೆ: ಮಗು ಆಗಿ 2 ವರ್ಷವಾಗಿದ್ದು, ಮಾತೃ ವಂದನಾ ಯೋಜನೆ ಸಹಾಯಧನಕ್ಕೆ ಸ್ಥಳೀಯ ಅಂಗನವಾಡಿಯಲ್ಲಿ ಹೆಸರು ನೋಂದಾಯಿಸಿದ್ದೇವೆ. ಆದರೆ, ಸಹಾಯಧನ ಬಂದಿಲ್ಲ.
–ಬ್ಯಾಂಕ್‌ ಖಾತೆ ಜತೆ ಆಧಾರ್‌ ಸಂಖ್ಯೆ ಜೋಡಣೆಯಾಗದಿದ್ದರೆ ಅಥವಾ ಬ್ಯಾಂಕ್‌ ಖಾತೆ ಚಾಲ್ತಿಯಲ್ಲಿ ಇಲ್ಲದಿದ್ದರೆ ಈ ರೀತಿ ಸಮಸ್ಯೆಯಾಗುತ್ತದೆ. ಅರ್ಜಿಯ ವಿವರ ಸಲ್ಲಿಸಿ, ಪರಿಶೀಲನೆ ಮಾಡಿ ಸಮಸ್ಯೆ ಪರಿಹರಿಸುತ್ತೇವೆ.

* ಮೆಹಬೂಬ್ ಪಾಷಾ, ಮಾಲೂರು: ಮಾಲೂರಿನ 12ನೇ ವಾರ್ಡ್‌ ವ್ಯಾಪ್ತಿಯ ಹನುಮಂತ ನಗರದಲ್ಲಿನ ಅಂಗನವಾಡಿಯು ಮುಖ್ಯರಸ್ತೆ ಪಕ್ಕದಲ್ಲಿದೆ. ಈ ಭಾಗದಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಅಂಗನವಾಡಿ ಸುತ್ತ ಕಾಂಪೌಂಡ್‌ ನಿರ್ಮಿಸಬೇಕು.
–ಹನುಮಂತನಗರದ ಅಂಗನವಾಡಿಯಲ್ಲಿ ಸುಮಾರು 50 ಮಕ್ಕಳಿದ್ದು, ಅವರ ಸುರಕ್ಷತೆ ಬಹಳ ಮುಖ್ಯ. ಸ್ಥಳೀಯ ಸಂಸ್ಥೆಯ ಗಮನಕ್ಕೆ ತಂದು ಅಂಗನವಾಡಿಗೆ ಸದ್ಯದಲ್ಲೇ ಕಾಂಪೌಂಡ್‌ ನಿರ್ಮಿಸುತ್ತೇವೆ. ಜತೆಗೆ ಕುಡಿಯುವ ನೀರಿನ ಸೌಕರ್ಯ ಕಲ್ಪಿಸುತ್ತೇವೆ.

* ಅಸ್ಮ ತಾಜ್, ಮುಳಬಾಗಿಲು ಮೆಹಬೂಬ್ ನಗರದ ಅಂಗನವಾಡಿ ಸಹಾಯಕಿ: ಆಂಧ್ರಪ್ರದೇಶದಿಂದ ಮದುವೆ ಮಾಡಿಕೊಂಡು ಬರುವವರಿಗೆ ಮಾತೃಶ್ರೀ ಯೋಜನೆ ಸೌಕರ್ಯ ಕಲ್ಪಿಸಲು ಆಗುವುದಿಲ್ಲ. ಅವರ ಬಿಪಿಎಲ್ ಪಡಿತರ ಚೀಟಿ ಸಹ ಇಲ್ಲ. ಇಂತಹ ಪ್ರಕರಣಗಳಲ್ಲಿ ಏನು ಮಾಡಬೇಕು?
–ಬಿಪಿಎಲ್‌ ಪಡಿತರ ಚೀಟಿ ಇಲ್ಲದವರಿಗೆ ಮಾತೃಶ್ರೀ ಯೋಜನೆ ಸೌಕರ್ಯ ದೊರೆಯುವುದಿಲ್ಲ. ಆದ್ಯತೆ ಮೇರೆಗೆ ಮಾತೃ ವಂದನಾ ಕಾರ್ಯಕ್ರಮದ ಸೌಕರ್ಯ ಕಲ್ಪಿಸಬಹುದು. ಇದಕ್ಕೆ ಸೂಕ್ತ ದಾಖಲೆಪತ್ರ ಸಲ್ಲಿಸಬೇಕು.

* ಈಶ್ವರಮ್ಮ, ಯಲ್ದೂರು: ಮಕ್ಕಳಿಗೆ ಮೊಟ್ಟೆ ಹಾಗೂ ತರಕಾರಿ ಖರೀದಿಸಲು ಹಲವು ತಿಂಗಳಿಂದ ಅನುದಾನ ಬಂದಿಲ್ಲ. ಹೀಗಾಗಿ ಮೊಟ್ಟೆ ಕೊಡುತ್ತಿಲ್ಲ. ಅಂಗನವಾಡಿ ಕಟ್ಟಡದಲ್ಲಿ ಮೂಲಸೌಕರ್ಯವಿಲ್ಲ.
–ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಲಾಗಿದೆ. ಆದರೆ, ಕೆಲವರ ಬ್ಯಾಂಕ್‌ ಖಾತೆ ಚಾಲ್ತಿಯಲ್ಲಿ ಇಲ್ಲದ ಕಾರಣ ಹಣ ತಲುಪಿಲ್ಲ. ಬ್ಯಾಂಕ್‌ನಲ್ಲಿನ ತಾಂತ್ರಿಕ ದೋಷದಿಂದ ಖಾತೆಗೆ ಹಣ ಜಮಾ ಆಗಿಲ್ಲ. ಯಲ್ದೂರು ಬ್ಯಾಂಕ್ ಸಿಬ್ಬಂದಿಗೆ ಈ ಸಂಗತಿ ತಿಳಿಸಿದ್ದು, ಸಮಸ್ಯೆ ಸದ್ಯದಲ್ಲೇ ಸರಿ ಹೋಗುತ್ತದೆ.

* ಜನಾರ್ದನ್‌, ತಿರುಮಲಹಳ್ಳಿ: ಗ್ರಾಮದ ಅಂಗನವಾಡಿ ಕಾರ್ಯಕರ್ತೆ ನಿವೃತ್ತಿಯಾಗಿದ್ದು, ಪಕ್ಕದ ಗ್ರಾಮದ ಅಂಗನವಾಡಿ ಸಹಾಯಕಿಯನ್ನು ಬಡ್ತಿ ಮೇರೆಗೆ ವರ್ಗಾವಣೆ ಮಾಡಲಾಗಿದೆ. ಇದಕ್ಕೆ ತಡೆ ನೀಡಿ ಹುದ್ದೆಗೆ ಗ್ರಾಮದ ನಿವಾಸಿಗಳನ್ನೇ ನೇಮಕ ಮಾಡಬೇಕು.
–ತಿರುಮಲಹಳ್ಳಿ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಭರ್ತಿಗೆ ಸಾಕಷ್ಟು ಮನವಿ ಬಂದಿವೆ. ಇಲಾಖೆ ಅಧಿಕಾರಿಗಳು ಸರ್ಕಾರದ ಆದೇಶ ಪಾಲನೆ ಮಾಡಬೇಕು. ಪಕ್ಕದ ಗ್ರಾಮದ ಸಹಾಯಕಿ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅವರು ಅರ್ಹರಲ್ಲದಿದ್ದರೆ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು.

* ಸುಹೇಲ್ ಖಾನ್, ಮಾಲೂರು: ಪಟ್ಟಣದಲ್ಲಿ ಸಾಕಷ್ಟು ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಮೂಲಸೌಕರ್ಯ ಕೊರತೆಯಿದೆ. ಜತೆಗೆ ಕಟ್ಟಡ ಮಾಲೀಕರಿಗೆ ಸಕಾಲಕ್ಕೆ ಬಾಡಿಗೆ ಪಾವತಿ ಆಗುತ್ತಿಲ್ಲ.
–ಅನುದಾನ ಕೊರತೆಯಿಂದಾಗಿ ಕೆಲವು ಬಾರಿ ಬಾಡಿಗೆ ಪಾವತಿ ವಿಳಂಬವಾಗುತ್ತದೆ. ನಗರ ಪ್ರದೇಶದಲ್ಲಿ ಅಂಗನವಾಡಿಗೆ ತಿಂಗಳಿಗೆ ₹4 ಸಾವಿರ ಮತ್ತು ಗ್ರಾಮೀಣ ಭಾಗದಲ್ಲಿ ₹1 ಸಾವಿರ ಬಾಡಿಗೆ ನಿಗದಿಪಡಿಸಲಾಗಿದೆ. ಬಾಕಿ ಬಾಡಿಗೆ ಪಾವತಿಗೆ ಕ್ರಮ ಕೈಗೊಳ್ಳುತ್ತೇವೆ.

* ಶಾರದಾ ಬಾಯಿ, ಮಾಲೂರು: ಬಡಾವಣೆಯ ಅಂಗನವಾಡಿಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಮಕ್ಕಳಿಗೆ ಆಟವಾಡಲು ಮೈದಾನವಿಲ್ಲ.
–ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ. ಅಂಗನವಾಡಿ ಮೈದಾನಕ್ಕಾಗಿ ಜಾಗ ಖರೀದಿಸಲು ಇಲಾಖೆಗೆ ಅವಕಾಶವಿಲ್ಲ. ಸ್ಥಳೀಯರೇ ಮೈದಾನಕ್ಕೆ ಜಾಗ ಒದಗಿಸಬೇಕು.

