ಶನಿವಾರ, ಫೆಬ್ರವರಿ 27, 2021
30 °C
ದೇವರಾಯಸಮುದ್ರ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ

ದೇವರಾಯಸಮುದ್ರ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ: ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಜಿಲ್ಲಾಡಳಿತವು ಮುಳಬಾಗಿಲು ತಾಲ್ಲೂಕಿನ ದೇವರಾಯಸಮುದ್ರ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಲಾಗಿದೆ’ ಎಂದು ಪರಿಸರ ಹಿತರಕ್ಷಣಾ ಸಮಿತಿ ಸದಸ್ಯ ತ್ಯಾಗರಾಜ್ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸುಮಾರು 1,296 ಎಕರೆಯಷ್ಟು ವಿಸ್ತಾರವಾಗಿರುವ ದೇವರಾಯಸಮುದ್ರ ಬೆಟ್ಟದ ಸುತ್ತಮುತ್ತ 20 ಹಳ್ಳಿಗಳಿವೆ. ಈ ಬೆಟ್ಟ ಆವಣಿ ಬೆಟ್ಟಕ್ಕೂ ಹೊಂದಿಕೊಂಡಿದೆ. ಜಿಂಕೆ, ಚಿರತೆ, ಕೃಷ್ಣಮೃಗ, ನವಿಲು ಸೇರಿದಂತೆ ವಿವಿಧ ಬಗೆಯ ವನ್ಯಜೀವಿಗಳು ಬೆಟ್ಟದಲ್ಲಿವೆ’ ಎಂದು ಹೇಳಿದರು.

‘ಬೆಟ್ಟದ ಮೇಲೆ ಬೀಳುವ ಮಳೆ ನೀರಿನಿಂದ 20ಕ್ಕೂ ಹೆಚ್ಚು ಕೆರೆ ತುಂಬಿ ಹರಿಯುತ್ತವೆ. ಜತೆಗೆ ಬೆಟ್ಟವು ಕೋಲಾರ ತಾಲ್ಲೂಕಿನ ಹೊಳಲಿ ಕೆರೆವರೆಗಿನ 80 ಕೆರೆಗಳಿಗೆ ನೀರಿನ ಮೂಲವಾಗಿದೆ. ಬೆಟ್ಟದಿಂದ ಸಮೀಪವೇ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿದೆ. ಸೂಕ್ಷ್ಮ ಪ್ರದೇಶವಾದ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿರುವ ಜಿಲ್ಲಾಡಳಿತದ ಕ್ರಮ ಪ್ರಶ್ನಿಸಿ ಚೆನ್ನೈನ ಹಸಿರು ನ್ಯಾಯಪೀಠದ ಮೊರೆ ಹೋಗಿದ್ದೇವೆ’ ಎಂದರು.

‘ಪ್ರಪಂಚದಲ್ಲೇ ಅಪರೂಪವಾದ ಎಲೆಮೂತಿ ಬಾವಲಿಗಳ ಸಂತತಿ ಹೊಂದಿರುವ ಹನುಮನಹಳ್ಳಿ ಸಂರಕ್ಷಿತ ಪ್ರದೇಶವು ದೇವರಾಯಸಮುದ್ರಕ್ಕೆ 1.70 ಕಿ.ಮೀ ದೂರದಲ್ಲಿದೆ. ಎಲೆಮೂತಿ ಬಾವಲಿಗಳ ಸಂಚಾರ 15 ಕಿ.ಮೀ ವ್ಯಾಪ್ತಿಯಲ್ಲಿ ಇರುವುದರಿಂದ ಸುತ್ತಮುತ್ತ ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಗ್ರಾಮ ಸಭೆಯಲ್ಲಿ ನಿರ್ಧರಿಸಲಾಗುತ್ತು. ಇದೀಗ ಆ ವ್ಯಾಪ್ತಿಯ ಮಿತಿ ಕಡಿಮೆಗೊಳಿಸಿದ್ದಾರೆ’ ಎಂದು ದೂರಿದರು.

ಜೀವ ವೈವಿಧ್ಯತೆಗೆ ಧಕ್ಕೆ: ‘ದೇವರಾಯಸಮುದ್ರ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡುವುದಕ್ಕೆ ಸ್ಥಳೀಯ ಗ್ರಾ.ಪಂ ಸದಸ್ಯರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿದ ಸರ್ಕಾರ ಬೆಟ್ಟವನ್ನು ಕಲ್ಲು ಗಣಿಗಾರಿಕೆಗೆ ಸುರಕ್ಷಿತ ಪ್ರದೇಶವೆಂದು ಗುರುತಿಸಿ ಆ ಭಾಗದಲ್ಲಿ ಕಲ್ಲು ಗಣಿಗಾರಿಕೆ ಮತ್ತು ಎಂ.ಸ್ಯಾಂಡ್ ಘಟಕ ನಡೆಸಲು ಅನುಮತಿ ನೀಡಿದೆ. ಇದರಿಂದ ಜೀವ ವೈವಿಧ್ಯತೆಗೆ ಧಕ್ಕೆಯಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ದೇವರಾಯಸಮುದ್ರ ಸಮೀಪ ಸ್ವಯಂ ಸೇವಾ ಸಂಸ್ಥೆಯೊಂದು 200 ಎಕರೆ ಪ್ರದೇಶದಲ್ಲಿ ವನ್ಯಜೀವಿ ಧಾಮ ಸ್ಥಾಪಿಸಲು ಮುಂದಾಗಿದೆ. ಕಲ್ಲು ಗಣಿಗಾರಿಕೆಯಿಂದ ಈ ಉದ್ದೇಶಕ್ಕೂ ತೊಂದರೆಯಾಗಲಿದೆ. ಗಣಿಗಾರಿಕೆಗೆ ಅನುಮತಿ ನೀಡಿರುವ ಸರ್ಕಾರದ ವಿರುದ್ಧ ಸಮಿತಿಯು ನ್ಯಾಯಾಲಯದಲ್ಲಿ ಕಾನೂನಾತ್ಮಕ ಹೋರಾಟ ಮುಂದುವರಿಸಲಿದೆ’ ಎಂದು ವಿವರಿಸಿದರು.

ನೋಟಿಸ್‌ ಜಾರಿ: ‘ಸಮಿತಿಯ ಪಿಐಎಲ್‌ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ಹೈಕೋರ್ಟ್ ಅರಣ್ಯ, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ನೋಟಿಸ್ ಜಾರಿ ಮಾಡಿದೆ. ಜತೆಗೆ 2 ವಾರದೊಳಗೆ ವಿವರಣೆ ಕೊಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ’ ಎಂದು ಹೇಳಿದರು.

‘ದೇವರಾಯಸಮುದ್ರ ಬೆಟ್ಟದಲ್ಲಿ ಚಿಟ್ಟೆ ವನ, ರೋಪ್‌ವೇ, ರಾಕ್‌ ಕ್ಲೈಂಬಿಂಗ್ ಸೇರಿದಂತೆ ಸಾಹಸಮಯ ಚಟುವಟಿಕೆ ನಡೆಸಲು ಅವಕಾಶವಿದೆ. ಸರ್ಕಾರ, ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಸಮಿತಿ ಸದಸ್ಯರಾದ ಎಂ.ಜಿ.ಪಾಪಮ್ಮ, ಗುಣಶೇಖರ್, ಎಂ.ವಿ.ವೆಂಕಟೇಶ್ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು