ಶನಿವಾರ, ಮಾರ್ಚ್ 25, 2023
29 °C
ಮಾಜಿ ಸಭಾಪತಿ ಸುದರ್ಶನ್‌ ಹೇಳಿಕೆಗೆ ಸಂಸದ ಮುನಿಸ್ವಾಮಿ ತಿರುಗೇಟು

ಜನ ಕಾಂಗ್ರೆಸ್ ಮುಖಂಡರ ಮಾತು ನಂಬಲ್ಲ: ಸಂಸದ ಮುನಿಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾಗಿರುವ ಬಿಜೆಪಿ ಸಂಸದರು ಕೋವಿಡ್‌ ಸಂಕಷ್ಟದಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದನ್ನು ಕಾಂಗ್ರೆಸ್‌ ಮುಖಂಡರು ತಿಳಿದು ಮಾತನಾಡಬೇಕು. ಬಿಟ್ಟಿ ಪ್ರಚಾರಕ್ಕಾಗಿ ಮಾಧ್ಯಮದಲ್ಲಿ ಮನಬಂದಂತೆ ಹೇಳಿಕೆ ಕೊಟ್ಟರೆ ಜನ ನಂಬುವುದಿಲ್ಲ’ ಎಂದು ಸಂಸದ ಎಸ್.ಮುನಿಸ್ವಾಮಿ ಗುಡುಗಿದರು.

ಕೋವಿಡ್‌ ಹಾಗೂ ಲಾಕ್‌ಡೌನ್‌ ಕಾರಣಕ್ಕೆ ಬಂದ್‌ ಆಗಿದ್ದ ಕೋಲಾರಮ್ಮ ದೇವಸ್ಥಾನ ಸೋಮವಾರ ಬಾಗಿಲು ತೆರೆಯಲಿರುವ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿನ ಸಿದ್ಧತೆಗಳನ್ನು ಭಾನುವಾರ ಪರಿಶೀಲಿಸಿ ಮಾತನಾಡಿ, ‘ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್ ಅವರ ಕಣ್ಣು, ಕಿವಿ ಮಂದವಾಗಿವೆ. ಅವರು ಬಿಜೆಪಿ ಸಂಸದರು ಮಾಡಿರುವ ಕೆಲಸವನ್ನು ಕಣ್ತೆರೆದು ನೋಡಲಿ’ ಎಂದು ತಿರುಗೇಟು ನೀಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್‌ ಸಂದರ್ಭದಲ್ಲಿ ತೆಗೆದುಕೊಂಡ ದಿಟ್ಟ ನಿರ್ಧಾರಗಳಿಂದ ಮತ್ತು ಬಿಜೆಪಿ ಮುಖಂಡರ ಅವಿರತ ಶ್ರಮದಿಂದ ಕೋವಿಡ್‌ ಓಡಿಸಿ ಜನರನ್ನು ರಕ್ಷಿಸಲು ಸಾಧ್ಯವಾಯಿತು. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ದೇಶವನ್ನು ಅದೋಗತಿಗೆ ತರುತ್ತಿತ್ತು’ ಎಂದು ಕುಟುಕಿದರು.

‘ನನಗೆ ನಾಟಕವಾಡಲು ಬರಲ್ಲ. ಕೋವಿಡ್‌ಗೆ ಅಂಜಿ ಮನೆಯಲ್ಲಿ ಕೂತ ವ್ಯಕ್ತಿ ನಾನಲ್ಲ. ಕೋವಿಡ್‌ ಸಂಕಷ್ಟದ ಪರಿಸ್ಥಿತಿಯಲ್ಲಿ ಜಿಲ್ಲೆಯ ಜನರ ಒಳಿತಿಗಾಗಿ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್‌ ಮುಖಂಡರ ರೀತಿ ಪ್ರಾಣ ಭಯದಿಂದ ಹೊರಗೆ ಬಾರದೆ ಮನೆಯಲ್ಲಿ ಕುಳಿತುಕೊಂಡಿರಲಿಲ್ಲ’ ಎಂದು ವ್ಯಂಗ್ಯವಾಡಿದರು.