* ನಾಗೇಂದ್ರಕುಮಾರ್, ಕೋಲಾರ: ಅಂಗನವಾಡಿ ಕೇಂದ್ರಗಳಿಗೆ ಇತ್ತೀಚೆಗೆ ಕಳಪೆ ಆಹಾರ ಪದಾರ್ಥ ಪೂರೈಕೆಯಾಗುತ್ತಿವೆ. ಜಿಲ್ಲೆಯಲ್ಲಿ ಬಾಲ್ಯವಿವಾಹ ಹೆಚ್ಚಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು.
–ಬಾಲ್ಯವಿವಾಹ ನಿಯಂತ್ರಣಕ್ಕೆ ಇಲಾಖೆಯಲ್ಲಿ ಪ್ರತ್ಯೇಕ ಸಮಿತಿ ರಚನೆಯಾಗಿವೆ. ಜತೆಗೆ ಗೋಡೆ ಬರಹ, ಭಿತ್ತಿಪತ್ರ, ಕರಪತ್ರದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಬಾಲ್ಯವಿವಾಹದ ಬಗ್ಗೆ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಬೇಕು.

* ಎ.ನಳಿನಿಗೌಡ, ಹೊಸಮಟ್ನಹಳ್ಳಿ: ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ.
–ಕಟ್ಟಡ ಕಾಮಗಾರಿ ಯಾವ ಕಾರಣಕ್ಕೆ ಸ್ಥಗಿತಗೊಂಡಿದೆ ಎಂಬುದನ್ನು ಪರಿಶೀಲಿಸುತ್ತೇನೆ. ಶೀಘ್ರವೇ ಅನುದಾನ ಮಂಜೂರು ಮಾಡಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸಯತ್ತೇವೆ. ಸಾರ್ವಜನಿಕರಿಗೆ ಇಲಾಖೆ ಯೋಜನೆಗಳ ಪ್ರಯೋಜನ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.

* ರೆಡ್ಡಮ್ಮ, ಮುಳಬಾಗಿಲು: ಅಂಗನವಾಡಿ ಸಹಾಯಕಿ ಹುದ್ದೆಗೆ ನೇಮಕಗೊಂಡು ಹಲವು ತಿಂಗಳಾಗಿದೆ. ನೇಮಕಾತಿ ಆದೇಶಪತ್ರ ಸಹ ಪಡೆದುಕೊಂಡಿದ್ದೇನೆ. ಆದರೆ, ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಕಾರ್ಯ ನಿರ್ವಹಣೆಗೆ ಅವಕಾಶ ನೀಡುತ್ತಿಲ್ಲ.
–ಈ ಬಗ್ಗೆ ಸಮಗ್ರ ಪರಿಶೀಲನೆ ಮಾಡುತ್ತೇನೆ. ನೇಮಕಾತಿ ಆದೇಶಪತ್ರದ ಪ್ರತಿಯೊಂದಿಗೆ ಕಚೇರಿಗೆ ಬಂದು ದೂರು ಕೊಡಿ. ರಾಜಕೀಯ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ.

* ರೋಹಿನಾ, ಮುಳಬಾಗಿಲು: ಮದುವೆಯಾಗಿ 40 ವರ್ಷವಾದರೂ ಮಕ್ಕಳು ಆಗಿಲ್ಲ. ಮಕ್ಕಳನ್ನು ದತ್ತು ಪಡೆಯುದು ಹೇಗೆ?
–ಮಕ್ಕಳನ್ನು ದತ್ತು ಪಡೆಯಲು ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರಕ್ಕೆ (ಸಿಎಆರ್‌ಎ) ಅರ್ಜಿ ಕೊಟ್ಟು ಹೆಸರು ನೋಂದಾಯಿಸಬೇಕು. ದಂಪತಿಯ ವಯಸ್ಸು ಆಧರಿಸಿ ಮಕ್ಕಳನ್ನು ದತ್ತು ನೀಡಲಾಗುತ್ತದೆ. ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ದತ್ತು ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯಿದೆ. ಮಕ್ಕಳ ಕಲ್ಯಾಣಾಧಿಕಾರಿಯನ್ನು ಸಂಪರ್ಕಿಸಿದರೆ ಮಾಹಿತಿ ಕೊಡುತ್ತಾರೆ.

* ನರೇಂದ್ರಗೌಡ, ಬಂಗಾರಪೇಟೆ: ಮಗಳಿಗೆ 9 ವರ್ಷ ವಯಸ್ಸು. ಭಾಗ್ಯಲಕ್ಷ್ಮೀ ಯೋಜನೆ ಸವಲತ್ತಿಗೆ ಅರ್ಜಿ ಸಲ್ಲಿಸಬಹುದೆ?
–ಮಗುವಿನ ವಯಸ್ಸು 1 ವರ್ಷ ದಾಟುವುದಕ್ಕಿಂತ ಮುನ್ನ ಭಾಗ್ಯಲಕ್ಷ್ಮಿ ಯೋಜನೆಗೆ ಹೆಸರು ನೋಂದಾಯಿಸಬೇಕು. ವಯಸ್ಸಿನ ಮಿತಿ ಹೆಚ್ಚಿರುವುದರಿಂದ ಯೋಜನೆ ಸೇವೆ ನೀಡಲು ಅವಕಾಶವಿಲ್ಲ.

–ನಿರ್ವಹಣೆ: ಜೆ.ಆರ್.ಗಿರೀಶ್‌ ಮತ್ತು ಕೆ.ಎಸ್‌.ಸುದರ್ಶನ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)