ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಜಿಲ್ಲಾಸ್ಪತ್ರೆ ಆವರಣದಲ್ಲಿ ಪೊಲೀಸ್ ಉಪ ಠಾಣೆ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ. ನಾರಾಯಣ ಚಾಲನೆ l ವೈದ್ಯಕೀಯ ವಿಚಾರ ಸಂಬಂಧದ ತನಿಖೆ
Last Updated 23 ಫೆಬ್ರುವರಿ 2023, 4:05 IST
ಅಕ್ಷರ ಗಾತ್ರ

ಕೋಲಾರ: ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆ ಆವರಣದಲ್ಲಿ ಹೊಸದಾಗಿ ನಿರ್ಮಿಸಿರುವ ನಗರ ಪೊಲೀಸ್‌ ಉಪಠಾಣೆಗೆ (ಹೊರಠಾಣೆ) ಬುಧವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ. ನಾರಾಯಣ ಚಾಲನೆ ನೀಡಿದರು.

‘24 ಗಂಟೆಯೂ ಠಾಣೆಯಲ್ಲಿ ಸೇವೆ ಲಭ್ಯವಿರುತ್ತದೆ. ವೈದ್ಯಕೀಯ, ಕಾನೂನು ಪ್ರಕರಣ (ಎಂಎಲ್‌ಸಿ) ಅಥವಾ ವೈದ್ಯಕೀಯ ವಿಚಾರಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣವನ್ನು ಈ ಠಾಣೆಯಲ್ಲಿರುವ ಸಿಬ್ಬಂದಿ ನಿಭಾಯಿಸಲಿದ್ದಾರೆ. ಹಲ್ಲೆ, ಸುಟ್ಟಗಾಯಗಳಿಂದ ಆಸ್ಪತ್ರೆಗೆ ಬರುವವರಿಗೆ ಮೊದಲು ಚಿಕಿತ್ಸೆ ನೀಡಿ ಬಳಿಕ ಪ್ರಕರಣ ದಾಖಲಿಸಿಕೊಳ್ಳಬೇಕಾಗುತ್ತದೆ. ಸಿ.ಸಿ.ಟಿ.ವಿ ಕ್ಯಾಮೆರಾ ವ್ಯವಸ್ಥೆ, ವೈರ್‌ಲೆಸ್‌ ವ್ಯವಸ್ಥೆ ಇಲ್ಲಿದೆ. ಇದು ನಗರ ಠಾಣೆಯ ಸುಪರ್ದಿಯಲ್ಲಿ ಕಾರ್ಯನಿರ್ವಹಿಸಲಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ಸರಿಯಾಗಿ ಚಿಕಿತ್ಸೆ ನೀಡಿಲ್ಲವೆಂದು ವೈದ್ಯರ ವಿರುದ್ಧವೇ ರೋಗಿಗಳು, ಸಂಬಂಧಿಕರು ಗಲಾಟೆ ನಡೆಸುವುದು ಕಂಡುಬರುತ್ತಿದೆ. ವೈದ್ಯರಿಗೆ ರಕ್ಷಣೆ ನೀಡಬೇಕೆಂಬ ಕಾನೂನು ಇದೆ. ಜೊತೆಗೆ ಬಡ ರೋಗಿಗಳು ಆಸ್ಪತ್ರೆಗೆ ಬಂದಾಗ ಸರತಿ ಸಾಲಿನಲ್ಲಿ ನಿಲ್ಲಿಸುವ ಕೆಲಸವೂ ಆಗಬೇಕಿದೆ. 465 ಹಾಸಿಗೆಗಳ ಆಸ್ಪತ್ರೆ ಇದಾಗಿದ್ದು, 1,500 ಹೊರರೋಗಿಗಳು ಬರುತ್ತಾರೆ. ಈ ಎಲ್ಲಾ ದೃಷ್ಟಿಕೋನದಿಂದ ಆಸ್ಪತ್ರೆ ಆವರಣದಲ್ಲಿ ಹೊರ ಠಾಣೆ ನಿರ್ಮಿಸಲಾಗಿದೆ. ಇದಕ್ಕೆ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ. ವಿಜಯಕುಮಾರ್‌ ಹಾಗೂ ಅವರ ತಂಡದವರು ಸಹಕಾರ ನೀಡಿದ್ದಾರೆ’ ಎಂದರು.

‘ಹಗಲು ಹೊತ್ತಿನಲ್ಲಿ ಒಬ್ಬ ಎಎಸ್‌ಐ, ಇಬ್ಬರು ಗೃಹರಕ್ಷ ದಳದವರು, ರಾತ್ರಿ ವೇಳೆ ಒಬ್ಬ ಎಎಸ್‌ಐ, ಇಬ್ಬರು ಗೃಹರಕ್ಷ ದಳದವರು ಸೇರಿ ಆರು ಸಿಬ್ಬಂದಿ ನಿತ್ಯ ಕರ್ತವ್ಯ ನಿಭಾಯಿಸಲಿದ್ದಾರೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಸಂತ್ರಸ್ತರನ್ನು ತ್ವರಿತಗತಿಯಲ್ಲಿ ಆಸ್ಪತ್ರೆಗೆ ಕರೆತರುವುದು, ಅವರ ರಕ್ತದ ಗುಂ‍ಪು ಹೇಳಿ ಚಿಕಿತ್ಸೆ ಸಿದ್ಧಪಡಿಸುವುದು ಸೇರಿದಂತೆ ವೈದ್ಯರೊಂದಿಗೆ ಸಂಪರ್ಕ ಕಲ್ಪಿಸಿ ನಮ್ಮ ಸಿಬ್ಬಂದಿ ಸಹಕಾರ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಎಲ್ಲಾ ಠಾಣೆಗಳಲ್ಲಿ ಇರುವ ಸಿಬ್ಬಂದಿಯಲ್ಲೇ ನಿರ್ವಹಣೆ ಮಾಡುತ್ತಿದ್ದೇವೆ. ಕೊರತೆ ಇರುವೆಡೆ ಗೃಹರಕ್ಷಕದ ದಳದವರನ್ನು ತೆಗೆದುಕೊಂಡು ನಿರ್ವಹಿಸುತ್ತಿದ್ದೇವೆ. ಪ್ರವಾಸಿಗಳಿಗೆ ರಕ್ಷಣೆ ನೀಡುವುದು, ಪೊಲೀಸ್‌ ನೈತಿಕಗಿರಿ ತಡೆಯಲು ಎಲ್ಲಾ ರೀತಿಯ ಕ್ರಮ ವಹಿಸಿದ್ದೇವೆ’ ಎಂದು ತಿಳಿಸಿದರು.

‘ಬಾರ್‌ಗಳನ್ನು ಯಾವ ಸಮಯದಲ್ಲಿ ತೆರೆಯಬೇಕೆಂದು ಪರವಾನಗಿಯಲ್ಲಿ ಷರತ್ತು ವಿಧಿಸಲಾಗಿದೆಯೋ ಅದಕ್ಕೆ ಬದ್ಧರಾಗಿರಬೇಕು. ಈ ಬಗ್ಗೆ ಅಬಕಾರಿ ಇಲಾಖೆಗೆ ಪತ್ರ ಬರೆಯಲಾಗಿದೆ. ಚುನಾವಣೆ ಸಂಬಂಧ ನಿಗಾ ಇಡಲು ಚರ್ಚೆ ನಡೆಯುತ್ತಿದೆ. ಸದ್ಯದಲ್ಲೇ ಅಂತರರಾಜ್ಯ ಅಪರಾಧ ತಡೆ ಸಂಬಂಧ ಪೊಲೀಸರ ಸಭೆ ನಡೆಯಲಿದೆ’ ಎಂದು ಹೇಳಿದರು.

ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ವಿಜಯಕುಮಾರ್‌. ಡಿವೈಎಸ್ಪಿ ಜಯಶಂಕರ್, ಕೋಲಾರ ನಗರ ಠಾಣೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಗೊರವಕೊಲ್ಲ, ಇನ್‌ಸ್ಪೆಕ್ಟರ್ ನವೀನ್ ಕುಮಾರ್, ಎಎಸ್‌ಐ ಶೇಖರ್‌, ರಮಾದೇವಿ, ಹೆಡ್‌ ಕಾನ್‌ಸ್ಟೆಬಲ್‌ಗಳಾದ ಶೇಖರ್, ಶಿವಕುಮಾರ್ , ಅಮರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT