ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಚೆನ್ನಾಗಿದೆ

ಬಿಜೆಪಿ ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಯೋಗೇಶ್ವರ್ ಹೇಳಿಕೆ
Last Updated 26 ಜನವರಿ 2021, 12:58 IST
ಅಕ್ಷರ ಗಾತ್ರ

ಕೋಲಾರ: ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಅನುಷ್ಠಾನ, ಪಕ್ಷ ಸಂಘಟನೆ ಒಟ್ಟಿಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಕಾರ್ಯಕರ್ತರ ಬೆನ್ನಿಗೆ ನಿಂತು ಕೆಲಸ ಮಾಡುತ್ತೇನೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ವೈಯಕ್ತಿಕವಾಗಿ ಕೋಲಾರ ಜಿಲ್ಲೆ ಎಂದರೆ ನನಗೆ ತುಂಬಾ ಅಭಿಮಾನ. ಕೃಷಿ ಕುಟುಂಬದಿಂದ ಬಂದ ನಾನು ಚಿಕ್ಕಂದಿನಲ್ಲಿ ತಾಯಿಯ ಜತೆ ಇಲ್ಲಿನ ರೈತರ ಕೃಷಿ ನೋಡಲು ಬರುತ್ತಿದ್ದೆ’ ಎಂದು ಬಾಲ್ಯದ ನೆನಪು ಮೆಲುಕು ಹಾಕಿದರು.

‘ಚನ್ನಪಟ್ಟಣ ಹಾಗೂ ಕೋಲಾರದ ಸ್ಥಿತಿ ಭಿನ್ನವಿಲ್ಲ. ಕೋಲಾರ ಜಿಲ್ಲೆಗೆ ನೀರಿನ ಸೌಕರ್ಯ ಕಲ್ಪಿಸಿದರೆ ಇಲ್ಲಿನ ರೈತರು ಇಡೀ ರಾಜ್ಯಕ್ಕೆ ತರಕಾರಿ ಬೆಳೆದುಕೊಡಬಲ್ಲರು. ಆರ್ಥಿಕವಾಗಿ ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ಇಲ್ಲಿನ ರೈತರು ಕಷ್ಟಪಟ್ಟು ದುಡಿಯುತ್ತಿದ್ದಾರೆ. ಚನ್ನಪಟ್ಟಣ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಿದಂತಹ ಕೆಲಸವನ್ನು ಈ ಜಿಲ್ಲೆಯಲ್ಲೂ ಮಾಡಬೇಕಿದೆ’ ಎಂದು ತಿಳಿಸಿದರು.

‘ಎತ್ತಿನಹೊಳೆ ಯೋಜನೆಯಡಿ ಬಯಲುಸೀಮೆ ಜಿಲ್ಲೆಗಳಿಗೆ ನೀರು ಒದಗಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿಗೆ ಇನ್ನಷ್ಟು ವೇಗ ಸಿಗಬೇಕಿದೆ. ಎತ್ತಿನಹೊಳೆ ಯೋಜನೆಗೆ ಕೃಷಿ ಭೂಮಿ ಸ್ವಾಧೀನಪಡಿಸಿಕೊಂಡಾಗ ರೈತರಿಂದ 4 ಪಟ್ಟು ಭೂಪರಿಹಾರ ಕೊಡಬೇಕಿರುವುದು ಸರ್ಕಾರಕ್ಕೆ ಆರ್ಥಿಕ ಸವಾಲು. ಆದರೂ ಅಗತ್ಯ ಅನುದಾನ ಒದಗಿಸಿಕೊಂಡು ತ್ವರಿತವಾಗಿ ಯೋಜನೆ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಕಾರ್ಯಕರ್ತರು ಪ್ರಾಮಾಣಿಕವಾಗಿ ಜನರಿಗೆ ತಲುಪಿಸಬೇಕು. ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಚೆನ್ನಾಗಿದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಗೆಹರಿಸಿ ಒಗ್ಗೂಡಿಸುವ ಕೆಲಸ ಆಗುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 6 ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಯಬೇಕು. ನಾನು ಸಹ ಕಾರ್ಯಕರ್ತರಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದು ಹೇಳಿದರು.

ಹಸಿರು ವಾತಾವರಣ: ‘ಜಿಲ್ಲೆಯಲ್ಲಿ ಅತಿ ಹೆಚ್ಚು ಕೆರೆಗಳಿವೆ. ಯೋಗೇಶ್ವರ್ ಅವರು ಚನ್ನಪಟ್ಟಣದ ಭಗೀರಥ ಎಂಬ ಖ್ಯಾತಿ ಪಡೆದಿದ್ದಾರೆ. ಅದೇ ರೀತಿ ಜಿಲ್ಲೆಯ ಉಸ್ತುವಾರಿ ತೆಗೆದುಕೊಂಡು ಇಲ್ಲಿಯೂ ಹಸಿರುಮಯ ವಾತಾವರಣ ಸೃಷ್ಟಿಸಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ವೇಣುಗೋಪಾಲ್‌ ಮನವಿ ಮಾಡಿದರು.

‘ಕೆ.ಸಿ ವ್ಯಾಲಿ ಯೋಜನೆಯಡಿ ಕೆರೆಗಳನ್ನು ತುಂಬಿಸುವ ಕೆಲಸ ನಡೆಯುತ್ತಿದೆ. ನೀರಿನ 3ನೇ ಹಂತದ ಶುದ್ಧೀಕರಣಕ್ಕೆ ಒತ್ತು ನೀಡಬೇಕು. ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ನೀರು ಹರಿಸಬೇಕು’ ಎಂದು ಕೋರಿದರು.

ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಸಮನ್ವಯ ಸಮಿತಿ ಸದಸ್ಯ ವಿಜಯ್‌ಕುಮಾರ್, ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲಕ್ಷ್ಮಣಗೌಡ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT