ಗುರುವಾರ , ಆಗಸ್ಟ್ 5, 2021
23 °C

ಪೊಲೀಸರ ಕಿರುಕುಳ ಆರೋಪ: ಠಾಣೆ ಮುಂಭಾಗ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ಬೆಮಲ್ ನಗರ ಪೊಲೀಸರು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ ಸ್ವಯಂಸೇವಾ ಸಂಘಟನೆ ಹೊಂದಿರುವ ಎಲ್‌. ಬಾಬು ಮತ್ತು ಅವರ ಕುಟುಂಬದವರು ಬುಧವಾರ ರಾತ್ರಿ ಬೆಮಲ್‌ ನಗರ ಠಾಣೆ ಮುಂಭಾಗ ಧರಣಿ ನಡೆಸಿದರು.

ಆರ್‌ಟಿಒ ಕಚೇರಿ ಸಿಬ್ಬಂದಿ ವಿರುದ್ಧ ಸಾರಿಗೆ ಇಲಾಖೆಗೆ ದೂರು ನೀಡಲಾಗಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಸಿಬ್ಬಂದಿ ಜೊತೆ ಬೆಮಲ್ ಪೊಲೀಸರು ಶಾಮೀಲಾಗಿ ವಿನಾಕಾರಣ ಪ್ರಕರಣ ದಾಖಲು ಮಾಡುತ್ತಿದ್ದಾರೆ. ಬೆದರಿಕೆ ಹಾಕುತ್ತಿದ್ದಾರೆ. ನಾನು ಇಲ್ಲಿಯೇ ಸಾಯುತ್ತೇನೆ ಎಂದು ಬಾಬು ಠಾಣೆ ಮುಂಭಾಗದಲ್ಲಿ ಕುಳಿತು ಫೇಸ್‌ಬುಕ್‌ ಲೈವ್‌ನಲ್ಲಿ ಹೇಳಿದ್ದಾರೆ.

‘ಸಬ್‌ ಇನ್‌ಸ್ಪೆಕ್ಟರ್ ವಿಜಯ ಕುಮಾರ್ ತೊಂದರೆ ಕೊಡುತ್ತಿದ್ದಾರೆ. ಎಸ್‌.ಪಿ ಮತ್ತು ಡಿವೈಎಸ್‌ಪಿ ಸ್ಥಳಕ್ಕೆ ಆಗಮಿಸಬೇಕು. ಅಲ್ಲಿಯವರೆವಿಗೂ ಇಲ್ಲಿಯೇ ಕುಳಿತುಕೊಳ್ಳುತ್ತೇನೆ’ ಎಂದು ಬೆದರಿಕೆ ಹಾಕಿದರು.

ಆತನ ಜೊತೆ ಅವರ ಕುಟುಂಬದ ಏಳೆಂಟು ಮಹಿಳೆಯರು ಕೂಡ ಠಾಣೆ ಆವರಣದಲ್ಲಿ ಕುಳಿತರು. ಬಾಬು ಅವರ ಮಗಳು ಬ್ಲೇಡ್‌ ಇಟ್ಟುಕೊಂಡು ತಾನು ಕೊಯ್ದುಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದರು. ಮಹಿಳೆಯರ ಕೂಗಾಟದಿಂದ ವಿಚಲಿತರಾದ ರಾತ್ರಿ ಪಾಳಿಯದಲ್ಲಿದ್ದ ಪೊಲೀಸರು ಧರಣಿ ನಿಲ್ಲಿಸುವಂತೆ ಕೇಳಿದರು.

ಠಾಣೆಯೊಳಗೆ ಮೊಬೈಲ್ ಚಿತ್ರೀಕರಣ ಮಾಡದಂತೆ ತಿಳಿಸಿದರು. ಆಗ ಪೊಲೀಸರ ಮೇಲೆ ಹರಿಹಾಯ್ದ ಮಹಿಳೆಯರು ಅವರನ್ನು ಹಿಗ್ಗಾಮುಗ್ಗ ಹೀಯಾಳಿಸಿದರು. ಒಂದು ಹಂತದಲ್ಲಿ ಠಾಣೆಯಿಂದ ಹೊರಬಂದ ಪೊಲೀಸರು ಮೂಕಪ್ರೇಕ್ಷಕರಾಗಿ ವೀಕ್ಷಿಸುತ್ತಿದ್ದರು.

ನಂತರ ಸ್ಥಳಕ್ಕೆ ಆಗಮಿಸಿದ ಸಬ್‌ ಇನ್‌ಸ್ಪೆಕ್ಟರ್ ವಿಜಯಕುಮಾರ್‌ ಧರಣಿ ನಿರತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ರಾತ್ರಿ 11 ಗಂಟೆಯಿಂದ ಸುಮಾರು ಅರ್ಧ ಗಂಟೆಗಳ ಕಾಲ ಬಾಬು ಮತ್ತು ಕುಟುಂಬದವರು ಠಾಣೆಯಲ್ಲಿ ಕುಳಿತಿದ್ದರು. ಕೊನೆಗೆ ಅವರನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.