‘ಮಾಧ್ಯಮಕ್ಕೆ ಹೇಳಿಕೆ ಕೊಡುವ ಮೊದಲು ತಾವು ಏನು ಮಾಡಿದ್ದೇವೆ ಎಂಬ ಬಗ್ಗೆ ಕಾಂಗ್ರೆಸ್‌ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಲಿ. ಎಸ್‍ಎನ್‍ಆರ್ ಜಿಲ್ಲಾ ಆಸ್ಪತ್ರೆಯಲ್ಲಿನ ಕೊರೊನಾ ಸೋಂಕಿತರ ಆರೋಗ್ಯ ವಿಚಾರಿಸಲು ಮತ್ತು ವೈದ್ಯಕೀಯ ಸೇವೆ ಪರಿಶೀಲಿಸಲು ನಾಲ್ಕೈದು ಬಾರಿ ಕೋವಿಡ್‌ ವಾರ್ಡ್‌ಗೆ ಭೇಟಿ ಕೊಟ್ಟಿದ್ದೆ. ಸೋಂಕಿತರ ಸಮಸ್ಯೆಗೆ ಸ್ಪಂದಿಸಿ ಬೆಡ್‌, ವೈದ್ಯಕೀಯ ಆಮ್ಲಜನಕದ ವ್ಯವಸ್ಥೆ ಮಾಡಿಸಿದೆ’ ಎಂದರು.

ದಿನಸಿ ವಿತರಣೆ: ‘ಎಸ್‍ಎನ್‍ಆರ್ ಆಸ್ಪತ್ರೆಯಲ್ಲಿ ಹೊಸದಾಗಿ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕ ಆರಂಭ ಮಾಡಿಸಿದ್ದೇವೆ. ದಶಕಗಳಿಂದ ಬಂದ್‌ ಆಗಿದ್ದ ಕೆಜಿಎಫ್‌ನ ಬಿಜಿಎಂಎಲ್ ಆಸ್ಪತ್ರೆಯನ್ನು ಪುನರಾರಂಭ ಮಾಡಿಸಿದ್ದೇವೆ. ಕೊನೆಯ ಕ್ಷಣದಲ್ಲಿ ತುಮಕೂರು ಜಿಲ್ಲೆಗೆ ಮಂಜೂರಾಗಿದ್ದ ವೈದ್ಯಕೀಯ ಉತ್ಪಾದನಾ ಘಟಕವನ್ನು ಸರ್ಕಾರದ ಮೇಲೆ ಒತ್ತಡ ತಂದು ಕೆಜಿಎಫ್‌ಗೆ ತರಿಸಿದೆ’ ಎಂದು ವಿವರಿಸಿದರು.

‘ಕೋವಿಡ್‌ ಮತ್ತು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಬಡ ಜನರಿಗೆ ಆಹಾರ ಸಾಮಗ್ರಿಗಳ ಕಿಟ್‌ ನೀಡಿದ್ದೇವೆ. ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೂ ದಿನಸಿ ಕೊಟ್ಟಿದ್ದೇವೆ. ಈ ಕೆಲಸಗಳು ಸುದರ್ಶನ್‌ ಅವರ ಕಣ್ಣಿಗೆ ಕಾಣಿಸುವುದಿಲ್ಲವೇ?’ ಎಂದು ಪ್ರಶ್ನಿಸಿದರು.

ಕೆರೆ ಅಭಿವೃದ್ಧಿ: ‘₹ 8 ಕೋಟಿ ವೆಚ್ಚದಲ್ಲಿ ಜಿಲ್ಲಾ ಕೇಂದ್ರದ ಕೋಲಾರಮ್ಮ ಕೆರೆ ಅಭಿವೃದ್ಧಿಪಡಿಸುತ್ತೇವೆ. ಮಕ್ಕಳಿಗೆ ಆಟವಾಡಲು ಉದ್ಯಾನ ಮತ್ತು ನಡಿಗೆ ಪಥ ನಿರ್ಮಾಣ ಮಾಡುತ್ತೇವೆ. ಕೋಲಾರಮ್ಮ ಕೆರೆ ಅಂಗಳದಲ್ಲಿನ ಮುಳ್ಳು ಗಿಡಗಳನ್ನು ಈಗಾಗಲೇ ತೆರವುಗೊಳಿಸಿದ್ದು, ಕೆರೆಗೆ ಕೆ.ಸಿ ವ್ಯಾಲಿ ನೀರು ಹರಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಕೊರೊನಾ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಎಂದು ಜನರು ಮೈಮರೆಯಬಾರದು. ಸೋಮವಾರದಿಂದ ದೇವಸ್ಥಾನಗಳು ತೆರೆಯಲಿದ್ದು, ಭಕ್ತರು ಕೋವಿಡ್‌ ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು. ದೇವಸ್ಥಾನಗಳಲ್ಲಿ ಪ್ರಸಾದ ವಿನಿಯೋಗ ಮಾಡುವಂತಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು